ಜನ ಸೇವೆ ಮಾಡುವುದನ್ನು ಕಾಂಗ್ರೆಸ್‌ನಿಂದ ಕಲಿಯಲಿ: ಬಿಜೆಪಿಗೆ ಹರೀಶ್ ಕುಮಾರ್ ತಿರುಗೇಟು

Update: 2021-05-28 10:52 GMT

ಮಂಗಳೂರು, ಮೇ 27: ಅಧಿಕಾರದಲ್ಲಿ ಇಲ್ಲದಿದ್ದರೂ ಜನಸೇವೆಯನ್ನು ಹೇಗೆ ಮಾಡಬೇಕು ಎಂಬುದನ್ನು ಬಿಜೆಪಿ ಪಕ್ಷವು ಕಾಂಗ್ರೆಸ್‌ನಿಂದ ಕಲಿಯಬೇಕು. ಬಿಜೆಪಿ ಜಿಲ್ಲಾಧ್ಯಕ್ಷರಿಂದ ಪಾಠವನ್ನು ಕಲಿಯಬೇಕಾಗಿಲ್ಲ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಕೋವಿಡ್ ನಿರ್ವಹಣೆಯಲ್ಲಿ ವಿಫಲವಾಗಿರುವ ರಾಜ್ಯ ಸರಕಾರದ ವೈಫಲ್ಯಗಳ ಬಗ್ಗೆ ವಿಪಕ್ಷವಾಗಿ ಧ್ವನಿ ಎತ್ತಲಾಗಿದೆ. ಆದರೆ ತಮ್ಮ ವೈಫಲ್ಯಗಳನ್ನು ಮರೆ ಮಾಚಲು ಜನರ ಹಾದಿ ತಪ್ಪಿಸುತ್ತಿರುವುದು ಬಿಜೆಪಿಯವರು ಎಂದು ಅವರು ಹೇಳಿದರು.

ಜನರ ಆಕ್ರೋಶ ಸಹಿಸಿಕೊಳ್ಳಲು ಸಾಧ್ಯವಾಗದೆ ಬಿಜೆಪಿ ಇಮೇಜ್ ಉಳಿಸಿಕೊಳ್ಳಲು ಸರ್ಕಸ್ ಮಾಡುತ್ತಿದೆ. ಬಿಜೆಪಿ ಮಾಡುತ್ತಿರುವುದು ಕೋವಿಡ್ ಡ್ಯಾಮೇಜ್ ಕಂಟ್ರೋಲ್ ಅಲ್ಲ. ಬದಲಿಗೆ ಮೋದಿ ಡ್ಯಾಮೇಜ್ ಕಂಟ್ರೋಲ್‌ಗಾಗಿ ಹೋರಾಡುತ್ತಿರುವಂತೆ ಭಾಸವಾಗುತ್ತಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಎಂಟು ವಿಧಾನಸಭಾ ಕ್ಷೇತ್ರ, 14 ಬ್ಲಾಕ್ ಕಾಂಗ್ರೆಸ್ ಘಟಕಗಳ ಮೂಲಕ ಕಾರ್ಯಕರ್ತರು ಹಗಲಿರುಳೆನ್ನದೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲಾ ಕಾಂಗ್ರೆಸ್‌ನಡಿ 247 ಕೋವಿಡ್ ವಾರ್‌ರೂಂ ಕಾರ್ಯ ನಿರ್ವಹಿಸುತ್ತಿದ್ದು, ಟಾಸ್ಕ್ ಫೋರ್ಸ್ ಕಮಿಟಿ ಕೋವಿಡ್ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸುವುದು, ಆ್ಯಂಬುಲೆನ್ಸ್ ಸೇವೆ, ಆಕ್ಸಿಜನ್ ನೆರವು, ಆರೋಗ್ಯ ಮಿತ್ರರ ಸಂಪರ್ಕವಿರಿಸಿ ಅಗತ್ಯ ಸೇವೆಯನ್ನು ನಿಸ್ವಾರ್ಥವಾಗಿ ಮಾಡುತ್ತಿದ್ದಾರೆ. ಎರಡನೆ ಅಲೆಯಲ್ಲಿ 45ಕ್ಕೂ ಅಧಿಕ ಶವ ಸಂಸ್ಕಾರವನ್ನು ಆಯಾ ಧರ್ಮದ ಸಂಪ್ರದಾಯದಂತೆ ನೆರವೇರಿಸಿದ್ದಾರೆ ಎಂದರು.

