×
Ad

ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಬಿಲ್ : ಸೂಕ್ತ ಕ್ರಮಕ್ಕೆ ಆಗ್ರಹಿಸಿ ಡಿವೈಎಫ್‌ಐ ಮನೆ ಮನೆ ಪ್ರತಿಭಟನೆ

Update: 2021-05-22 19:46 IST

ಮಂಗಳೂರು, ಮೇ 22: ದ.ಕ.ಜಿಲ್ಲೆಯಲ್ಲಿ ಕೊರೋನ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳ ಶೇ. 50 ಬೆಡ್‌ಗಳಲ್ಲಿ ಉಚಿತ ಚಿಕಿತ್ಸೆಯ ಆದೇಶವನ್ನು ತಕ್ಷಣ ಜಾರಿಗೆ ತರುವಂತೆ, ಆಯುಷ್ಮಾನ್ ಯೋಜನೆಯಡಿ ಐಸಿಯು, ವೆಂಟಿಲೇಟರ್ ಬೆಡ್‌ಗಳಲ್ಲಿ ಉಚಿತ ಚಿಕಿತ್ಸೆ ನೀಡಲು ನಿರಾಕರಿಸುವ, ಸರಕಾರ ನಿಗದಿ ಪಡಿಸಿದ ದರವನ್ನು ಮೀರಿ ಕೊರೋನ ರೋಗಿಗಳಿಗೆ ದುಬಾರಿ ಬಿಲ್ ವಿಧಿಸುವ ಖಾಸಗಿ ಆಸ್ಪತ್ರೆಗಳ ಮೇಲೆ ಕೆಪಿಎಂಇ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಆಗ್ರಹಿಸಿ ದ.ಕ.ಜಿಲ್ಲಾದ್ಯಂತ ಡಿವೈಎಫ್‌ಐ ಕಾರ್ಯಕರ್ತರು, ಮುಖಂಡರಿಂದ ಶನಿವಾರ ಮನೆ ಮನೆ ಪ್ರತಿಭಟನೆ ನಡೆಯಿತು.

ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಪಳ್ಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಬಜಾಲ್, ಜಿಲ್ಲೆಯ ಒಂದು ಸಾವಿರಕ್ಕೂ ಅಧಿಕ ಮಂದಿ ತಮ್ಮ ಮನೆಯ ಮುಂದೆ ಭಿತ್ತಿ ಪತ್ರ ಪ್ರದರ್ಶಿಸಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೊರೋನ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಶೇ. 50 ಬೆಡ್‌ಗಳನ್ನು ಸರಕಾರಿ ಕೋಟಾದಡಿ ಮೀಸಲಿಟ್ಟು ಉಚಿತ ಚಿಕಿತ್ಸೆ ನೀಡುವುದಾಗಿ ದ.ಕ. ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಆದರೆ ಅದಿನ್ನೂ ಜಾರಿಗೆ ಬಂದಿಲ್ಲ. ಕೇವಲ ವೆನ್ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ಮಾತ್ರ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಸರಕಾರವೇ ನಿಗದಿ ಪಡಿಸಿದ ದುಬಾರಿ ದರ ಪಟ್ಟಿಯಡಿ ಚಿಕಿತ್ಸೆ ಪಡೆಯುವ ಅನಿವಾರ್ಯ ಸ್ಥಿತಿಗೆ ಕೊರೋನ ಸೋಂಕಿತರನ್ನು ದೂಡಲಾಗಿದೆ. ಖಾಸಗಿ ಆಸ್ಪತ್ರೆಗಳ ಐಸಿಯು, ವೆಂಟಿಲೇಟರ್ ಬೆಡ್‌ಗಳಲ್ಲಿ ಎಪಿಎಲ್, ಬಿಪಿಎಲ್ ತಾರತಮ್ಯವಿಲ್ಲದೆ ಆಯುಷ್ಮಾನ್‌ನಡಿ ಉಚಿತ ಚಿಕಿತ್ಸೆಯ ಆದೇಶ ಜಾರಿಯಾಗಿದ್ದರೂ ಕೂಡ ಕೆಲವು ಖಾಸಗಿ ಆಸ್ಪತ್ರೆಗಳು ಸುಳ್ಳು ಆಂಕಿ ಅಂಶಗಳನ್ನು ಬಳಸಿಕೊಂಡು ಆಯುಷ್ಮಾನ್‌ನಡಿ ಚಿಕಿತ್ಸೆ ನೀಡಲು ನಿರಾಕರಿಸುತ್ತಿವೆ ಎಂದು ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಆರೋಪಿಸಿದರು.

ಖಾಸಗಿ ಕೋಟಾದ ರೋಗಿಗಳಿಗೆ, ಆಯುಷ್ಮಾನ್ ಯೋಜನೆಯ ರೋಗಿಗಳಿಗೆ ಸರಕಾರ ನಿಗದಿ ಪಡಿಸಿದ ದರ ಮಾತ್ರವಲ್ಲದೆ ನಿಯಮ ಬಾಹಿರವಾಗಿ ಲಕ್ಷಾಂತರ ರೂಪಾಯಿ ಅಕ್ರಮ ಬಿಲ್ ವಿಧಿಸುವ, ದುಬಾರಿ ಔಷಧಿಗಳನ್ನು ಖರೀದಿಸುವಂತೆ ಬಲವಂತ ಮಾಡುವ ಘಟನೆಗಳು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಇದರಿಂದ ಕೊರೋನ ಸೋಂಕಿತ ರೋಗಿಗಳು ತೀರಾ ಸಂಕಷ್ಟದ ಸ್ಥಿತಿಗೆ ತಲುಪಿದ್ದಾರೆ. ಈ ಕುರಿತು ಹಲವು ದೂರುಗಳನ್ನು ನೀಡಿದ್ದರೂ ಖಾಸಗಿ ಆಸ್ಪತ್ರೆಗಳ ಚಾಳಿ ಮುಂದುವರಿದಿದೆ ಸಂತೋಷ್ ಬಜಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News