ಲಾಕ್‌ಡೌನ್ ಮಧ್ಯೆ ಮೆಸ್ಕಾಂನಿಂದ ವಿದ್ಯುತ್ ದರ ಏರಿಕೆಯ ಶಾಕ್ ?
ಮಂಗಳೂರು, ಮೇ 30: ಒಂದೆಡೆ ಕೊರೋನ 2ನೆ ಅಲೆ, ಇನ್ನೊಂದೆಡೆ ಲಾಕ್‌ಡೌನ್. ಇವೆಲ್ಲದರ ಮಧ್ಯೆ ಮೆಸ್ಕಾಂ ಗ್ರಾಹಕರಿಗೆ ವಿದ್ಯುತ್ ದರ ಏರಿಕೆಯ ಶಾಕ್ ನೀಡಿದೆ.
ಕೊರೋನ 1ನೆ ಅಲೆಯ ಸಂದರ್ಭ ವಿದ್ಯುತ್ ಬಿಲ್, ನೀರಿನ ಬಿಲ್, ಮನೆ ಬಾಡಿಗೆ ಇತ್ಯಾದಿಗೆ ಸರಕಾರ ಸ್ವಲ್ಪ ರಿಯಾಯಿತಿ ತೋರಿದ್ದರಿಂದ ಈ ಬಾರಿಯೂ ವಿದ್ಯುತ್ ಬಿಲ್, ನೀರಿನ ಬಿಲ್ ಮತ್ತು ಮನೆ ಬಾಡಿಗೆ ಪಾವತಿಗೆ ವಿನಾಯಿತಿ ಉಂಟಾ ಎಂದು ಜನಸಾಮಾನ್ಯರು ಪ್ರಶ್ನಿಸುತ್ತಿರುವ ಮಧ್ಯೆಯೇ ಗ್ರಾಹಕರಿಗೆ ವಿದ್ಯುತ್ ದರ ಏರಿಕೆಯ ಶಾಕ್ ಎದುರಾಗುವ ಸಾಧ್ಯತೆ ನಿಚ್ಛಳವಾಗಿದೆ.
2020ರ ವಿದ್ಯುತ್ ದರ ಪರಿಷ್ಕರಣೆಯು ಕೊರೋನ-ಲಾಕ್‌ಡೌನ್‌ನಿಂದಾಗಿ 7 ತಿಂಗಳ ಕಾಲ ಮುಂದೂಡಿಕೆ ಯಾಗಿತ್ತು. ಅಂದರೆ 2020ರ ನವೆಂಬರ್‌ನಲ್ಲಿ ಪರಿಷ್ಕೃತ ದರ ಜಾರಿಗೆ ಬಂದಿತ್ತು. ಈ ವರ್ಷ ಎಪ್ರಿಲ್ 1ರಿಂದಲೇ ದರ ಪರಿಷ್ಕರಣೆ ಆಗಬೇಕಿತ್ತು. ಆದರೆ ಕೊರೋನ-ಲಾಕ್‌ಡೌನ್‌ನಿಂದಾಗಿ ಅದು ಎರಡು ತಿಂಗಳು ಮುಂದೂಡಲ್ಪಟ್ಟಿವೆ. ಲಾಕ್‌ಡೌನ್ ಮುಗಿದೊಡನೆ ವಿದ್ಯುತ್ ದರ ಪರಿಷ್ಕೃತಗೊಳ್ಳಲಿದೆ ಎಂದು ತಿಳಿದು ಬಂದಿದೆ.
ವಿದ್ಯುತ್ ದರ ಪರಿಷ್ಕರಣೆಗೆ ಸಂಬಂಧಿಸಿ ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ ಸಹಿತ ಎಲ್ಲಾ ಎಸ್ಕಾಂಗಳು ವಿದ್ಯುತ್ ದರ ಪರಿಷ್ಕರಣೆಗೆ ಸಂಬಂಧಿಸಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ)ಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಅಂದರೆ ವಿದ್ಯುತ್ ಖರೀದಿ ವೆಚ್ಚದ ಏರಿಕೆ ಮತ್ತು ಹಣದುಬ್ಬರದ ಕಾರಣ ನಿರ್ವಹಣಾ ವೆಚ್ಚದಲ್ಲಿ ಏರಿಕೆಯ ಹಿನ್ನೆಲೆಯಲ್ಲಿ ಯೂನಿಟ್ ಒಂದಕ್ಕೆ 1.67 ರೂ. ನಂತೆ ವಿದ್ಯುತ್ ದರ ಏರಿಸಬೇಕೆಂದು ಮೆಸ್ಕಾಂ ಕೆಇಆರ್‌ಸಿ ಮುಂದೆ ಮನವಿ ಸಲ್ಲಿಸಿತ್ತು.
