ಮಂಗಳೂರು ನಗರ ತ್ಯಾಜ್ಯ ನಿರ್ವಹಣೆಯಲ್ಲಿ ಪ್ಲಾಸ್ಟಿಕ್ ಸಮಸ್ಯೆ:ಯುಎನ್-ಹ್ಯಾಬಿಟ್ಯಾಟ್, ನಗರ ಪಾಲಿಕೆ, ಎಪಿಡಿಯಿಂದ ಅಧ್ಯಯನ
ಮಂಗಳೂರು, ಮೇ 22: ಮಹಾನಗರದ ಘನತ್ಯಾಜ್ಯ ವಿಲೇವಾರಿಯಲ್ಲಿ ಸಂಭಾವ್ಯ ಪ್ಲಾಸ್ಟಿಕ್ ಸೋರಿಕೆ ಕುರಿತ ಸರ್ವೇ ಆಧಾರಿತ ಅಧ್ಯಯನ ವನ್ನು ವಿಶ್ವಸಂಸ್ಥೆಯ ಯುಎನ್-ಹ್ಯಾಬಿಟ್ಯಾಟ್ ಸಹಯೋಗದೊಂದಿಗೆ ಮಂಗಳೂರು ಮನಪಾ, ಹಸಿರು ದಳ ಮತ್ತು ಎಪಿಡಿ ಪ್ರತಿಷ್ಠಾನ ನಡೆಸಿದೆ.
ಈ ಮೌಲ್ಯಮಾಪನ ಅಧ್ಯಯನದಲ್ಲಿ ಹಸಿರು ದಳ ಮತ್ತು ಎಪಿಡಿ ಫೌಂಡೇಶನ್‌ನ ಸುಮಾರು 20 ಸ್ವಯಂಸೇವಕರು ಭಾಗವಹಿಸಿದ್ದು, ನಗರದಲ್ಲಿ ತ್ಯಾಜ್ಯ ವಿಲೇವಾರಿಯಲ್ಲಿ ತ್ಯಾಜ್ಯ ಸೋರಿಕೆಯನ್ನು ಅರ್ಥಮಾಡಿಕೊಳ್ಳಲು ಮನೆ ಮನೆಯ ತ್ಯಾಜ್ಯ, ವಾಣಿಜ್ಯ ಮತ್ತು ಸಾಂಸ್ಥಿಕ ತ್ಯಾಜ್ಯಗಳ ಮಾದರಿ ಯನ್ನು ಸಂಗ್ರಹಿಸಲಾಗಿದೆ.
ವಿಶ್ವಸಂಸ್ಥೆಯ ಮಾನವ ವಸಾಹತು (ಯುಎನ್-ಹ್ಯಾಬಿಟ್ಯಾಟ್) ಆರಂಭಿಸಿರುವ ಈ ಅಧ್ಯಯನದಿಂದ ಮಹಾನಗರಗಳ ಘನತ್ಯಾಜ್ಯ ನಿರ್ವಹಣೆ ಯನ್ನು ಬಲಪಡಿಸಲು ಸಹಾಯ ಮಾಡಲಿದೆ. ಈ ಯೋಜನೆಯಡಿ ಭಾರತ, ಇಥಿಯೋಪಿಯ, ಕೆನ್ಯಾದ ತಲಾ ಎರಡು ನಗರಗಳಲ್ಲಿ ಪ್ಲಾಸ್ಟಿಕ್ ಕಸ ನಿಭಾವಣೆ ಅನುಷ್ಠಾನ ಮಾಡಲಾಗುತಿದ್ದು, ಯುನ್-ಹ್ಯಾಬಿಟ್ಯಾಟ್ ತ್ಯಾಜ್ಯ ಉತ್ಪನ್ನ ಮತ್ತು ಘನತ್ಯಾಜ್ಯ ವಿಲೇವಾರಿಯಡಿ ಸಂಭಾವ್ಯ ಪ್ಲಾಸ್ಟಿಕ್ ಕಸಗಳ ಸೋರಿಕೆಯ ಕುರಿತು ದಾಖಲೆಗಳನ್ನು ಸಂಗ್ರಹ ಮಾಡಲಾಗುತ್ತಿದೆ. ತ್ಯಾಜ್ಯವಾರು ನಗರ ಕಾರ್ಯಕ್ರಮದ ಟೂಲ್‌ಕಿಟ್ ಮೂಲಕ ಪ್ಸಾಸ್ಟಿಕ್ ತ್ಯಾಜ್ಯದ ಸಂಗ್ರಹ, ಸಂಸ್ಕರಣದ ಪ್ರಮಾಣ ಹೆಚ್ಚಳಕ್ಕೆ ದೀರ್ಘಕಾಲಿಕ ಮತ್ತು ಅಲ್ಪಕಾಲಿಕ ಪರಿಹಾರಗಳನ್ನು ಕಂಡುಕೊಳ್ಳಲಾಗುತ್ತದೆ.
