×
Ad

'ಕೋವಿಡ್ ಲಸಿಕೆ ಪಡೆದವರು 2 ವರ್ಷದೊಳಗೆ ಸಾಯುತ್ತಾರೆ' ಎಂಬ ವೈರಲ್ ಸಂದೇಶ ಸುಳ್ಳು

Update: 2021-05-26 12:22 IST

ಹೊಸದಿಲ್ಲಿ: "ಕೋವಿಡ್ ಲಸಿಕೆ ಪಡೆದವರೆಲ್ಲ ಎರಡು ವರ್ಷಗಳಲ್ಲಿ ಸಾಯುತ್ತಾರೆ ಹಾಗೂ ಕೋವಿಡ್ ಲಸಿಕೆ ಅಭಿಯಾನ ಒಂದು ದೊಡ್ಡ ಪ್ರಮಾದ'' ಎಂದು ಫ್ರೆಂಚ್ ವೈರಾಲಜಿಸ್ಟ್ ಹಾಗೂ ನೋಬೆಲ್ ಪ್ರಶಸ್ತಿ ವಿಜೇತ ಲುಕ್ ಮೊಂಟೇಗ್ನೀಯರ್ ಹೇಳಿದ್ದಾರೆಂಬ ಸಂದೇಶ ವಾಟ್ಸ್ ಆ್ಯಪ್ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಇದೊಂದು ಸುಳ್ಳು ಸಂದೇಶವಾಗಿದೆ.

"ಲಸಿಕೆಯನ್ನು ಯಾವುದೇ ವಿಧದಲ್ಲಿ ಪಡೆದಿರುವ ಜನರು ಬದುಕುಳಿಯುವ ಸಾಧ್ಯತೆ ಇಲ್ಲ ಎಂದು ನೊಬೆಲ್ ಪ್ರಶಸ್ತಿ ವಿಜೇತ ಲುಕ್ ಮೊಂಟೇಗ್ನಿಯರ್ ಅವರು ದೃಢಪಡಿಸಿದ್ದಾರೆ. ಶಾಕಿಂಗ್ ಸಂದರ್ಶನದಲ್ಲಿ ಜಗತ್ತಿನ ಟಾಪ್ ವೈರಾಲಜಿಸ್ಟ್  ಹೀಗೆಂದು ಬಹಿರಂಗವಾಗಿ ಹೇಳಿದ್ದಾರೆ,'' ಎಂದು ಹೇಳುವ ಸಂದೇಶದ ಜತೆಗೆ ಕೆನಡಾದ ಕಟ್ಟಾ ಬಲಪಂಥೀಯ ಸುದ್ದಿ ಸಂಸ್ಥೆ 'ಲೈಫ್‍ಸೈಟ್ ನ್ಯೂಸ್' ವರದಿಯ ಲಿಂಕ್ ನೀಡಿದೆ. ಕೋವಿಡ್ ಕುರಿತಂತೆ ಸುಳ್ಳು ಸುದ್ದಿ ಹರಡಿದ್ದಕ್ಕಾಗಿ ಈ ವೆಬ್‍ಸೈಟ್ ಅನ್ನು ಈ ತಿಂಗಳು ಫೇಸ್ ಬುಕ್ ನಿಷೇಧಿಸಿತ್ತು.

'ಲೈಫ್‍ಸೈಟ್‍ನ್ಯೂಸ್ ತನ್ನ ವರದಿಯಲ್ಲಿ ಆರ್‍ಎಐಆರ್‍ಫೌಂಡೇಶನ್‍ನಲ್ಲಿ ಪ್ರಕಟವಾದ ಲೇಖನವನ್ನು ಉಲ್ಲೇಖಿಸಿತ್ತು. ಈ ಫೌಂಡೇಶನ್ ಅಮೆರಿಕ ಮೂಲದ ಎನ್‍ಜಿಒ ಆಗಿದ್ದು ಅದು "ಇಸ್ಲಾಮಿಕ್ ಸಾರ್ವಭೌಮತ್ವವಾದಿಗಳ, ತೀವ್ರಗಾಮಿ ಎಡಪಂಥೀಯರ ಹಾಗೂ ಅವರ ಮೈತ್ರಿ ಹೊಂದಿರುವವರಿಂದ ಇರುವ ಬೆದರಿಕೆಗಳ ವಿರುದ್ಧ ಹೋರಾಡುವ ಸಂಸ್ಥೆ" ಎಂದು ಅದು ತನ್ನನ್ನು ವಿವರಿಸಿದೆ.