2021ರ ಫೆಬ್ರವರಿಯಲ್ಲಿ ಕೆಇಆರ್‌ಸಿ ಸಾರ್ವಜನಿಕ ವಿಚಾರಣೆಯನ್ನು ನಡೆಸಿತ್ತು. ಪರಿಷ್ಕೃತ ದರ ಪ್ರಕಟಿಸುವಷ್ಟರಲ್ಲಿ ಲಾಕ್‌ಡೌನ್ ಜಾರಿಗೆ ಬಂದಿತ್ತು. ಹಾಗಾಗಿ ಮುಂದೂಡಲ್ಪಟ್ಟ ದರ ಪರಿಷ್ಕರಣೆಯು ಶೀಘ್ರ ಪ್ರಕಟಗೊಳ್ಳುವ ಸಾಧ್ಯತೆ ನಿಚ್ಛಳವಾಗಿದೆ.
2019-20ರಲ್ಲಿ ಪ್ರತಿ ಯೂನಿಟ್‌ಗೆ 1.38 ರೂ. ದರ ಏರಿಕೆ ಮಾಡುವಂತೆ ಕೆಇಆರ್‌ಸಿಗೆ ಮೆಸ್ಕಾಂ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ 25ರಿಂದ 33 ಪೈಸೆ ಏರಿಸಲು ಅವಕಾಶ ಕಲ್ಪಿಸಲಾಗಿತ್ತು. 2020-21ರಲ್ಲಿ 62 ಪೈಸೆ ಏರಿಸುವಂತೆ ಮನವಿ ಸಲ್ಲಿಸಿತ್ತು. ಆದರೆ 40 ಪೈಸೆ ಹೆಚ್ಚಿಸಲು ಅನುಮತಿ ನೀಡಿತ್ತು. ಈ ವರ್ಷ 1.67 ರೂ. ದರ ಏರಿಕೆಯ ಬೇಡಿಕೆಯನ್ನು ಮೆಸ್ಕಾಂ ಕೆಇಆರ್‌ಸಿ ಮುಂದೆ ಮಂಡಿಸಿದೆ. ಕೊರೋನ-ಲಾಕ್‌ಡೌನ್‌ನಿಂದ ದರ ಏರಿಕೆಗೆ ಅನುಮತಿ ಸಿಕ್ಕಿಲ್ಲ. ಆದರೆ ಶೀಘ್ರ ಏರಿಕೆಯಾಗಲಿದೆ. ಎಷ್ಟು ಪ್ರಮಾಣದಲ್ಲಿ ದರ ಏರಿಕೆಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ ಮೂಲಗಳು ತಿಳಿಸಿವೆ.
''ವಿದ್ಯುತ್ ದರ ಏರಿಸಬೇಕು ಎಂಬ ಬೇಡಿಕೆಯನ್ನು ಕೆಇಆರ್‌ಸಿ ಮುಂದಿಟ್ಟಿದ್ದೆವು. ಕೆಇಆರ್‌ಸಿ ಕೂಡ ಸಾರ್ವಜನಿಕ ವಿಚಾರಣೆಯನ್ನು ನಡೆಸಿತ್ತು. ಅದರಂತೆ ಪರಿಷ್ಕೃತ ವಿದ್ಯುತ್ ದರವು 2021ರ ಎಪ್ರಿಲ್ 1ರಿಂದ ಜಾರಿಯಾಗಬೇಕಾಗಿತ್ತು. ಆದರೆ ಈವರೆಗೆ ಕೆಇಆರ್‌ಸಿ ಅಥವಾ ಸರಕಾರದಿಂದ ಯಾವುದೇ ಆದೇಶ ಬಂದಿಲ್ಲ.
- ಪ್ರಶಾಂತ್ ಕುಮಾರ್ ಮಿಶ್ರಾ, ವ್ಯವಸ್ಥಾಪಕ ನಿರ್ದೇಶಕರು, ಮೆಸ್ಕಾಂ