ಶಿರೂರು : ಕೋರೋನ ಸೋಂಕಿತರ ಮನೆಗಳಿಗೆ ಉಡುಪಿ ಡಿಸಿ ಭೇಟಿ
ಬೈಂದೂರು, ಮೇ 22: ಶಿರೂರು ಭಾಗದ ಕೋಟೆಮನೆ, ನಾಗಿನಗದ್ದೆ ಪ್ರದೇಶದಲ್ಲಿರುವ ಕೋರೋನಾ ಸೋಂಕಿತರ ಮನೆಗಳಿಗೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಶನಿವಾರ ಭೇಟಿ ನೀಡಿ, ಆರೋಗ್ಯ ವಿಚಾರಿಸಿ ಮನೆಯವರಿಗೆ ಧೈರ್ಯ ತುಂಬಿದರು.
‘ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ದಿನದಿಂದ ದಿನಕ್ಕೆ ಸೋಂಕು ಹೆಚ್ಚುತ್ತಿರುವುದ ರಿಂದ ಅದನ್ನು ಎದುರಿಸಲು ಗ್ರಾಮ ಮಟ್ಟದಲ್ಲಿನ ಸಿದ್ಧತೆ ಕುರಿತು ಪರಿಶೀಲನೆ ಮತ್ತು ಸೋಂಕಿತರನ್ನು ಧೈರ್ಯ ತುಂಬಲು ಖುದ್ದಾಗಿ ಮನೆಗಳಿಗೆ ಭೇಟಿ ನೀಡು ತ್ತಿದ್ದೇನೆ. ಇನ್ನೂ ಸೋಂಕಿತರಿಗೆ ಆಕ್ಸಿಜನ್ ಸೇರಿದಂತೆ ಅಗತ್ಯವಿರುವ ಎಲ್ಲ ಚಿಕಿತ್ಸೆ ತಕ್ಷಣದಲ್ಲಿ ದೊರೆಯುವಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಜನರು ಯಾವುದೇ ಆತಂಕ ಪಡುವ ಅವಶ್ಯಕತೆಯಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕೋರೋನಾ ಸೋಂಕಿತರು ಮನೆಯಲ್ಲಿ ಸರಿಯಾದ ಚಿಕಿತ್ಸೆ ಪಡೆಯಬೇಕು. ಯಾವುದೇ ನಿರ್ಲಕ್ಷ ವಹಿಸಬಾರದು. ಕೋರೋನಾ ಸೋಂಕಿತರಿಗೆ ಉಸಿರಾಟದ ಸಮಸ್ಯೆ ಬಂದಲ್ಲಿ ತಕ್ಷಣವೇ ಸ್ಥಳೀಯ ಸರಕಾರಿ ಆಸ್ಪತ್ರೆಗೆ ಮಾಹಿತಿ ನೀಡಬೇಕು. ಯಾವುದೇ ಕಾರಣಕ್ಕೂ ಸೋಂಕಿತರು ಮನೆಯಿಂದ ಹೊರಗಡೆ ಬಾರಬಾರದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕುಂದಾಪುರ ಸಹಾಯಕ ಕಮಿಷನರ್ ರಾಜು ಸಿ., ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮೀ, ಶಿರೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜುನಾಥ ಶೆಟ್ಟಿ, ಬೈಂದೂರು ಕಂದಾಯ ನಿರೀಕ್ಷಕ ಮಂಜು, ಯಡ್ತರೆ ಗ್ರಾಮ ಲೆಕ್ಕಾಧಿಕಾರಿ ಮಂಜು ಬಿಲ್ಲವ, ಶಿರೂರು ಗ್ರಾಮ ಲೆಕ್ಕಾಧಿಕಾರಿ ಸತೀಶ್ ಹೋಬಳಿದಾರ್ ಉಪಸ್ಥಿತರಿದ್ದರು.