ಲೇಖನದ ಜತೆಗೆ ಎರಡು ನಿಮಿಷ ಅವಧಿಯ ವೀಡಿಯೋ ಕೂಡ  ಫ್ರೆಂಚ್ ಭಾಷೆಯಲ್ಲಿರುವ ಈ ವೀಡಿಯೋಗೆ ಅಲ್ಲಲ್ಲಿ ಕತ್ತರಿ ಹಾಕಲಾಗಿದೆ ಎಂಬುದು ತಿಳಿಯುತ್ತದೆ. ಲಸಿಕೆ ವಿರೋಧಿ ನಿಲುವಿಗೆ ಹೆಸರು ಪಡೆದಿರುವ ಲುಕ್ ಮೊಂಟೇಗ್ನಿಯರ್ ಅವರು ಸಾಮೂಹಿಕ ಲಸಿಕೆ ಅಭಿಯಾನವನ್ನು ದೊಡ್ಡ ತಪ್ಪು ಎಂದು ಹೇಳಿದ್ದಾರಾದರೂ ಲಸಿಕೆ ಪಡೆದಿರುವವರು ಎರಡು ವರ್ಷಗಳಲ್ಲಿ ಸಾಯುತ್ತಾರೆಂಬುದನ್ನು ನೇರವಾಗಿ ಹೇಳಿಲ್ಲ.

ಖ್ಯಾತ ವೈರಾಲಜಿಸ್ಟ್ ಡಾ. ಟಿ ಜೇಕಬ್ ಜಾನ್ ಹಾಗು ನರ ವಿಜ್ಞಾನಿ ಡಾ. ಸುಮಯ್ಯ ಶೇಖ್ ಅವರೂ ಈ ಮೆಸೇಜ್ ಸಂಪೂರ್ಣ ಸುಳ್ಳು ಎಂದು ಹೇಳಿದ್ದಾರೆ. 

ಹಲವು ಲಸಿಕೆ ವಿರೋಧಿ ಗುಂಪುಗಳು ತಮ್ಮ ಕಾರ್ಯಸಾಧಿಸುವ ಉದ್ದೇಶದಿಂದ ಈ ವೀಡಿಯೋವನ್ನು ಬಳಸಿಕೊಂಡಿವೆ.

ಭಾರತದಲ್ಲಿ ಕೇಂದ್ರ ಸರಕಾರದ ಪ್ರೆಸ್ ಇನ್ಫಾರ್ಮೇಶನ್ ಬ್ಯುರೋದ ಫ್ಯಾಕ್ಟ್ ಚೆಕ್ ಹ್ಯಾಂಡಲ್ ಕೂಡ ಈ  ಸಂದೇಶ ಸುಳ್ಳು ಎಂಬುದನ್ನು ಪ್ರಕಟಣೆ ನೀಡಿದೆ. ಕೇಂದ್ರ ಅರೋಗ್ಯ ಇಲಾಖೆ ಕೂಡ ಲಸಿಕೆಗಳನ್ನು ಎಲ್ಲ ಸುರಕ್ಷತಾ ಪರೀಕ್ಷೆಗಳಲ್ಲಿ ಪಾಸಾದ ಬಳಿಕವೇ ನೀಡುತ್ತಿದ್ದು ಅವರು ಸಂಪೂರ್ಣ ಸುರಕ್ಷಿತ ಎಂದು ಹೇಳಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News