ಮಣಿಪಾಲ, ಮಂಗಳೂರು ಕೆಎಂಸಿಯಲ್ಲಿ ಹೆಚ್ಚುವರಿ ಆಕ್ಸಿಜನ್ ಘಟಕ
ಉಡುಪಿ, ಮೇ 22: ಪ್ರಸಕ್ತ ಕೋವಿಡ್ ಸೋಂಕಿನ ವ್ಯಾಪಕತೆ ಹಾಗೂ ಸಂಭವನೀಯ ಮೂರನೇ ಕೊರೋನ ಅಲೆಯನ್ನು ಗಮನದಲ್ಲಿಟ್ಟು ಮಣಿಪಾಲ ಕಸ್ತೂರ್‌ಬಾ ಆಸ್ಪತ್ರೆಯಲ್ಲಿ 1500 ಎಲ್‌ಪಿಎಂ ಸಾಮರ್ಥ್ಯದ ಆನ್-ಸೈಟ್ ಆಕ್ಸಿಜನ್ ಜನರೇಟರ್ ಹಾಗೂ ಮಂಗಳೂರಿನ ಅತ್ತಾವರ ದಲ್ಲಿರುವ ಕೆಎಂಸಿ ಆಸ್ಪತ್ರೆಯಲ್ಲಿ 500ಎಲ್‌ಪಿಎಂ ಸಾಮರ್ಥ್ಯ ಆನ್‌ಸೈಟ್ ಆಕ್ಸಿಜನ್ ಜನರೇಟರ್ ನ್ನು ಸ್ಥಾಪಿಸಲಾಗುತ್ತಿದೆ ಎಂದು ಈ ಕಾಲೇಜು ಆಸ್ಪತ್ರೆಗಳ ಪ್ರಾದೇಶಿಕ ಮುಖ್ಯ ನಿರ್ವಹಣಾಧಿಕಾರಿ ಸಿ.ಜಿ.ಮುತ್ತಣ್ಣ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿರುವ ಅವರು, ಇದರಿಂದ ಯಾವುದೇ ತುರ್ತು ಸಂದರ್ಭದಲ್ಲಿ ಯಾವುದೇ ಅಡೆತಡೆಗಳಿಲ್ಲದೇ ವೈದ್ಯಕೀಯ ಆಕ್ಸಿಜನ್‌ನ್ನು ಆಸ್ಪತ್ರೆಗಳಿಗೆ ಪೂರೈಸಲು ಸಾಧ್ಯವಾಗಲಿದೆ ಎಂದರು.
ಪ್ರಸ್ತುತ ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆಯನ್ನು ಭಾರತದಾದ್ಯಂತ ಅನುಭವಿಸಲಾಗುತ್ತಿದೆ. ಇದನ್ನು ಪರಿಗಣಿಸಿ, ಕೋವಿಡ್ ಸೋಂಕಿತ ರೋಗಿಗಳಿಗೆ ಮಣಿಪಾಲ ಕೆಎಂಸಿ ಹಾಗೂ ಅತ್ತಾವರ ಕೆಎಂಸಿಗಳಲ್ಲಿ ಎಲ್ಲಾ ವಿಧದ ಚಿಕಿತ್ಸೆಯನ್ನು ನೀಡುತ್ತಿರುವುದರಿಂದ ಈಗಿರುವ ಸೌಲಭ್ಯದ ಮರುಪೂರಣದ ಲಾಜಿಸ್ಟಿಕ್ ವ್ಯವಸ್ಥೆಯನ್ನು ಪುನರ್ ಪರಿಶೀಲಿಸಿ ಸಾಮರ್ಥ್ಯವನ್ನು ಹೆಚ್ಚಿಸುವ ನಿರ್ಧಾರಕ್ಕೆ ಬರಲಾಯಿತು ಎಂದವರು ಹೇಳಿದರು.
ಮಣಿಪಾಲದಲ್ಲಿರುವ ಕೆಎಂಸಿ ಆಸ್ಪತ್ರೆಯು 2032 ಹಾಸಿಗೆಗಳ ಆಸ್ಪತ್ರೆ ಯಾಗಿದ್ದು, ಇಲ್ಲಿ ಸಣ್ಣ ಶಸ್ತ್ರಚಿಕಿತ್ಸಾ ಕೊಠಡಿಗಳು ಸೇರಿದಂತೆ ಒಟ್ಟು 26 ಶಸ್ತ್ರಚಿಕಿತ್ಸಾ ಕೊಠಡಿಗಳು, 250 ಐಸಿಯು ಹಾಸಿಗೆಗಳು, 900 ಇತರ ಹಾಸಿಗೆ ಗಳಿಗೆ ಮತ್ತು ಎರಡು ಅಂಗ ಸಂಸ್ಥೆಗಳಿಗೆ ವೈದ್ಯಕೀಯ ಆಮ್ಲಜನಕ ಪೂರೈಸಲಾ ಗುತ್ತಿದೆ. ಕೋವಿಡ್ ಪ್ರಕರಣಗಳ ಹಠಾತ್ ಹೆಚ್ಚಳದಿಂದಾಗಿ ಆಮ್ಲಜನಕದ ದೈನಂದಿನ ಬಳಕೆ 2200 ಲೀಟರ್‌ಗೆ ಏರಿಕೆಯಾಗಿದೆ. ಇಲ್ಲದಿದ್ದರೆ ಸಾಮಾನ್ಯ ದಿನಗಳಲ್ಲಿ ದೈನಂದಿನ ಬಳಕೆ 1600 ಲೀಟರ್ ಆಗಿತ್ತು ಎಂದು ಕೆಎಂಸಿ ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.