ಈ ಮಹತ್ವದ ಯೋಜನೆಗೆ ಆಲಯೆನ್ಸ್ ಟು ಎಂಡ್ ಪ್ಲಾಸ್ಟಿಕ್ ವೇಸ್ಟ್ (ಎಇಪಿಡಬ್ಲ್ಯು) ಎಂಬ ಅಂತಾರಾಷ್ಟ್ರೀಯ ಸಂಘಟನೆಯು ಆರ್ಥಿಕ ನೆರವು ನೀಡುತ್ತಿದ್ದು, ಸರಕಾರದೊಂದಿಗೆ ಪರಿಸರ ಮತ್ತು ಆರ್ಥಿಕ ಅಭಿವೃದ್ಧಿ ಸಂಸ್ಥೆಗಳು, ವಿಶ್ವ ಸಂಸ್ಥೆಯ ಸಂಸ್ಥೆಗಳು, ವಿಶ್ವದ ಎಲ್ಲೆಡೆ ಇರುವ ಸಮುದಾಯ ಗಳು ಪ್ಲಾಸ್ಟಿಕ್ ತ್ಯಾಜ್ಯದಿಂದ ಆಗುತ್ತಿರುವ ಪರಿಸರ ಹಾನಿಯನ್ನು ನಿಯಂತ್ರಿಸಲು ಸಹಕಾರ ನೀಡುತ್ತಿವೆ. ಈ ಯೋಜನೆಯಲ್ಲಿ ಆಲಯೆನ್ಸ್ ಸಂಸ್ಥೆಯೊಂದಿಗೆ ಯುಎನ್-ಹ್ಯಾಬಿಟ್ಯಾಟ್ ಪ್ರಮುಖ ಪಾಲುದಾರನಾಗಿದ್ದು, ಭಾರತದಲ್ಲಿ ಮಂಗಳೂರು ಮತ್ತು ತಿರುವನಂತಪುರಂ ಮಹಾನಗರಗಳಲ್ಲಿ ಈ ಕಾರ್ಯಕ್ರಮ ಕಾರ್ಯಗತಗೊಳ್ಳುತ್ತಿವೆ.
ಯುಎನ್-ಹ್ಯಾಬಿಟ್ಯಾಟ್ ಇಂಡಿಯಾ ಅಧಿಕಾರಿಗಳಾದ ತ್ಯಾಜ್ಯ ನಿರ್ವಹಣಾ ತಜ್ಞೆ ಸ್ವಾತಿ ಸಿಂಗ್ ಸಾಂಬ್ಯಾಲ್, ಕಾರ್ಯಕ್ರಮ ತಜ್ಞ ಜೋಗೇಶ್ ಅರೋರಾ ಮತ್ತು ತ್ಯಾಜ್ಯ ನಿರ್ವಹಣಾ ಸಲಹೆಗಾರ ಕಾರ್ತಿಕ್ ಕಪೂರ್ ನೇತೃತ್ವದಲ್ಲಿ, ಹಸಿರು ದಳ ಮತ್ತು ಎಪಿಡಿ ಫೌಂಡೇಶನ್‌ನ ಪ್ರತಿನಿಧಿ ಗಳಾದ ವಾಣಿಶ್ರೀ ಬಿ.ಆರ್. ಮತ್ತು ನಾಗರಾಜ್ ರಾಘವ ಅಂಚನ್‌ರೊಂದಿಗೆ ನಗರದಲ್ಲಿ ಕಾರ್ಯನಿರ್ವಹಿಸಲಾಯಿತು.