ರಾ ಮುಖ್ಯಸ್ಥ ಸೇರಿ ಇಬ್ಬರು ಉನ್ನತಾಧಿಕಾರಿಗಳ ಅಧಿಕಾರಾವಧಿ ವಿಸ್ತರಣೆ
ಹೊಸದಿಲ್ಲಿ, ಮೇ 28: ಸೇವಾ ನಿಯಾಮವಳಿಯನ್ನು ಸಡಿಲಿಸಿ ಗುಪ್ತಚರ ಬ್ಯೂರೊ ನಿರ್ದೇಶಕ ಅರವಿಂದ್ ಕುಮಾರ್ ಮತ್ತು ರೀಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (ರಾ) ಮುಖ್ಯಸ್ಥ ಸಮಂತ್ ಕುಮಾರ್ ಗೋಯಲ್ ಅವರ ಅಧಿಕಾರಾವಧಿಯನ್ನು ಒಂದು ವರ್ಷ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇಬ್ಬರ ಅಧಿಕಾರಾವಧಿಯೂ 2021ರ ಜೂನ್ 30ಕ್ಕೆ ಮುಕ್ತಾಯವಾಗಬೇಕಿತ್ತು. ಈ ವಿಸ್ತರಣೆಯಿಂದ ಇವರ ಅಧಿಕಾರಾವಧಿ 2022ರ ಜೂನ್ 30ರ ವರೆಗೆ ಇರುತ್ತದೆ.
ಉಭಯ ಅಧಿಕಾರಿಗಳ ಅಧಿಕಾರಾವಧಿ ವಿಸ್ತರಿಸುವ ಸಲುವಾಗಿ ಕೇಂದ್ರ ಸರ್ಕಾರ ಅಖಿಲ ಭಾರತ ಸೇವೆಗಳ (ಸಾವು ಮತ್ತು ನಿವೃತ್ತಿ ಪ್ರಯೋಜನಗಳು) ನಿಯಮಾವಳಿ-1958ರ ನಿಯಮ ಎಫ್‌ಆರ್56(ಜೆ) ಮತ್ತು 16(1ಎ)ಯನ್ನು ಸಡಿಲಿಸಲಾಗಿದೆ.
ಇನ್ನೊಂದು ಮಹತ್ವದ ಬದಲಾವಣೆಯಲ್ಲಿ ಜಮ್ಮು ಕಾಶ್ಮೀರದ ಮುಖ್ಯ ಕಾರ್ಯದರ್ಶಿ ಬಿ.ವಿ.ಆರ್.ಸುಬ್ರಹ್ಮಣ್ಯಂ ಅವರನ್ನು ವರ್ಗಾಯಿಸಿದೆ. ಅವರ ಹುದ್ದೆಗೆ ಜಮ್ಮು ಮತ್ತು ಕಾಶ್ಮೀರ ಹಣಕಾಸು ಆಯುಕ್ತರಾಗಿದ್ದ ಅರುಣ್ ಕುಮಾರ್ ಮೆಹ್ತಾ ಅವರನ್ನು ನೇಮಕ ಮಾಡಲಾಗಿದೆ. ಛತ್ತೀಸ್‌ಗಢ ಕೇಡರ್ ಐಎಎಸ್ ಅಧಿಕಾರಿಯಾಗಿರುವ ಸುಬ್ರಹ್ಮಣ್ಯಂ ಅವರು ರಾಷ್ಟ್ರಪತಿ ಆಳ್ವಿಕೆ ಅವಧಿ, 370ನೇ ವಿಧಿ ರದ್ದತಿ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಮಹತ್ವದ ಕಾಲಘಟ್ಟದಲ್ಲಿ ರಾಜ್ಯದ ಆಡಳಿತದ ಜವಾಬ್ದಾರಿ ಹೊಂದಿದ್ದರು. ಅವರನ್ನು ಇದೀಗ ಓಎಸ್‌ಡಿಯಾಗಿ ವಾಣಿಜ್ಯ ಇಲಾಖೆಗೆ ನೇಮಿಸಿಕೊಳ್ಳಲಾಗಿದೆ. 2021ರ ಜೂನ್ 30ರಂದು ನಿವೃತ್ತರಾಗಲಿರುವ ವಾಣಿಜ್ಯ ಕಾರ್ಯದರ್ಶಿ ಹುದ್ದೆಯನ್ನು ಅವರು ಆ ಬಳಿಕ ವಹಿಸಿಕೊಳ್ಳುವರು.
ಕನಿಷ್ಠ ಆರು ತಿಂಗಳು ಸೇವಾವಧಿ ಇರುವ ಅಧಿಕಾರಿಗಳನ್ನಷ್ಟೇ ಉನ್ನತ ಹುದ್ದೆಗಳಿಗೆ ಪರಿಗಣಿಸಬೇಕು ಎಂದು 2019ರಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಉಲ್ಲೇಖಿಸಿ, ಹಿರಿಯ ಐಪಿಎಸ್ ಅಧಿಕಾರಿಗಳಾದ ರಾಕೇಶ್ ಆಸ್ಥಾನಾ ಮತ್ತು ವೈ.ಸಿ.ಮೋದಿಯವರನ್ನು ಸಿಬಿಐ ಮುಖ್ಯಸ್ಥರ ಹುದ್ದೆಗೆ ಪರಿಗಣಿಸದಂತೆ ಭಾರತದ ಮುಖ್ಯ ನ್ಯಾಯಮೂರ್ತಿಗಳು ಇತ್ತೀಚೆಗೆ ಸಲಹೆ ಮಾಡಿದ ಹಿನ್ನೆಲೆಯಲ್ಲಿ ಇಬ್ಬರು ಉನ್ನತ ಅಧಿಕಾರಿಗಳ ಸೇವೆ ವಿಸ್ತರಿಸಿದ ಸರ್ಕಾರದ ನಡೆ ಕುತೂಹಲ ಮೂಡಿಸಿದೆ.