ಉಡುಪಿ: ಕೋವಿಡ್‌ಗೆ ಐದು ಬಲಿ; 849 ಮಂದಿಗೆ ಕೊರೋನ ಸೋಂಕು
ಉಡುಪಿ, ಮೇ 22: ಕೋವಿಡ್-19ಕ್ಕೆ ಶನಿವಾರ ಐದು ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಈವರೆಗೆ ಮೃತರಾದವರ ಸಂಖ್ಯೆ 298ಕ್ಕೇರಿದೆ. ದಿನದಲ್ಲಿ 849 ಮಂದಿಯಲ್ಲಿ ಹೊಸದಾಗಿ ಪಾಸಿಟಿವ್ ದೃಢಪಟ್ಟಿದ್ದು, 1164 ಮಂದಿ ಚಿಕಿತ್ಸೆಯ ಬಳಿಕ ಗುಣಮುಖರಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 5940ಕ್ಕಿಳಿದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಶುಕ್ರವಾರ ಜಿಲ್ಲೆಯಲ್ಲಿ ಮೂವರು (74, 65, 42 ವರ್ಷ) ಪುರುಷರು ಹಾಗೂ ಇಬ್ಬರು ಮಹಿಳೆಯರು (80, 76) ಮೃತಪಟ್ಟಿದ್ದಾರೆ. ಇವರಲ್ಲಿ ಇಬ್ಬರು ಉಡುಪಿ ತಾಲೂಕಿನವರಾದರೆ, ಉಳಿದ ಮೂವರು ಕುಂದಾಪುರ ತಾಲೂಕಿ ನವರು. ಇವರು ಕುಂದಾಪುರ, ಉಡುಪಿ, ಮಣಿಪಾಲಗಳ ಖಾಸಗಿ ಆಸ್ಪತ್ರೆ ಅಲ್ಲದೇ ಜಿಲ್ಲಾಸ್ಪತ್ರೆ ಹಾಗೂ ಕುಂದಾಪುರ ತಾಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದರು.
ಮೃತರು ಕುಂದಾಪುರ ತಾಲೂಕಿನ ಸಿದ್ಧಾಪುರ, ಸೇನಾಪುರ, ಆಲೂರು ಉಡುಪಿ ತಾಲೂಕಿನ ಒಳಕಾಡು, ಸಂತೆಕಟ್ಟೆಯವರಾಗಿದ್ದು, ಎಲ್ಲರೂ ಶನಿವಾರವೇ ಮೃತಪಟ್ಟಿದ್ದಾರೆ. ಎಲ್ಲರೂ ಗಂಭೀರ ಕೋವಿಡ್ ಲಕ್ಷಣಗಳೊಂದಿಗೆ ಉಸಿರಾಟದ ತೊಂದರೆ, ನ್ಯುಮೋನಿಯಾ ಅಲ್ಲದೇ ಕೆಲವರು ಮಧುಮೇಹ, ಹೃದಯ ಕಾಯಿಲೆಯಿಂದ ನರಳುತಿದ್ದರು.
ಶನಿವಾರ ಪಾಸಿಟಿವ್ ಬಂದ 849 ಮಂದಿಯಲ್ಲಿ 435 ಮಂದಿ ಪುರುಷರು ಹಾಗೂ 414 ಮಂದಿ ಮಹಿಳೆಯರು. ಇವರಲ್ಲಿ ಉಡುಪಿ ತಾಲೂಕಿನ 324, ಕುಂದಾಪುರ ತಾಲೂಕಿನ 303 ಹಾಗೂ ಕಾರ್ಕಳ ತಾಲೂಕಿನ 216 ಮಂದಿ ಇದ್ದು, ಉಳಿದ ಆರು ಮಂದಿ ಹೊರಜಿಲ್ಲೆಗಳಿಂದ ಉಡುಪಿಗೆ ವಿವಿಧ ಕಾರಣ ಗಳಿಗಾಗಿ ಆಗಮಿಸಿದವರು. ಇವರಲ್ಲಿ 29 ಮಂದಿ ಕೋವಿಡ್ ಆಸ್ಪತ್ರೆ ಹಾಗೂ 820 ಮಂದಿ ಹೋಮ್ ಐಸೋಲೇಷನ್‌ಗೆ ದಾಖಲಾಗಿದ್ದಾರೆ.
ಶುಕ್ರವಾರ 1164 ಮಂದಿ ಸೋಂಕಿನಿಂದ ಗುಣಮುಖರಾಗುವ ಮೂಲಕ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 45,814 ಕ್ಕೇರಿದೆ. ನಿನ್ನೆ ಜಿಲ್ಲೆಯ 3319 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಇಂದಿನ 849 ಮಂದಿ ಸೇರಿ ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 51,752 ಆಗಿದೆ ಎಂದು ಡಾ.ಸೂಡ ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 5,62,531 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ.
ಇಂದು ಲಸಿಕೆ ಇಲ್ಲ: ಜಿಲ್ಲೆಯಲ್ಲಿ ಮೇ 23ರ ರವಿವಾರ ಯಾವುದೇ ಕೋವಿಡ್ ಲಸಿಕಾ ಶಿಬಿರ ಇರುವುದಿಲ್ಲ. ಶನಿವಾರ ಒಟ್ಟು 2775 ಮಂದಿ ಕೋವಿಡ್‌ಗಿರುವ ಲಸಿಕೆಯನ್ನು ಪಡೆದಿದ್ದಾರೆ. ಇವರಲ್ಲಿ 2205 ಮಂದಿ ಮೊದಲ ಹಾಗೂ 570 ವುಂದಿ ಎರಡನೇ ಡೋಸ್ ಪಡೆದಿದ್ದಾರೆ. ಲಸಿಕೆ ಪಡೆದವರಲ್ಲಿ 141 ಮಂದಿ 18-45 ವರ್ಷದವರಾದರೆ, 2430 ಮಂದಿ 45 ವರ್ಷ ಮೇಲಿನವರು. 152 ಮಂದಿ ಆರೋಗ್ಯ ಕಾರ್ಯಕರ್ತರು ಹಾಗೂ 52 ಮಂದಿ ಮುಂಚೂಣಿ ಕಾರ್ಯಕರ್ತರು ಸಹ ಇಂದು ಲಸಿಕೆ ಪಡೆದಿದ್ದಾರೆ ಎಂದು ಡಾ.ಸೂಡ ತಿಳಿಸಿದರು.