ಮಂಗಳೂರು ದಕ್ಷಿಣದ ಶಾಸಕರು ಕಾಂಗ್ರೆಸ್‌ಗೆ ರಾಜಧರ್ಮ ಪಾಲಿಸುವಂತೆ ಹೇಳಿದ್ದಾರೆ. ಆದರೆ ರಾಜಧರ್ಮ ಪಾಲಿಸುವಂತೆ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಮೋದಿಯವರಿಗೆ ಮಾಜಿ ಪ್ರಧಾನಿ ವಾಜಪೇಯಿಯವರು ಗೋಧ್ರಾ ಹತ್ಯಾಕಾಂಡದ ಸಂದರ್ಭ ಹೇಳಿದ್ದರು. ಅಂದು ಮುಖ್ಯಮಂತ್ರಿಯಾಗಿದ್ದ ಮೋದಿಯವರು ಇಂದು ಪ್ರಧಾನಿಯಾಗಿದ್ದಾರೆ. ಬಿಜೆಪಿಯ ಸಂಸದರು ಹಾಗೂ ಶಾಸಕರಿಗೆ ಅವರಲ್ಲಿ ರಾಜಧರ್ಮದ ಪಾಠ ಮಾಡಿಸಬೇಕಿದೆ. 135 ವರ್ಷ ಇತಿಹಾಸ ಹೊಂದಿರುವ ಕಾಂಗ್ರೆಸ್‌ಗೆ ಬಿಜೆಪಿಯವರು ರಾಜಧರ್ಮ ಪಾಠ ಹೇಳಿಕೊಡಬೇಕಾಗಿಲ್ಲ ಎಂದು ಹರೀಶ್ ಕುಮಾರ್ ತಿರುಗೇಟು ನೀಡಿದರು.

ಕೋವಿಡ್ ನಿಯಂತ್ರಣಕ್ಕೆ ಕಾಂಗ್ರೆಸ್ ಸಹಕರಿಸುತ್ತಿಲ್ಲವೆಂದು ಆರೋಪಿಸುತ್ತಿರುವ ಬಿಜೆಪಿ, ಕಾಂಗ್ರೆಸ್ ನಾಯಕರ ಯಾವುದೇ ಸಲಹೆಗಳನ್ನು ಸ್ವೀಕರಿಸುವುದಿಲ್ಲ. ಕಾಂಗ್ರೆಸ್‌ನ ಶಾಸಕರು ತಮ್ಮ ಶಾಸಕ ನಿಧಿಯಿಂದ 90 ಕೋಟಿ ರೂ. ಹಾಗೂ ಪಕ್ಷದ ವತಿಯಿಂದ 10 ಕೋಟಿರೂ.ಗಳನ್ನು ಲಸಿಕೆಗಾಗಿ ನೀಡುವುದಾಗಿ ಇದಕ್ಕಾಗಿ ಅನುಮತಿ ಕೋರಿ ಹಲವು ದಿನಗಳಾದರೂ ಸ್ಪಂದಿಸಿಲ್ಲ. ಬಿಜೆಪಿಯವರಿಗೆ ಬೇಕಾಗಿರುವುದು ತಮ್ಮ ವೈಫಲ್ಯದ ವಿರುದ್ಧ ಮಾತನಾಡದೆ ವೌನವಾಗಿರುವ ಸಹಕಾರ. ಸಾಮಾಜಿಕ ಜಾಲತಾಣಗಳು, ಮಾಧ್ಯಮವನ್ನು ನಿಯಂತ್ರಿಸುವ ಕೆಲಸ ಈಗಾಗಲೇ ಬಿಜೆಪಿಯಿಂದ ಆಗಿದೆ. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂಬ ಕಾಂಗ್ರೆಸ್‌ನ ಹೇಳಿಕೆ ದಿನದಿಂದ ದಿನಕ್ಕೆ ನಿಜವಾಗುತ್ತಿದೆ ಎಂದು ಅವರು ಆರೋಪಿಸಿದರು.

