ಹೋಂ ಐಸೋಲೇಶನ್‌ನಲ್ಲಿರುವವರಿಗೆ ಮೆಡಿಸಿನ್ ಕಿಟ್ ವಿತರಣೆ
ಕುಂದಾಪುರ, ಮೇ 22: ಹೋಂ ಐಸೋಲೇಶನ್‌ನಲ್ಲಿರುವ ಕೋವಿಡ್ ಸೋಂಕಿತರಿಗೆ ಆರೋಗ್ಯ ಇಲಾಖೆ ಮೂಲಕ ಮೆಡಿಸಿನ್ ಕಿಟ್ ಹಾಗೂ ಪುರ ಸಭಾ ವ್ಯಾಪ್ತಿಯ 8 ಮಂದಿ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ ಕಾರ್ಯಕ್ರಮ ಶನಿವಾರ ಕುಂದಾಪುರದ ಶ್ರೀಕೀಳೇಶ್ವರಿ ಮತ್ತು ಪರಮೇಶ್ವರಿ ದೇವಸ್ಥಾನದಲ್ಲಿ ಜರಗಿತು.
ಶ್ರೀಕೀಳೇಶ್ವರಿ ದೇವಸ್ಥಾನ, ಶ್ರೀಕೀಳೇಶ್ವರಿ ಯೂತ್ ಕ್ಲಬ್ ಸಹಕಾರದಲ್ಲಿ ಡೈನಮಿಕ್ ಇನ್ಫೋಟೆಕ್ ಸಂಸ್ಥೆ, ಬೆಂಗಳೂರು ನಾರಾಯಣ ಹೃದಯಾ ಲಯದ ವೈದ್ಯ ಡಾ.ಇಸ್ತಿಯಾಕ್ ಅಹಮ್ಮದ್ ಸಹಕಾರದಲ್ಲಿ 1000 ಮೆಡಿಸಿನ್ ಕಿಟ್ ಗಳನ್ನು ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ್ ಉಡುಪ ಅವರಿಗೆ ಹಸ್ತಾಂತರಿಸಲಾಯಿತು. ಇದೇ ಸಂದರ್ಭ ಆಶಾ ಕಾರ್ಯಕರ್ತೆಯರನ್ನು ಗುರುತಿಸಿ ಗೌರವಿಸಲಾಯಿತು.
ಈ ಸಂದರ್ಭ ಮಾತನಾಡಿದ ಡಾ.ನಾಗಭೂಷಣ್ ಉಡುಪ, ಪ್ರಸ್ತುತ ಔಷಧಗಳ ಕೊರತೆಯಿದ್ದರೂ ಕೂಡ ಅದನ್ನು ನಿಬಾಯಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ. ತಾಲೂಕಿನಲ್ಲಿ ಒಟ್ಟು 2235 ಮಂದಿ ಹೋಂ ಐಸೋಲೇಶನ್ ನಲ್ಲಿದ್ದು, ಆಶಾ ಕಾರ್ಯಕರ್ತೆಯರು ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಸೋಂಕಿತರನ್ನು ಕಟ್ಟಕಡೆಯ ವ್ಯಕ್ತಿ ಎಂದು ತಿಳಿಯದೆ ಮೊಟ್ಟಮೊದಲ ವ್ಯಕ್ತಿ ಎಂದು ಪರಿಗಣಿಸಬೇಕು ಎಂದರು.
ಕೊರೋನ ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಸಂಘಟಿತ ಹೋರಾಟ ನಡೆಯುತ್ತಿದ್ದು ಆರೋಗ್ಯ ಕಾರ್ಯಕರ್ತರ ಜೊತೆಗೆ ಪೊಲೀಸರು ಹಾಗೂ ಆಶಾ ಕಾರ್ಯ ಕರ್ತರು ಪ್ರಮುಖ ಭಾಗವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೊರೋನಾ ನಿಯಂತ್ರಣದಲ್ಲಿ ಪ್ರತಿಯೊಬ್ಬ ಸಾರ್ವಜನಿಕನೂ ಕೂಡ ನಮ್ಮ ಮನೆ, ಊರು ಹಾಗೂ ದೇಶದ ರಕ್ಷಣೆಯಲ್ಲಿ ಸೈನಿಕನಾಗಿ ತೊಡಗಿಸಿಕೊಳ್ಳಬೇಕು. ಜನರು ಕೂಡ ಸರಕಾರದ ಆದೇಶ ಪಾಲನೆ ಮಾಡುವ ಅಗತ್ಯವಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕುಂದಾಪುರ ಡಿವೈಎಸ್ಪಿಕೆ.ಶ್ರೀಕಾಂತ್, ಡೈನಮಿಕ್ ಇನ್ಫೋಟೆಕ್ ಪಾಲುದಾರರಾದ ದಿನೇಶ್ ಅಮೀನ್, ಗಣೇಶ್ ಅಮೀನ್, ಧೀರಜ್, ಪುರಸಭೆ ಸದಸ್ಯ ಶ್ರೀಕಾಂತ, ಕೀಳೇಶ್ವರಿ ಯೂತ್ ಕ್ಲಬ್ ಅಧ್ಯಕ್ಷ ಸಂದೇಶ್ ಶೆಟ್ಟಿ, ಕಾರ್ಯದರ್ಶಿ ಸುಧಾಕರ್, ಕೀಳೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಕಮಲಾಕ್ಷ, ಗಿರೀಶ್ ಜಿ.ಕೆ., ಸಂಜೀವ ಶ್ರೀಯಾನ್, ಗುಣರತ್ನಾ, ಚಂದ್ರ ಮೇಸ್ತ್ರಿ, ಮಹಾಬಲ ಹೊಳ್ಳ, ಭಾಸ್ಕರ ವಿಠಲ ವಾಡಿ, ಭಾಸ್ಕರ ಎಂ. ವಿಠಲವಾಡಿ, ಪ್ರಮುಖರಾದ ಮಹೇಶ್ ಪೂಜಾರಿ ಹಳೆಅಳಿವೆ, ಭಾಸ್ಕರ ಬಿಲ್ಲವ ಉಪಸ್ಥಿತರಿದ್ದರು.