ಕೊಣಾಜೆ ಪಂಚಾಯತ್ ವತಿಯಿಂದ ಉತ್ತಮ ಕೋವಿಡ್ ಕಾರ್ಯಪಡೆ ವಾರ್ಡ್ ಗೆ 50 ಸಾವಿರ ರೂ ಅನುದಾನ
ಕೊಣಾಜೆ : ಈಗಾಗಲೇ ಕೊಣಾಜೆ ಗ್ರಾಮದ ಪ್ರತೀ ವಾರ್ಡ್ ನಲ್ಲೂ ಕೋವಿಡ್ ಕಾರ್ಯಪಡೆಯನ್ನು ರಚಿಸಿ ಕಾರ್ಯೋನ್ಮುಖವಾಗಿದ್ದು, ಆಯಾ ವಾರ್ಡ್ ನ ಕಾರ್ಯಪಡೆಯನ್ನು ಉತ್ತೇಜಿಸುವ , ಕೊರೊನವನ್ನು ಸಮರ್ಥವಾಗಿ ನಿರ್ವಹಿಸುವ ಉದ್ದೇಶದಿಂದ ಉತ್ತಮವಾಗಿ ಕಾರ್ಯ ನಿರ್ವಹಿಸುವ ಕಾರ್ಯಪಡೆ ಇರುವ ವಾರ್ಡ್ ನ ಅಭಿವೃದ್ಧಿಗಾಗಿ ಪಂಚಾಯಿತಿ ವತಿಯಿಂದ ಹೆಚ್ಚುವರಿ 50 ಸಾವಿರದ ಅನುದಾನದ ಪ್ಯಾಕೇಜ್ ನೀಡಲಾಗುವುದು ಎಂದು ಪಂಚಾಯಿತಿ ಅಧ್ಯಕ್ಷರಾದ ಚಂಚಲಾಕ್ಷಿ ಅವರು ಘೋಷಣೆ ಮಾಡಿದ್ದಾರೆ.
ಕೊಣಾಜೆ ಗ್ರಾಮ ಪಂಚಾಯಿತಿ ವತಿಯಿಂದ ಕೊಣಾಜೆ ಗ್ರಾಮದಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬಗಳಿಗೆ ಶುಕ್ರವಾರ ಆಹಾರ ಕಿಟ್ ವಿತರಿಸಿ ಅವರು ಮಾತನಾಡಿದರು.
ಈಗಾಗಲೇ ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಗ್ರಾಮದಲ್ಲಿ ಕೋವಿಡ್ ಕಾರ್ಯಪಡೆಗಳನ್ನು ರಚಿಸಿಕೊಂಡು ಕೊರೋನ ನಿಯಂತ್ರಣ ಹಾಗೂ ತಡೆಗಟ್ಟಲು ವ್ಯವಸ್ಥೆ ಮಾಡಲಾಗಿದೆ. ಇದರಿಂದಾಗಿ ಗ್ರಾಮದಲ್ಲಿ ಈ ಮೊದಲು 208 ಸಕ್ರಿಯ ಪ್ರಕರಣಗಳಿದ್ದು ಇದೀಗ 52 ಪ್ರಕರಣ ಗಳಿಗೆ ಇಳಿದಿದ್ದು, ಒಟ್ಟಿನಲ್ಲಿ ಕೊಣಾಜೆಯನ್ನು ಕೊರೊನ ಮುಕ್ತ ಗ್ರಾಮವನ್ನಾಗಿ ಮಾಡುವುದು ನಮ್ಮೆಲ್ಲರ ಗುರಿಯಾಗಿದೆ ಎಂದರು.
ಕೊರೋನ ಸೋಂಕಿತರು ಮತ್ತು ಕ್ವಾರೈಂಟನ್ ನಲ್ಲಿ ಇರುವವರಿಗೆ ಔಷದ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆಗೆ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು ಹಾಗೂ ಕೋವಿಡ್ ಕಾರ್ಯಪಡೆಯು ಶ್ರಮಿಸುತ್ತಿದೆ. ಅಲ್ಲದೆ ಮನೆಯಲ್ಲಿ ಇರಲು ತೊಂದರೆಯಾಗುವ ಸೋಂಕಿತರಿಗೆ ಕೊಣಾಜೆ ಹಾಸ್ಟೆಲ್ ನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.ಅಲ್ಲದೆ ಕೊರೋನ ಸೋಂಕಿತರು ಅಡ್ಡಾದಿಡ್ಡಿಯಾಗಿ ತಿರುಗುವುದನ್ನು ತಪ್ಪಿಸಲು ಸೋಂಕಿತರ ಮನೆಗೆ ನೋಟಿಸ್ ಹಚ್ಚಲಾಗುವುದು ಎಂದರು. ಇದೀಗ ಈ ಕೊರೋನ ಸಂಕಷ್ಟ ಕಾಲದಲ್ಲಿ ಗ್ರಾಮದಲ್ಲಿರುವ 40 ಪರಿಶಿಷ್ಟ ಜಾತಿ ಪಂಗಡದ ಬಡ ಕುಟುಂಬಗಳಿಗೆ ಪಂಚಾಯಿತಿ ವತಿಯಿಂದ 25 ಕೆಜಿ ಅಕ್ಕಿ ಸೇರಿದಂತೆ ದಿನಸಿ ವಸ್ತುಗಳನ್ನು ವಿತರಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕೊಣಾಜೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಮಕೃಷ್ಟ ಪಟ್ಟೋರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸವಿತಾ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ರವಿ ದಡಸ್, ಪಂಚಾಯಿತಿ ಸದಸ್ಯರಾದ ಅಚ್ಯುತಗಟ್ಟಿ, ಇಕ್ಬಾಲ್, ದೇವಣ್ಣ ಶೆಟ್ಟಿ, ವೇದಾವತಿ ಗಟ್ಟಿ ಮೊದಲಾದವರು ಉಪಸ್ಥಿತರಿದ್ದರು.