ನಿಯಮ ಉಲ್ಲಂಘಿಸಿ ಅಂಗಡಿ ತೆರೆದರೆ 2000ರೂ. ದಂಡ: ಕೋಟ ಗ್ರಾಪಂ ಕೋವಿಡ್ ಕಾರ್ಯಪಡೆ ಸಭೆಯಲ್ಲಿ ನಿರ್ಣಯ
ಕೋಟ ಮೇ 22: ಕೋಟ ಗ್ರಾಪಂ ಕೋವಿಡ್ ಕಾರ್ಯಪಡೆ ಸಭೆ ಗ್ರಾಪಂ ಅಧ್ಯಕ್ಷ ಅಜಿತ್ ದೇವಾಡಿಗ ಅಧ್ಯಕ್ಷತೆಯಲ್ಲಿ ಶನಿವಾರ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಮೂಡುಗಿಳಿಯಾರು, ಹರ್ತಟ್ಟು, ಮಣೂರು ಪಡುಕರೆಯಲ್ಲಿ ಹೆಚ್ಚುತ್ತಿರುವ ಕೋವಿಡ್ ಸೊಂಕಿನ ಸಂಖ್ಯೆಯ ಬಗ್ಗೆ ಆತಂಕ ವ್ಯಕ್ತಪಡಿಸಿ, ಮುಂದೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾದ ಮಾರ್ಗೋಪಾಯಗಳ ಬಗ್ಗೆ ವಿಸ್ತೃತವಾಗಿ ಸಭೆಯಲ್ಲಿ ಚರ್ಚಿಸಲಾಯಿತು.
ಕೋಟ ಪೊಲೀಸ್ ಠಾಣಾಧಿಕಾರಿ ಸಂತೋಷ್ ಬಿ.ಪಿ. ಮಾತನಾಡಿ ಸೊಂಕು ಹರಡುವಿಕೆಯನ್ನು ತಡೆಗಟ್ಟಲು ಪಂಚಾಯತ್ ಕಾರ್ಯಪಡೆ ಕಠಿಣ ನಿಲುವು ತಾಳಬೇಕು ,ಪೇಟೆ ಭಾಗದಲ್ಲಿ ಅಂಗಡಿ ಮುಂಗಟ್ಟು , ಹೋಟೆಲ್ ಸಮಯಕ್ಕೂ ಮೀರಿ ವ್ಯವಹರಿಸುವವರ ವಿರುದ್ಧ ಕೇಸು ದಾಖಲಿಸಿ ದ್ದೇವೆ. ಈ ಬಗ್ಗೆ ನಿಮ್ಮ ಕಾರ್ಯಪಡೆಯಿಂದ ಕಠಿಣ ನಿಲುವು ವ್ಯಕ್ತಪಡಿಸಿ, ಮೈಕ್ ಪ್ರಚಾರದ ಮೂಲಕ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದರು.
ಕೋಟ ಪೇಟೆಯಲ್ಲಿ ಸರಕಾರದ ಮಾರ್ಗಸೂಚಿ ಮೀರಿ ವ್ಯವಹರಿಸುವ ಅಂಗಡಿ, ಹೋಟೇಲ್‌ಗಳಿಗೆ 2000ರೂ. ದಂಡ ವಸೂಲಿ ಮಾಡುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಕೋಟ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಸಹಾಯಕಿಯರ ಕೊರತೆ ಇದ್ದು, ಸಹಾಯಕಿರ ನೇಮಕ ಕುರಿತು ಸರಕಾರದ ಮಟ್ಟದಲ್ಲಿ ಒತ್ತಡ ಹೇರುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಕೋಟ ಗ್ರಾಮಲೆಕ್ಕಿಗ ಚಲುವರಾಜ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ, ಉಪಾಧ್ಯಕ್ಷೆ ಜಯಂತಿ ಪೂಜಾರಿ, ಪಂಚಾಯತ್ ಸದಸ್ಯರು, ಆಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.