×
Ad

‘ನಮ್ಮ ಕುಟುಂಬ, ಸಿಬ್ಬಂದಿ ಕಡೆಗೂ ಗಮನ ಹರಿಸಿ’ ಧ್ವನಿಬೆಳಕು, ಫೋಟೋಗ್ರಾಫರ್ಸ್ ಸಂಘಗಳಿಂದ ಸರಕಾರಕ್ಕೆ ಆಗ್ರಹ

Update: 2021-05-22 15:04 IST

ಮಂಗಳೂರು, ಮೇ 22: ‘‘ನಮಗೂ ಕುಟುಂಬವಿದೆ. ನಮ್ಮ ಸಂಸ್ಥೆಗಳಲ್ಲಿ ದುಡಿಯುವ ಸಾವಿರಾರು ಸಂಖ್ಯೆಯ ಸಿಬ್ಬಂದಿಯಿದ್ದಾರೆ. ಅವರ ಕುಟುಂಬವಿದೆ. ನಮಗೆ ಯಾವುದೇ ಪರ್ಯಾಯ ಉದ್ಯೋಗವಿಲ್ಲದೆ ನಾವೆಲ್ಲಾ ಕಂಗಾಲಾಗಿದ್ದೇವೆ. ಕಳೆದ ಬಾರಿಯೂ ಲಾಕ್‌ಡೌನ್ ಸಂದರ್ಭ ನಮಗೆ ಯಾವುದೇ ರೀತಿಯ ಪರಿಹಾರ ನೀಡಿಲ್ಲ. ಈ ಬಾರಿಯೂ ನಮ್ಮ ನಿರೀಕ್ಷೆ ಹುಸಿಯಾಗಿದೆ’’.ಇದು ದ.ಕ. ಜಿಲ್ಲಾ ಧ್ವನಿಬೆಳಕು, ಫೋಟೋಗ್ರಾಫರ್ಸ್, ಕ್ಯಾಟರಿಂಗ್, ಶಾಮಿಯಾನ ಮಾಲಕರ ಸಂಘಗಳ ಮುಖ್ಯಸ್ಥರ ಅಳಲು.

ನಗರದಲ್ಲಿಂದು ಜಂಟಿ ಮೂಲಕ ತಮ್ಮ ಅಳಲನ್ನು ತೋಡಿಕೊಂಡ ಈ ಸಂಘಟನೆಗಳ ಮುಖ್ಯಸ್ಥರು ತಮಗೂ ಸರಕಾರ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿದರು.

‘ನಮಗೆ ವ್ಯವಹಾರ ಸೀಸನ್ ಇರುವುದೇ ಮುಖ್ಯವಾಗಿ ಜನವರಿಯಿಂದ ಮೇ ಅವಧಿಯಲ್ಲಿ. ಇದೇ ಅವಧಿಯಲ್ಲಿ ಕಳೆದ ವರ್ಷವೂ ಲಾಕ್‌ ಡೌನ್‌ನಿಂದ ನಮ್ಮ ಕುಟುಂಬಗಳು ಸಂಕಷ್ಟಕ್ಕೀಡಾಗಿತ್ತು. ನಮ್ಮ ಜತೆ ನಮ್ಮನ್ನೇ ಆಶ್ರಯಿಸಿಕೊಂಡಿರುವ ನಮ್ಮ ಸಿಬ್ಬಂದಿ ಹಾಗೂ ಅವರ ಕುಟುಂಬದವರೂ ತೊಂದರೆಗೀಡಾಗಿದ್ದಾರೆ. ಈ ಬಾರಿ ಮತ್ತಷ್ಟು ಸಂಕಷ್ಟದ ದಿನಗಳನ್ನು ನಾವು ಹಾಗೂ ನಮ್ಮವರು ಎದುರಿಸುತ್ತಿದ್ದಾರೆ ’’ಎಂದು ಧ್ವನಿಬೆಳಕು ಮಾಲಕರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಹೇಳಿದರು.

‘‘ಕಳೆದ ವರ್ಷ ನಮಗೆ ಸರಕಾರದಿಂದ ಯಾವುದೇ ಪರಿಹಾರ ದೊರಕಿಲ್ಲ. ಈ ಬಾರಿಯಾದರೂ ಸರಕಾರದ ಪ್ಯಾಕೇಜ್‌ನಲ್ಲಿ ನಮಗೂ ಒಂದಿಷ್ಟು ಪರಿಹಾರ ಸಿಗುವ ನಿರೀಕ್ಷೆ ಇತ್ತಾದರೂ ಅದು ಹುಸಿಯಾಗಿದೆ’’ ಎಂದು ಸಂಘದ ಮಂಗಳೂರು ವಲಯ ಅಧ್ಯಕ್ಷ ವೆಂಕಟ್ರಾಯ ಪೈ ಅಸಮಾಧಾನ ವ್ಯಕ್ತಪಡಿಸಿದರು.‘‘ಫೋಟೋಗ್ರಾಫರ್‌ಗಳಿಗೆ ವರ್ಷದಲ್ಲಿ ಕೆಲಸ ಸಿಗುವುದೇ ಫೆಬ್ರವರಿಯಿಂದ ಮೇ ವರೆಗಿನ ನಾಲ್ಕೈದು ತಿಂಗಳು. ಕಳೆದ ವರ್ಷದಿಂದ ಲಾಕ್‌ಡೌನ್‌ನಿಂದ ನಾವು ತತ್ತರಿಸಿದ್ದೇವೆ. ತಂತ್ರಜ್ಞಾನದ ಈ ಯುಗದಲ್ಲಿ ಬಹಳಷ್ಟು ಮಂದಿ ಸಾಕಷ್ಟು ಬ್ಯಾಂಕ್ ಸಾಲ ಮಾಡಿ ಹೊಸ ವ್ಯವಸ್ಥೆಯನ್ನು ಅಳವಡಿಸಿಕೊಂಡು ಕೈ ಸುಟ್ಟುಕೊಂಡಿದ್ದೇವೆ. ಆದರೆ ಸರಕಾರ ಕನಿಷ್ಠ ಪ್ಯಾಕೇಜ್‌ನಿಂದಲೂ ನಮ್ಮನ್ನು ಕೈಬಿಟ್ಟಿದೆ ಎಂದು ಸೌತ್ ಕೆನರಾ ಫೊಟೊ್ಟ್ರೂಾಫರ್ಸ್ ಅಸೋಸಿಯೇಶನ್ ಅಧ್ಯಕ್ಷ ಶ್ರೀಧರ್ ಶೆಟ್ಟಿಗಾರ್ ಬೇಸರಿಸಿದರು.

