ಎಂಆರ್ ಪಿಎಲ್ ನಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಬೇಕು : ಯುನಿವೆಫ್ ಕರ್ನಾಟಕ ಆಗ್ರಹ
ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್ ಪಿಎಲ್) ಈ ಜಿಲ್ಲೆಗೆ ಆಗಮಿಸಿದಾಗ ಇಲ್ಲಿಯ ಜನರು ಅದನ್ನು ತೀವ್ರ ವಾಗಿ ವಿರೋಧಿಸಿದ್ದರು. ಆ ವಿರೋಧಕ್ಕೆ ಹಲವು ಕಾರಣಗಳಿದ್ದವು. ರೈತರಿಗೆ ತಮ್ಮ ಜಮೀನನ್ನು ಬಿಟ್ಟುಕೊಡುವ ಪರಿಸ್ಥಿತಿ ನಿರ್ಮಾಣ ವಾಗಿದ್ದರೆ, ಅಲ್ಲಿಯ ತ್ಯಾಜ್ಯ ನೀರಿನಿಂದ ಸಮುದ್ರದ ನೀರು ಕಲ್ಮಶವಾಗಿ ಮತ್ಸ್ಯೋದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಮೊಗವೀರ ಸಮಾಜ ಅದನ್ನು ವಿರೋಧಿಸಿತ್ತು. ಹೀಗೆ ಸ್ಥಳೀಯರ ವಿರೋಧವನ್ನು ಲೆಕ್ಕಿಸದೆ ಇಲ್ಲಿಯ ಜನಪ್ರತಿನಿಧಿಗಳ ವಿಶೇಷ ಕಾಳಜಿಯಿಂದ ಸ್ಥಾಪನೆ ಗೊಂಡಿರುವ ಎಂಆರ್ ಪಿಎಲ್ ಕೊನೆಗೆ ಸ್ಥಳೀಯರಿಗೆ ನೌಕರಿಯ ಭರವಸೆಯನ್ನು ನೀಡಿ ಅಸ್ಥಿತ್ವಕ್ಕೆ ಬಂದಿತ್ತು. ಆದರೆ ಆ ಬಳಿಕ ತನ್ನ ವಾಗ್ದಾನ ದಿಂದ ಹಿಂದೆ ಸರಿದು ಹೊರ ರಾಜ್ಯದವರಿಗೆ ನೌಕರಿಯನ್ನು ನೀಡಿದೆ ಎಂದು ಯುನಿವೆಫ್ ಕರ್ನಾಟಕ ಪ್ರಕಟನೆಯಲ್ಲಿ ತಿಳಿಸಿದೆ.
ಭಾರತದಲ್ಲಿ ಕೊರೋನ ಬಾಧಿತರಾಗಿ ದೇಶಾದ್ಯಂತ ಕೋಟಿಗಟ್ಟಲೆ ಜನರು ನಿರುದ್ಯೋಗಿಗಳಾಗಿದ್ದಾರೆ. ಅನೇಕ ಕೈಗಾರಿಕೆಗಳು ಮುಚ್ಚಲ್ಪಟ್ಟಿವೆ. ಜನರು ಮೂರು ಹೊತ್ತಿನ ಆಹಾರಕ್ಕಾಗಿ ಹಾತೊರೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಎಂಆರ್ ಪಿಎಲ್ ನಲ್ಲಿ ಖಾಲಿ ಇದ್ದ 184 ಹುದ್ದೆಗಳಲ್ಲಿ 172 ಹುದ್ದೆಗಳಿಗೆ ಹೊರರಾಜ್ಯದವರನ್ನು ನೇಮಿಸಿ ಸ್ಥಳೀಯರನ್ನು ಕಡೆಗಣಿಸಿರುವುದು ಸ್ವೀಕಾರಾರ್ಹವಲ್ಲ. ಇದನ್ನು ಯುನಿವೆಫ್ ಕರ್ನಾಟಕ ಖಂಡಿಸುತ್ತದೆ. ಈ ಮೊದಲು ವಾಗ್ದಾನ ಮಾಡಿರುವಂತೆ ಕನಿಷ್ಟ ಅರ್ಧದಷ್ಟಾದರೂ ಹುದ್ದೆಗಳನ್ನು ಸ್ಥಳೀಯರಿಗೆ ನೀಡಲೇಬೇಕು ಎಂದು ಯುನಿವೆಫ್ ಕರ್ನಾಟಕ ಆಗ್ರಹಿಸುತ್ತದೆ ಮತ್ತು ಸ್ಥಳೀಯ ಜನಪ್ರತಿನಿಧಿಗಳನ್ನು ಒತ್ತಾಯಿಸುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಲ್ಲಿ ದೂರು ಸಲ್ಲಿಸಲೂ ಯುನಿವೆಫ್ ಕರ್ನಾಟಕ ತೀರ್ಮಾನಿಸಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.