ಸಂಸತ್ತನ್ನು ವಿಸರ್ಜಿಸಿದ ನೇಪಾಳ ಅಧ್ಯಕ್ಷರು, ನವೆಂಬರ್ ನಲ್ಲಿ ಹೊಸ ಚುನಾವಣೆ
ಠ್ಮಂಡು (ನೇಪಾಳ), ಮೇ 22: ನೇಪಾಳ ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಸಂಸತ್ತನ್ನು ವಿಸರ್ಜಿಸಿದ್ದು, ದೇಶವು ಇನ್ನೊಂದು ರಾಜಕೀಯ ಬಿಕ್ಕಟ್ಟಿಗೆ ಸಿಲುಕಿಕೊಂಡಿದೆ. ನವೆಂಬರ್ ತಿಂಗಳಿನಲ್ಲಿ ಸಂಸತ್ತಿಗೆ ಚುನಾವಣೆ ನಡೆಯಲಿರುವುದು ಎಂದು ಅವರು ಘೋಷಿಸಿದ್ದಾರೆ.
ಅಧ್ಯಕ್ಷರು ವಿಧಿಸಿದ ಶುಕ್ರವಾರದ ಗಡುವಿನೊಳಗೆ ಉಸ್ತುವಾರಿ ಪ್ರಧಾನಿ ಕೆ.ಪಿ. ಶರ್ಮ ಒಲಿಗಾಗಲಿ, ಪ್ರತಿಪಕ್ಷ ನಾಯಕ ಶೇರ್ ಬಹಾದುರ್ ದೇವುಬಾಗಾಗಲಿ ಹೊಸ ಸರಕಾರ ರಚಿಸಲು ಬೇಕಾಗುವಷ್ಟು ಬಹುಮತವನ್ನು ಪ್ರದರ್ಶಿಸಲು ಸಾಧ್ಯವಾಗಿಲ್ಲ ಎಂಬುದಾಗಿ ಅಧ್ಯಕ್ಷೀಯ ಹೇಳಿಕೆಯೊಂದು ತಿಳಿಸಿದ ಬಳಿಕ ಈ ಅಚ್ಚರಿಯ ಬೆಳವಣಿಗೆ ನಡೆದಿದೆ.
‘‘ಅಧ್ಯಕ್ಷರು ಹೌಸ್ ಆಫ್ ರೆಪ್ರೆಸೆಂಟೇಟಿವ್ಸನ್ನು ವಿಸರ್ಜಿಸಿದ್ದಾರೆ ಹಾಗೂ ನವೆಂಬರ್ನಲ್ಲಿ ಚುನಾವಣೆ ನಡೆಸುವಂತೆ ಆದೇಶ ನೀಡಿದ್ದಾರೆ. ಮೊದಲ ಹಂತದ ಚುನಾವಣೆ ನವೆಂಬರ್ 12ರಂದು ನಡೆದರೆ, ನವೆಂಬರ್ 19ರಂದು ಎರಡನೇ ಹಂತದ ಚುನಾವಣೆ ನಡೆಯುವುದು’’ ಎಂದು ಶುಕ್ರವಾರ ಮಧ್ಯರಾತ್ರಿಯ ಬಳಿಕ ಹೊರಡಿಸಲಾದ ಅಧ್ಯಕ್ಷೀಯ ಹೇಳಿಕೆ ತಿಳಿಸಿದೆ.
ಉಸ್ತುವಾರಿ ಪ್ರಧಾನಿ ಒಲಿ ನೇತೃತ್ವದ ಸಚಿವ ಸಂಪುಟದ ಶಿಫಾರಸಿನಂತೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅದು ಹೇಳಿದೆ.
ಪ್ರಧಾನಿ ಒಲಿ ಶಿಫಾರಸಿನಂತೆ 2020 ಡಿಸೆಂಬರ್ನಲ್ಲೂ ನೇಪಾಳ ಸಂಸತ್ತನ್ನು ವಿಸರ್ಜಿಸಲಾಗಿತ್ತು. ಆ ನಿರ್ಧಾರದ ವಿರುದ್ಧ ಪ್ರತಿಪಕ್ಷಗಳು ವಾರಗಳ ಕಾಲ ಪ್ರತಿಭಟನೆ ನಡೆಸಿದ್ದವು. ಅಂತಿಮವಾಗಿ ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಸಂಸತ್ ವಿಸರ್ಜನೆಯನ್ನು ಅಸಾಂವಿಧಾನಿಕ ಎಂದು ಬಣ್ಣಿಸಿದ ಸುಪ್ರೀಂ ಕೋರ್ಟ್ ಆ ನಿರ್ಧಾರವನ್ನು ರದ್ದುಪಡಿಸಿತ್ತು.