ಇಸ್ರೇಲ್ ನಿಂದ ಯುದ್ಧಾಪರಾಧ: ಧ್ವಂಸಗೊಂಡ ಮಾಧ್ಯಮ ಕಚೇರಿಗಳಿದ್ದ ಕಟ್ಟಡದ ಮಾಲಕರಿಂದ ಐಸಿಸಿಗೆ ದೂರು

Update: 2021-05-22 17:47 GMT

ದ ಹೇಗ್ (ನೆದರ್ಲ್ಯಾಂಡ್ಸ್), ಮೇ 22: ಇಸ್ರೇಲ್ ನಡೆಸಿರುವ ವಾಯು ದಾಳಿಯಲ್ಲಿ ಧ್ವಂಸಗೊಂಡಿರುವ ಅಂತರ್ರಾಷ್ಟ್ರೀಯ ಮಾಧ್ಯಮಗಳ ಕಚೇರಿಯಿದ್ದ ಕಟ್ಟಡದ ಮಾಲೀಕರು ಅಂತರ್ರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ (ಐಸಿಸಿ)ದಲ್ಲಿ ದೂರು ಸಲ್ಲಿಸಿದ್ದಾರೆ ಎಂದು ಅವರ ವಕೀಲರು ತಿಳಿಸಿದ್ದಾರೆ.

‌ಅಮೆರಿಕದ ಸುದ್ದಿ ಸಂಸ್ಥೆ ಅಸೋಸಿಯೇಟಡ್ ಪ್ರೆಸ್ ಮತ್ತು ಅಲ್-ಜಝೀರ ಟೆಲಿವಿಶನ್ನ ಕಚೇರಿಗಳನ್ನು ಹೊಂದಿದ್ದ ‘ಜಾಲ ಟವರ್’ ಮೇಲೆ ಇಸ್ರೇಲ್ ಮೇ 15ರಂದು ನಡೆಸಿದ ದಾಳಿಯಲ್ಲಿ ಕಟ್ಟಡವು ಧರಾಶಾಯಿಯಾಗಿತ್ತು.

ಈ ದಾಳಿಯು ‘ಯುದ್ಧಾಪರಾಧವಾಗಿದೆ’ ಎಂಬುದಾಗಿ ಕಟ್ಟಡದ ಮಾಲೀಕ ಜವಾದ್ ಮೆಹದಿ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.

ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವಿನ ಇತ್ತೀಚಿನ ಸಂಘರ್ಷದ ವೇಳೆ ಯುದ್ಧಾಪರಾಧ ನಡೆದಿರುವ ಸಾಧ್ಯತೆಯಿದೆ ಎಂಬುದಾಗಿ ಐಸಿಸಿಯ ಮುಖ್ಯ ಪ್ರಾಸಿಕ್ಯೂಟರ್ ಹೇಳಿದ ಬಳಿಕ ಈ ದೂರು ದಾಖಲಾಗಿದೆ.

ಇಸ್ರೇಲ್ ವಿರುದ್ಧ ಅಂತರ್ರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಲ್ಲಿ ಯುದ್ಧಾಪರಾಧ ಮೊಕದ್ದಮೆ ಸಲ್ಲಿಸುವಂತೆ ಕಟ್ಟಡದ ಮಾಲೀಕರು ತನ್ನ ವಕೀಲರಿಗೆ ಸೂಚಿಸಿದ್ದಾರೆ’’ ಎಂದು ವಕೀಲ ಗಿಲ್ಸ್ ಡೆವರ್ಸ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News