ರೈಲು ಯಾರ್ಡ್‌ನಲ್ಲಿ ಗುಂಡಿನ ದಾಳಿ: 8 ಮಂದಿ ಮೃತ್ಯು

Update: 2021-05-27 03:41 GMT

ಸ್ಯಾನ್ ಜೋಸ್, ಮೇ 27: ಸಿಲಿಕಾನ್ ವ್ಯಾಲಿಗೆ ಸೇವೆ ಒದಗಿಸುವ ಕ್ಯಾಲಿಫೋರ್ನಿಯಾ ರೈಲು ಯಾರ್ಡ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ. ದಾಳಿ ನಡೆಸಿದ ವ್ಯಕ್ತಿ ರೈಲು ಉದ್ಯೋಗಿಯಾಗಿದ್ದು, ಆತ ಕೂಡಾ ಮೃತಪಟ್ಟಿದ್ದಾಗಿ ಅಧಿಕಾರಿಗಳು ಹೇಳಿದ್ದಾರೆ.

ಸ್ಯಾಂಟಾ ಕ್ಲಾರಾ ಕೌಂಟಿಯಾದ್ಯಂತ ಬಸ್, ಲಘು ರೈಲು ಮತ್ತು ಇತರ ಸಂಚಾರ ಸೇವೆಯನ್ನು ಒದಗಿಸುವ ವ್ಯಾಲಿ ಟ್ರಾನ್ಸ್‌ಪೋರ್ಟೇಶನ್ ಅಥಾರಿಟಿಗೆ ಸೇರಿದ ಸಿಬ್ಬಂದಿ ಮುಂಜಾನೆ 6.30ರ ಸುಮಾರಿಗೆ ರೈಲು ಯಾರ್ಡ್‌ನಲ್ಲಿ ಗುಂಡಿನ ದಾಳಿ ಆರಂಭಿಸಿದ ಎಂದು ಸ್ಯಾಂಟಾ ಕ್ಲಾರಾ ಕೌಂಟಿ ಶೆರಿಫ್ ಅಧಿಕಾರಿಗಳು ಹೇಳಿದ್ದಾರೆ. ದಾಳಿಕೋರ ಹೇಗೆ ಮೃತಪಟ್ಟಿದ್ದಾನೆ ಎನ್ನುವುದು ತಿಳಿದುಬಂದಿಲ್ಲ ಎಂದು ಪೊಲೀಸ್ ಅಧಿಕಾರಿ ಲಾರಿ ಸ್ಮಿತ್ ಹೇಳಿದ್ದಾರೆ. ಕಾನೂನು ಜಾರಿ ಅಧಿಕಾರಿಗಳು ದಾಳಿಕೋರನನ್ನು ಸ್ಯಾಮ್ ಕಸ್ಸಿಡಿ ಎಂದು ಗುರುತಿಸಿದ್ದಾರೆ.

ಸ್ಯಾನ್ ಜೋಸ್‌ನಲ್ಲಿ ಶೆರಿಫ್ ಇಲಾಖೆಯ ಪಕ್ಕದಲ್ಲಿರುವ ಲಘು ರೈಲು ಸೌಲಭ್ಯ ಸ್ಥಳದಲ್ಲಿ ಈ ದಾಳಿ ನಡೆದಿದ್ದು, ಇದು ವಿಮಾನ ನಿಲ್ದಾಣದಿಂದ ಆಗಮಿಸುವ ದಾರಿಮಧ್ಯದಲ್ಲಿದೆ. ಇಲ್ಲಿ ಸಾರಿಗೆ ನಿಯಂತ್ರಣ ಕೇಂದ್ರವಿದ್ದು, ರೈಲುಗಳ ದಾಸ್ತಾನು ಮತ್ತು ನಿರ್ವಹಣೆ ಯಾರ್ಡ್ ಕೂಡಾ ಈ ಪ್ರದೇಶದಲ್ಲಿದೆ.
ದಾಳಿಗೆ ಯಾವ ಆಯುಧ ಬಳಸಿದ್ದಾನೆ ಎನ್ನುವುದು ಮತ್ತು ದಾಳಿ ಒಳಗೆ ನಡೆದಿದೆಯೇ ಅಥವಾ ಹೊರಗೆ ನಡೆದಿದೆಯೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಮೃತರಲ್ಲಿ ವಿಟಿಎ ಉದ್ಯೋಗಿಗಳೂ ಸೇರಿದ್ದಾರೆ ಎಂದು ಶೆರಿಫ್ ಉಪ ವಕ್ತಾರ ರಸೆಲ್ ಡೇವಿಡ್ ಹೇಳಿದ್ದಾರೆ. ಮೃತರ ಹೆಸರುಗಳನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News