ಕೋವಿಡ್ ಸೋಂಕಿನಿಂದ ಮೃತಪಟ್ಟ ಎಲ್ಲ ಶಿಕ್ಷಕರ ಕುಟುಂಬಗಳಿಗೆ ಸೂಕ್ತ ಪರಿಹಾರಕ್ಕೆ ಐಟಾ ಒತ್ತಾಯ
ಭಟ್ಕಳ: ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದಾಗಿ ಹಲವಾರು ಶಿಕ್ಷಕರು ಮೃತಪಡುತ್ತಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದು, ಕೇವಲ ಬೀದರ್ ಜಿಲ್ಲೆಯೊಂದರಲ್ಲೇ 55ಕ್ಕೂ ಹೆಚ್ಚು ಶಿಕ್ಷಕರು ಕೋವಿಡ್ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಮೃತಪಟ್ಟಿರುವ ಎಲ್ಲ ಶಿಕ್ಷಕರ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು ಮತ್ತು ಅವರ ಕುಟುಂಬದ ಓರ್ವ ಸದಸ್ಯನನ್ನು ಅನುಕಂಪದ ಆಧಾರದಲ್ಲಿ ಕೂಡಲೇ ಸರ್ಕಾರಿ ಹುದ್ದೆಯನ್ನು ನೀಡಬೇಕೆಂದು ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಮುಹಮ್ಮದ್ ರಝಾ ಮಾನ್ವಿ ಆಗ್ರಹಿಸಿದ್ದಾರೆ.
ಈ ಕುರಿತಂತೆ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಶಿಕ್ಷಣ ಸಚಿವ ಸುರೇಶ್ ಕುಮಾರ್ ರವರಿಗೆ ಪತ್ರವನ್ನು ಬರೆದಿದ್ದು ಕೂಡಲೆ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂಧಿಸುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.
ರಾಜ್ಯದಲ್ಲಿ ಖಾಸಗಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ಮಂದಿ ಶಿಕ್ಷಕರು ಕಳೆದ 15 ತಿಂಗಳಿನಿಂದ ವೇತನವಿಲ್ಲದೆ ಜೀವನ ನಡೆಸಲು ಪರದಾಡುತ್ತಿದ್ದಾರೆ. ಈಗಾಗಲೆ ರಾಜ್ಯದ ಕೆಲ ವರ್ಗದವರ ಹಿತದೃಷ್ಟಿಯಿಂದ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದು ಆದರೆ ದೇಶದ ಭಾವಿ ಪ್ರಜೆಗಳನ್ನು ರೂಪಿಸುವ ಶಿಕ್ಷಕರ ಭವಿಷ್ಯ ಇಂದು ಡೋಲಾಯಮಾನ ಸ್ಥಿತಿಯಲ್ಲಿದ್ದು ಶಿಕ್ಷಕ ವರ್ಗವನ್ನು ಮುಖ್ಯಮಂತ್ರಿಗಳು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ಆರೋಪಿಸಲಾಗಿದೆ. ರಾಜ್ಯದ ಸಾವಿರಾರು ಮಂದಿ ಖಾಸಗಿ ಶಿಕ್ಷಕರು ಸರ್ಕಾರದ ಮೇಲೆ ಹಾಗೂ ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರ ಮೇಲೆ ವಿಶ್ವಾಸವನ್ನೇ ಕಳೆದುಕೊಂಡಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ಅವರು, ಸಮಾಜದ ಬೇರೆ ವರ್ಗಕ್ಕೆ ಯಾವ ರೀತಿಯ ಪ್ಯಾಕೇಜ್ ಘೋಷಣೆಯಾಗಿದಿಯೂ ಅದೇ ರೀತಿಯಲ್ಲಿ ಖಾಸಗಿ ಶಾಲಾ ಶಿಕ್ಷಕರು ಹಾಗೂ ಶಿಕ್ಷಕೇತರ ವರ್ಗಕ್ಕೂ ಕನಿಷ್ಠ 5 ಸಾವಿರ ರೂ ಹಾಗೂ 25 ಕೆ.ಜಿ ಅಕ್ಕಿಯನ್ನು ನೀಡುವಂತಹ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಐಟಾ ರಾಜ್ಯಾಧ್ಯಕ್ಷ ಮಾನ್ವಿ ಸರ್ಕಾರವನ್ನು ಆಗ್ರಹಿಸಿದ್ದಾರೆ.