ಮಣಿಪಾಲ ಕೆಎಂಸಿಯು 20,000 ಲೀಟರ್ ಸಾಮರ್ಥ್ಯದ ವೈದ್ಯಕೀಯ ಆಮ್ಲಜನಕ ಶೇಖರಣಾ ಟ್ಯಾಂಕ್‌ನ್ನು ಹೊಂದಿದೆ. ಇದನ್ನು ವಾರದಲ್ಲಿ ಎರಡು ಬಾರಿ 380 ಕಿ.ಮೀ. ದುರದ ಬಳ್ಳಾರಿಯಿಂದ ಕ್ರಯೋಜೆನಿಕ್ ಟ್ಯಾಂಕರ್ ಮೂಲಕ ಆಕ್ಸಿಜನ್ ತರಿಸಲಾಗುತ್ತದೆ. ಇದರಲ್ಲಿ ಎಲ್ಎಂಒ ಟ್ಯಾಂಕ್ ಒತ್ತಡ ಕುಸಿತದಿಂದಾಗಿ ಕೇವಲ 15,400 ಲೀ. ಮಾತ್ರ ಬಳಕೆಗೆ ಸಿಗುತ್ತದೆ. ಇದು ಏಳು ದಿನಗಳ ಅಗತ್ಯತೆಯನ್ನು ಪೂರೈಸುತ್ತದೆ. ಇದರೊಂದಿಗೆ ಮೀಸಲು ಆಗಿ 7ಕ್ಯು.ಮೀ.ಸಾಮರ್ಥ್ಯದ 121 ಜಂಬೋ ಸಿಲಿಂಡರ್‌ಗಳಿದ್ದು, ಇವುಗಳನ್ನು ಮುಲ್ಕಿ ಮತ್ತು ಕಾಪುವಿನಲ್ಲಿ ತುಂಬಿಸಲಾಗುತ್ತದೆ ಎಂದು ಡಾ.ಶೆಟ್ಟಿ ಹೇಳಿದರು.
ಮಂಗಳೂರು ಅತ್ತಾವರದ ಕೆಎಂಸಿ ಆಸ್ಪತ್ರೆ, 610 ಹಾಸಿಗೆಗಳ ಆಸ್ಪತ್ರೆಯಾ ಗಿದ್ದು, ಸಣ್ಣ ಶಸ್ತ್ರ ಚಿಕಿತ್ಸಾ ಕೊಠಡಿಗಳು ಸೇರಿದಂತೆ 10 ಶಸ್ತ್ರಚಿಕಿತ್ಸಾ ಕೊಠಡಿಗಳು, 44 ಐಸಿಯು ಹಾಸಿಗೆಗಳು, 113 ಇತರ ಹಾಸಿಗೆಗಳಿಗೆ ಮತ್ತು ಎರಡು ಅಂಗ ಸಂಸ್ಥೆಗಳಿಗೆ ವೈದ್ಯಕೀಯ ಆಮ್ಲಜನಕ ಪೂರೈಕೆಯಾಗುತ್ತಿದೆ. ಪ್ರಸ್ತುತ ಕೋವಿಡ್ ಪ್ರಕರಣಗಳ ಹೆಚ್ಚಳದಿಂದಾಗಿ ಇಲ್ಲಿ ಪ್ರತಿದಿನ ಸಾಮಾನ್ಯ ದಿನದ ಎರಡು ಪಟ್ಟು ಅಂದರೆ 600 ಲೀ. ಆಮ್ಲಜನಕದ ಬಳಕೆಯಾಗುತ್ತಿದೆ. ಆಸ್ಪತ್ರೆ 6000 ಲೀ. ಶೇಖರಣಾ ಟ್ಯಾಂಕ್‌ಹೊಂದಿದೆ. ಅಲ್ಲದೇ 42 ಜಂಬೋ ಸಿಲಿಂಡರ್‌ಗಳ ಮೀಸಲು ವ್ಯವಸ್ಥೆ ಇಲ್ಲಿದೆ ಎಂದು ಕೆಎಂಸಿ ಅತ್ತಾವರದ ವೈದ್ಯಕೀಯ ಅಧೀಕ್ಷಕ ಡಾ.ಜಾನ್ ಟಿ ರಾಮ್‌ಪುರೆ ತಿಳಿಸಿದ್ದಾರೆ.
ಮಣಿಪಾಲದಲ್ಲಿ 1500 ಎಲ್‌ಪಿಎಂ ಘಟಕದ ಸ್ಥಾಪನೆಗೆ 2.5 ಕೋಟಿ ರೂ. ಹಾಗೂ ಮಂಗಳೂರಿನಲ್ಲಿ 500ಎಲ್‌ಪಿಎಂ ಘಟಕದ ಸ್ಥಾಪನೆಗೆ 1.10 ಕೋಟಿ ರೂ. ವೆಚ್ಚವಾಗಲಿದೆ. ಇವುಗಳ ನಿರ್ಮಾಣ ಕಾಮಗಾರಿ ಮುಂದಿನ 4-5 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಕೋವಿಡ್‌ನಂಥ ಸಾಂಕ್ರಾಮಿಕದ ಸಮಯದಲ್ಲಿ ಸಾರ್ವಜನಿಕರಿಗೆ ಇನ್ನಷ್ಟು ಉತ್ತಮ ಸೇವೆ ನೀಡುವ ದೃಷ್ಟಿಯಿಂದ ಈ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಸಿ.ಜಿ.ಮುತ್ತಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.