ಆರೋಗ್ಯ ಸಚಿವರಾಗಿದ್ದ ಸಂದರ್ಭದಲ್ಲಿ ಪ್ರಸಕ್ತ ಶಾಸಕ ಯು.ಟಿ.ಖಾದರ್ ಏನು ಮಾಡಿದ್ದಾರೆಂಬುದನ್ನು ಉತ್ತಮ ಶಾಸಕರೆಂದು ಗುರುತಿಸಿಕೊಂಡಿದ್ದ, ನಾಲ್ಕು ಅವಧಿಗೆ ಮಂಗಳೂರು ದಕ್ಷಿಣ ಶಾಸಕರಾಗಿದ್ದ ಯೋಗೀಶ್ ಭಟ್ ಅವರ ಜತೆ ಲೇಡಿಗೋಶನ್ ಹಾಗೂ ವೆನ್‌ಲಾಕ್ ಆಸ್ಪತ್ರೆಗೆ ಪ್ರಸಕ್ತ ಶಾಸಕ ವೇದವ್ಯಾಸ ಕಾಮತ್‌ರವರು ಭೇಟಿ ನೀಡಿ ತಿಳಿದುಕೊಳ್ಳಲಿ ಎಂದು ಹರೀಶ್ ಕುಮಾರ್ ಸವಾಲೆಸೆದರು.

ವೆನ್‌ಲಾಕ್‌ನಲ್ಲಿ ಆಯುಷ್ ಕಟ್ಟಡ, ಮಲ್ಪಿಸ್ಪೆಷಾಲಿಟಿ ವಿಭಾಗ ಲೇಡಿಗೋಶನ್ ಆಸ್ಪತ್ರೆ ಹೊಸ ಕಟ್ಟಡ ಯು.ಟಿ.ಖಾದರ್ ಆರೋಗ್ಯ ಸಚಿವರಾಗಿದ್ದಾಗ ಆಗಿರುವುದು. ನಗರ ಆರೋಗ್ಯ ಕೇಂದ್ರ, ಪಿಎಚ್‌ಸಿಗಳು, ಸಮುದಾಯ ಆರೋಗ್ಯ ಕೇಂದ್ರಗಳು ಅವರ ಅವಧಿಯಲ್ಲಿಯೇ ಮೇಲ್ದರ್ಜೆಗೇರಿರುವುದು. ಕಿಡ್ನಿ ರೋಗಿಗಳಿಗೆ ಡಯಾಲಿಸಿಸ್ ವ್ಯವಸ್ಥೆ ಪಿಎಚ್‌ಸಿಗಳಲ್ಲಿ ಮಾಡಿದ್ದು ಅವರೇ, ಎಂಆರ್‌ಐ, ಸಿಟಿಸ್ಕಾನ್, ವೈದ್ಯಕೀಯ ಉಪಕರಣ ಅಷ್ಟು ಮಾತ್ರವಲ್ಲ ರಾಜ್ಯದಲ್ಲಿ ಯು.ಟಿ.ಖಾದರ್ ಅಧಿಕಾರಕ್ಕೆ ಬರುವ ಸಂದರ್ಭ ಇದ್ದ ಒಟ್ಟು 108 ಆ್ಯಂಬುಲೆನ್ಸ್‌ಗಳ ಸಂಖ್ಯೆ 208 ಮಾತ್ರ. ಅದನ್ನು ತಮ್ಮ ಅವಧಿಯಲ್ಲಿ 800ಕ್ಕೆ ಏರಿಸಿದ್ದಾರೆ. ಮೂರು ವರ್ಷದಲ್ಲಿ ಆ ಸಂಖ್ಯೆ ಹೆಚ್ಚಾಗಿಲ್ಲ. ಉಪ್ಪಿನಂಗಡಿಯ ಪಿಎಚ್‌ಸಿ ನೂತನ ಕಟ್ಟಡ ಆಗಿ ಎರಡು ವರ್ಷವಾದರೂ ಉದ್ಘಾಟನೆಯಾಗಿಲ್ಲ. ಅಲ್ಲಿ ಕೋವಿಡ್‌ಗೆ ಸಂಬಂಧಿಸಿ ವೈದ್ಯರ ನೇಮಕಾತಿಯೇ ಆಗಿಲ್ಲ. ಆ ಕಾರ್ಯವನ್ನು ಈಗ ಮಾಡಲಿ. ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಬಿಜೆಪಿ ಪಕ್ಷದ ಶಾಸಕನ ಆಪ್ತ ಬಂಧನವಾಗಿದೆ. ಫಿಲಿಫೈನ್ಸ್, ಸಿಂಗಾಪುರದಂತಹ ಸಣ್ಣ ರಾಷ್ಟ್ರಗಳಿಂದ ಆಕ್ಸಿಜನ್ ಬರುವಂತಹ ಪರಿಸ್ಥಿತಿ ಬಂದಿದ್ದು, ಅದಕ್ಕೆ ಪ್ರಧಾನಿ ಮೋದಿಯವರ ಸ್ಟಿಕ್ಕರ್ ಹಾಕಿ ಇರುವ ಮಾರ್ಯದೆಯನ್ನು ತೆಗೆಯುತ್ತಿರುವುದು. ಇದು ಬಿಜೆಪಿ ಸಾಧನೆ ಎಂದು ಹರೀಶ್ ಕುಮಾರ್ ಟೀಕಿಸಿದರು.

