×
Ad

ಕಾರ್ಕಳ: ಮನೆಗೆ ಬಾಡಿಗೆ ನೀಡಲು ಹಣ ಇಲ್ಲದೆ ಆಸ್ಪತ್ರೆಯಲ್ಲೇ ಉಳಿದ ಕುಟುಂಬ!

Update: 2021-05-22 20:19 IST

ಕಾರ್ಕಳ, ಮೇ 22: ಅನಾರೋಗ್ಯದಿಂದ ಗುಣಮುಖರಾಗಿದ್ದರೂ ಮನೆಯ ಬಾಡಿಗೆ ನೀಡಲೂ ಹಣ ಇಲ್ಲದೆ ಕುಟುಂಬವೊಂದು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲೇ ಉಳಿದು ಕೊಂಡ ಬಗ್ಗೆ ವರದಿಯಾಗಿದೆ. ಇಂದು ಆ ಕುಟುಂಬಕ್ಕೆ ಪುರಸಭಾ ಸದಸ್ಯ ಶುಭದ ರಾವ್ ಆಸರೆಯಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಅನಾರೋಗ್ಯದ ಕಾರಣ ಮೂಡಬಿದಿರೆ ಪುತ್ತಿಗೆಯ ಸಂಪಿಗೆ ನಿವಾಸಿ ಪಾರ್ವತಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇವರನ್ನು ನೋಡಿ ಕೊಳ್ಳಲು ಪತಿ ವಿವೇಕ್ ಮತ್ತು ಮಗ ಅಕ್ಷಯ್ ಜೊತೆಗಿದ್ದರು. ಕೆಲವು ದಿನಗಳ ನಂತರ ಪಾರ್ವತಿ ಅನಾರೋಗ್ಯದಿಂದ ಗುಣಮುಖರಾಗಿದ್ದರೂ ಮನೆಯ ಬಾಡಿಗೆ ನೀಡಲೂ ಅಸಾಯಕ ರಾಗಿ ಇವರೆಲ್ಲ ಮನೆಗೆ ತೆರಳಲು ಸಾಧ್ಯವಾಗದೆ ಆಸ್ಪತ್ರೆಯಲ್ಲಿಯೇ ಉಳಿದು ಕೊಂಡಿದ್ದರು.

ರೋಗಿ ಗುಣಮುಖರಾದ ನಂತರ ಹೆಚ್ಚು ದಿನ ಆಸ್ಪತ್ರೆಯಲ್ಲಿ ಉಳಿಸಿಕೊಳ್ಳಲು ಅವಕಾಶ ಇಲ್ಲದ ಕಾರಣ ವೈದ್ಯರೊಬ್ಬರು ಈ ಬಗ್ಗೆ ಶುಭದ ರಾವ್‌ಗೆ ಮಾಹಿತಿ ನೀಡಿದರು. ಅದರಂತೆ ಅವರು ಪಾರ್ವತಿಯವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿ, ಅವರ ಜೊತೆಯಿದ್ದ ಪತಿ ಮತ್ತು ಮಗನನ್ನು ಅವರ ಒಪ್ಪಿಗೆಯಂತೆ ಜರಿಗುಡ್ಡೆಯಲ್ಲಿರುವ ಸುರಕ್ಷಾ ಆಶ್ರಮಕ್ಕೆ ಸೇರಿಸಿ ತಕ್ಷಣಕ್ಕೆ ಬೇಕಾಗುವ ಎಲ್ಲಾ ಅಗತ್ಯ ವಸ್ತುಗಳನ್ನು ನೀಡಿದ್ದಾರೆ.

ಈಗಾಗಲೇ ಸುಮಾರು 50ಕ್ಕೂ ಅಧಿಕ ಅಸಹಾಯಕರಿಗೆ ತಮ್ಮ ಆಶ್ರಮದಲ್ಲಿ ಆಶ್ರಯ ನೀಡುತ್ತಿರುವ ಆಯಿಷಾರವರು ಪಾರ್ವತಿ ಕುಟುಂಬದವರನ್ನು ನೋಡಿಕೊಳ್ಳುವ ಭರವಸೆಯನ್ನು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News