‘‘ನಮಗೂ ಕುಟುಂಬ ಇದೆ. ಸಿಬ್ಬಂದಿಗಳಿದ್ದಾರೆ. ಅವರಿಗೆ ನಾವು ಹೇಗೆ ವೇತನ ನೀಡುವುದು. ಅವರು ಕುಟುಂಬ ಸಾಗಿಸುವುದು ಹೇಗೆ. ಇದರ ಜತೆಯಲ್ಲೇ ಬ್ಯಾಂಕ್‌ನಿಂದ ಪಡೆದ ಸಾಲ ಮರು ಪಾವತಿಗೆ ಸಾಧ್ಯವಾಗದೆ ಒದ್ದಾಡುತ್ತಿದ್ದೇವೆ’’ ಎಂದು ಶಾಮಿಯಾನ ಮಾಲಕರ ಸಂಘದ ಗೌರವ ಅಧ್ಯಕ್ಷ ಭಾಸ್ಕರ ಬೇಸರ ತೋಡಿಕೊಂಡರು.

ಕ್ಯಾಟರಿಂಗ್ ಮಾಲಕರ ಸಂಘದ ಅಧ್ಯಕ್ಷ ಅನೀಸ್ ಮಾತನಾಡಿ, ಮಂಗಳೂರಿನಲ್ಲಿಯೇ ನಮ್ಮ 120 ಮಂದಿ ನೋಂದಾಯಿತ ಸದಸ್ಯರು ಹಾಗೂ ಇವರಡಿ 1200 ಮಂದಿ ಖಾಯಂ ಉದ್ಯೋಗಿಳಿದ್ದಾರೆ. ಜಿಎಸ್‌ಟಿ, ಬ್ಯಾಂಕ್ ಇಎಂಐ ಇವೆಲ್ಲದರ ನಡುವೆ ವ್ಯವಹಾರ ಅತಂತ್ರದಲ್ಲಿರುವಾಗಲೇ ಈ ಲಾಕ್‌ಡೌನ್ ನಮಗೆ ಏನೂ ಇಲ್ಲದಂತೆ ಮಾಡಿದೆ ಎಂದು ಹೇಳಿದರು.

ಶ್ಯಾಮಿಯಾನ ಸಂಘದಡಿ ಮಂಗಳೂರು ಘಟಕದಲ್ಲಿ ನೋಂದಾಯಿಸಿಕೊಂಡವರ ಸಂಖ್ಯೆ 247 ಆಗಿದ್ದು, ಇವರಡಿ 1400ಕ್ಕೂ ಅಧಿಕ ಮಂದಿ ಉದ್ಯೋಗಸ್ಥರಿದ್ದಾರೆ. ಧ್ವನಿ ಬೆಳಕು ಸಂಘದಡಿ 300 ಮಂದಿ ನೋಂದಾಯಿತ ಮಾಲಕರಿದ್ದರೆ, ನೋಂದಾವಣೆ ಆಗದವರು 600ಕ್ಕೂ ಅಧಿಕ ಮಂದಿ ಇದ್ದಾರೆ ಇವರಡಿ 3500ಕ್ಕೂ ಮಂದಿ ಕೆಲಸಕ್ಕಿದ್ದಾರೆ. ಫೋಟೋಗ್ರಾಫರ್ಸ್ ದ.ಕ. ಮತ್ತು ಉಡುಪಿ ಅಸೋಸಿಯೇಶನಡಿ 3826 ಸದಸ್ಯರಿದ್ದು, ಮಂಗಳೂರು ವಲಯದಲ್ಲಿಯೇ 450 ಮಂದಿ ಸದಸ್ಯರಿದ್ದಾರೆ ಎಂದು ಧ್ವನಿ ಬೆಳಕು ಸಂಘದ ಪ್ರಮುಖರಾದ ಡಿ.ಜೆ. ಶ್ಯಾಮ್ ಮಾಹಿತಿ ನೀಡಿದರು.

ದ.ಕ. ಜಿಲ್ಲಾ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ಹರೀಶ್ ಅಡ್ಯಾರ್, ಶಾಮಿಯಾನ ಮಾಲಕರ ಸಂಘದ ಕ್ಲೇವರ್ ಡಿಸೋಜಾ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News