ಮುಖಂಡರಾದ ಸದಾಶಿವ ಉಳ್ಳಾಲ್, ಶಾಲೆಟ್ ಪಿಂಟೋ, ವಿನಯ ರಾಜ್, ಪ್ರಕಾಶ್ ಸಾಲ್ಯಾನ್, ವಿಶ್ವಾಸ್ ಕುಮಾರ್ ದಾಸ್, ಸಲೀಂ, ಸವದ್ ಸುಳ್ಯ, ನಝೀರ್ ಬಜಾಲ್, ನೀರಜ್‌ಪಾಲ್, ಆರಿಫ್, ಮುಸ್ತಫಾ, ಶೇಖರ್ ಕುಕ್ಯಾಡಿ, ಮೋಹನ್, ಡಾ. ಶೇಖರ ಪೂಜಾರಿ, ನಿತ್ಯಾನಂದ, ಅಲಿಸ್ಟರ್ ಡಿಕುನ್ನಾ ಮೊದಲಾದವರು ಉಪಸ್ಥಿತರಿದ್ದರು.

ಕಾಂಗ್ರೆಸ್‌ನ ವಾರ್‌ರೂಂಗೆ ನಿನ್ನೆಯವರೆಗೆ 6800 ಕರೆಗಳು ಬಂದಿದ್ದು, ಪೂರಕವಾಗಿ ಸ್ಪಂದಿಸಲಾಗಿದೆ. 500ಕ್ಕೂ ಅಧಿಕ ಕರೆಗಳು ಆ್ಯಂಬುಲೆನ್ಸ್‌ಗಾಗಿ ಬಂದಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ವತಿಯಿಂದ 13 ಆ್ಯಂಬುಲೆನ್ಸ್‌ಗಳು ಉಚಿತ ಸೇವೆಯನ್ನು ಒದಗಿಸುತ್ತಿವೆ. ಅದರಲ್ಲಿ 6 ಆ್ಯಂಬುಲೆನ್ಸ್‌ಗಲು ಸುಸಜ್ಜಿತವಾಗಿವೆ. ಈ ಬಾರಿ ಕಾಂಗ್ರೆಸ್‌ನಿಂದ ಕೊರೋನ ವಾರಿಯರ್ಸ್ ಸೇರಿದಂತೆ ಆದ್ಯತಾ ವರ್ಗಕ್ಕೆ ದಿನಸಿ ಕಿಟ್ ನೀಡಲಾಗುತ್ತಿದ್ದು, ಈಗಾಗಲೇ 10,000 ಕಿಟ್‌ಗಳನ್ನು ವಿತರಿಸಲಾಗಿದೆ. ಪ್ರತಿದಿನ 4000ಕ್ಕೂ ಅಧಿಕ ಆಹಾರ ಪೊಟ್ಟಣಗಳನ್ನು ಜಿಲ್ಲೆಯಾದ್ಯಂತ ಅರ್ಹರಿಗೆ ವಿತರಿಸಲಾಗುತ್ತಿದೆ. 250ಕ್ಕೂ ಅಧಿಕ ಉಪಹಾರ ವಿತರಣೆ, ಮೂಡಬಿದ್ರೆ ವ್ಯಾಪ್ತಿಯಲ್ಲಿ 3000ಕ್ಕೂ ಅಧಿಕ ಐಸೊಲೇಶನ್ ಕಿಟ್ ವಿತರಿಸಲಾಗಿದ್ದು, 10000 ಕಿಟ್ ವಿತರಿಸುವ ಗುರಿ ಹೊಂದಲಾಗಿದೆ. ವಿವಿಧ ಕಡೆ ಈಗಾಗಲೇ ರಕ್ತದಾನ ಶಿಬಿರ ಮಾಡಿ 700ಕ್ಕೂ ಅಧಿಕ ಯುನಿಟ್ ರಕ್ತ ಸಂಗ್ರಹಿಸಲಾಗಿದ್ದು, ಮೇ 29ರಂದು ದಕ್ಷಿಣ ಬ್ಲಾಕ್ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿದೆ.
-ಹರೀಶ್ ಕುಮಾರ್, ಜಿಲ್ಲಾಧ್ಯಕ್ಷರು, ಕಾಂಗ್ರೆಸ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News