ರಾಜಪ್ರಭುತ್ವ ರದ್ದತಿಗೆ ಬ್ರಿಟಿಶ್ ಯುವಜನರ ಒಲವು

Update: 2021-05-21 17:35 GMT

   ಲಂಡನ್,ಮೇ 21: ಅರಸೊತ್ತಿಗೆಯನ್ನು ಉಳಿಸಿಕೊಳ್ಳಲು ಬ್ರಿಟನ್ನ ಯುವಜನತೆ ಇಚ್ಛಿಸುತ್ತಿಲ್ಲ ಹಾಗೂ ದೇಶಕ್ಕೆ ಚುನಾಯಿತ ವರಿಷ್ಠನಿರಬೇಕೆಂದು ಅವರು ಬಯಸು ತ್ತಿದ್ದಾರೆಂದು ಶುಕ್ರವಾರ ಪ್ರಕಟವಾದ ಜನಾಭಿಪ್ರಾಯ ಸಮೀಕ್ಷೆಯೊಂದು ತಿಳಿಸಿದೆ. ಬ್ರಿಟನ್ ನಲ್ಲಿ ರಾಜಪ್ರಭುತ್ವ ಕೊನೆಯಾಗಬೇಕೆಂದು ಬಯಸುವವರ ಸಂಖ್ಯೆ ಕಳೆದ ಎರಡು ವರ್ಷಗಳಲ್ಲಿ ಬಹಳಷ್ಟು ಹೆಚ್ಚಾಗಿದೆಯೆಂದು ಅದು ಹೇಳಿದೆ.

  
ಯು ಗೌ ಸಂಸ್ಥೆ ನಡೆಸಿದ ಈ ಸಮೀಕ್ಷೆಯಲ್ಲಿ ಪಾಲ್ಗೊಂಡ 18ರಂದ 24 ವರ್ಷದೊಳಗಿನ ಶೇ.41 ಮಂದಿ ಬ್ರಿಟಿಶ್ ಯುವಜನರು ದೇಶಕ್ಕೆ ಚುನಾಯಿತನಾದ ವರಿಷ್ಠನಿರಬೇಕೆಂದು ಬಯಸಿದ್ದಾರೆ. ಶೇ.31 ಮಂದಿ ಯುವಜನರು ಮಾತ್ರ ರಾಜಪ್ರಭುತ್ವ ಮುಂದುವರಿಯಲು ಒಲವು ವ್ಯಕ್ತಪಡಿಸಿದ್ದಾರೆ.
ಆದಾಗ್ಯೂ ಎಲ್ಲಾ ವಯಸ್ಕರನ್ನು ಒಳಗೊಂಡ ಒಟ್ಟು ಜನಾಭಿಪ್ರಾಯ ಸಮೀಕ್ಷೆಯನ್ನು ತೆಗೆದುಕೊಂಡಲ್ಲಿ ಶೇ.61 ಮಂದಿ ಈಗಲೂ ಅರಸೊತ್ತಿಗೆಯ ಪರವಾಗಿದ್ದಾರೆ. ಶೇ.25ರಷ್ಟು ಮಂದಿ ಮಾತ್ರ ರಾಜಪ್ರಭುತ್ವದ ಬದಲಿಗೆ ಬ್ರಿಟನ್ನಲ್ಲಿ ಚುನಾಯಿತ ವರಿಷ್ಠನನ್ನು ಬಯಸಿದ್ದಾರೆ.

 4870 ವಯಸ್ಕರು ಪಾಲ್ಗೊಂಡಿದ್ದ ಈ ಸಮೀಕ್ಷೆಯಲ್ಲಿ 25ರಿಂದ 49 ವರ್ಷದೊಳಗಿನ ಶೇ.53 ಮಂದಿ ರಾಜಪ್ರಭುತ್ವವನ್ನು ಬೆಂಬಲಿಸಿದ್ದು, ಇದು 2019ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ದೊರೆತ ಅಂಕಗಳಿಗಿಂತ ಶೇ.5ರಷ್ಟು ಕಡಿಮೆಯಾಗಿದೆ. ಅದೇ ರೀತಿ ದೇಶಕ್ಕೆ ಚುನಾಯಿತ ವರಿಷ್ಠ ಬೆಂಬಲಿಸುವರ ಸಂಖ್ಯೆಯಲ್ಲಿ ಶೇ.4 ರಷ್ಟು ಹೆಚ್ಚಳವಾಗಿದೆ.

 ಎರಡು ವರ್ಷಗಳ ಹಿಂದೆ ಈ ಬಗ್ಗೆ ನಡೆಸಲಾದ ಸಮೀಕ್ಷೆಯಲ್ಲಿ ಹೆಚ್ಚಿನ ಯುವನರು ರಾಜಪ್ರಭುತ್ವಕ್ಕೆ ಒಲವು ವ್ಯಕ್ತಪಡಿಸಿದ್ದರು. ಆದರೆ ಈ ಸಲದ ಸಮೀಕ್ಷೆಯಲ್ಲಿ ಅದು ತಿರುವುಮುರುವಾಗಿದೆ. 2019ರಲ್ಲಿ ನಡೆದ ಸಮೀಕ್ಷೆಯಲ್ಲಿ ಶೇ.46ರಷ್ಟು ಮಂದಿ ಯುವಜನರು ರಾಜಪ್ರಭುತ್ವವಿರಬೇಕೆಂದು ಬಯಸಿದ್ದರೆ, ಶೇ.26 ಮಂದಿ ಅರಸೊತ್ತಿಗೆ ರದ್ದತಿಗೆ ಒಲವು ವ್ಯಕ್ತಪಡಿಸಿದ್ದರು.
ರಾಜಪ್ರಭುತ್ವದ ಬಗ್ಗೆ ಈ ಹಿಂದೆ ನಡೆಸಲಾದ ಸಮೀಕ್ಷೆಯೊಂದರಲ್ಲಿ ಅರಸೊತ್ತಿಗೆಯನ್ನು ತ್ಯಜಿಸಿದ ರಾಜಕುಮಾರ ಹ್ಯಾರಿ ಹಾಗೂ ಮೆಗಾನ್ ದಂಪತಿಗೆ ಯುವಜನತೆ ಬೆಂಬಲ ವ್ಯಕ್ತಪಡಿಸಿದ್ದರೆ, ಹಳೆಯ ತಲೆಮಾರಿನವರು ಅವರ ಬಗ್ಗೆ ನಕಾರಾತ್ಮಕ ಭಾವನೆಗಳನ್ನು ಹೊಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News