×
Ad

​ಚೀನಾದ ಎರಡು ಪ್ರಾಂತ್ಯಗಳಲ್ಲಿ ಪ್ರಬಲ ಭೂಕಂಪ

Update: 2021-05-22 09:27 IST

ಬೀಜಿಂಗ್ : ಸರಣಿ ಪ್ರಬಲ ಭೂಕಂಪಗಳು ವಾಯವ್ಯ ಮತ್ತು ಆಗ್ನೇಯ ಚೀನಾದ ಜನಜೀವನವನ್ನು ಅಲ್ಲೋಲ ಕಲ್ಲೋಲಗೊಳಿಸಿವೆ. ತಕ್ಷಣಕ್ಕೆ ಇಬ್ಬರು ಮೃತಪಟ್ಟಿರುವ ವರದಿಗಳು ಬಂದಿವೆ ಎಂದು ಸರ್ಕಾರ ಪ್ರಕಟಿಸಿದೆ.

ವಾಯವ್ಯ ಚೀನಾದ ಖ್ವಿಂಗಿ ಪ್ರಾಂತ್ಯ ಮತ್ತು ನೈರುತ್ಯ ಚೀನಾದ ಟಿಬೇಟ್ ಪ್ರಸ್ಥಭೂಮಿ ಹಾಗೂ ಯುನ್ನನ್ ಪ್ರಾಂತ್ಯದಲ್ಲಿ ಭೂಕಂಪಗಳು ಸಂಭವಿಸಿವೆ. ಎರಡೂ ವ್ಯಾಪಕ ಹಾನಿಗೆ ಕಾರಣವಾಗುವ ಸ್ವರೂಪದ ಭೂಕಂಪಗಳು ಎಂದು ಭೂಕಂಪ ಶಾಸ್ತ್ರಜ್ಞರು ಹೇಳಿದ್ದರೆ.

ಶುಕ್ರವಾರ ರಾತ್ರಿ 9.48ರ ಸುಮಾರಿಗೆ ಯುನ್ನನ್‌ನ ಪ್ರವಾಸಿ ತಾಣವಾಗಿರುವ ದಲಿ ನಗರದಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಜಿಯಾಲಾಜಿಕಲ್ ಸರ್ವೇ ಹೇಳಿಕೆ ನೀಡಿದೆ. ಇದಾದ ಬಳಿಕ ಮತ್ತೆ ಎರಡು ಬಾರಿ ಕಂಪನ ಸಂಭವಿಸಿತ್ತು. ಪರ್ವತ ಪ್ರದೇಶದಲ್ಲಿ ಇಬ್ಬರು ಮೃತಪಟ್ಟಿರುವುದು ದೃಢಪಟ್ಟಿದೆ. 22 ಮಂದಿ ಗಾಯಗೊಂಡಿದ್ದಾರೆ ಎಂದು ಸರ್ಕಾರದ ಸುದ್ದಿಸಂಸ್ಥೆ ಕ್ಸಿನ್‌ಹುವಾ ವರದಿ ಮಾಡಿದೆ.

ಇದಾಗಿ ಕೆಲ ಗಂಟೆಗಳ ಬಳಿಕ 1200 ಕಿಲೋಮೀಟರ್ ದೂರದಲ್ಲಿ ರಿಕ್ಟರ್ ಮಾಪಕದಲ್ಲಿ 7.3 ತೀವ್ರತೆ ಹೊಂದಿದ್ದ ಮತ್ತೊಂದು ಭೂಕಂಪ ಸಂಭವಿಸಿದೆ. ಚೀನಾದ ಜನನಿಬಿಡ ಪ್ರದೇಶವೆನಿಸಿದ ಖ್ವಿಂಗಿ ಪ್ರಾಂತ್ಯದಲ್ಲಿ ಈ ಭೂಕಂಪ ಸಂಭವಿಸಿದೆ. ಸಾವು ನೋವಿನ ಬಗ್ಗೆ ತಕ್ಷಣಕ್ಕೆ ವರದಿಗಳು ಬಂದಿಲ್ಲ. ಈ ಭೂಕಂಪದ ಕೇಂದ್ರ ಮದುವೊ ಕೌಂಟಿಯಲ್ಲಿತ್ತು ಎಂದು ಕ್ಸಿನ್‌ಹುವಾ ವರದಿ ಮಾಡಿದ್ದು, ಕೆಲ ಮನೆಗಳಿಗಷ್ಟೇ ಹಾನಿಯಾಗಿದೆ ಎಂದು ಹೇಳಲಾಗಿದೆ. ಎರಡೂ ಕಡೆಗಳಿಗೆ ತುರ್ತು ಪರಿಹಾರ ಪಡೆಗಳನ್ನು ಕಳುಹಿಸಲಾಗಿದೆ ಎಂದು ಸರ್ಕಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News