ಪಾರಂಪಳ್ಳಿ ಹೊಳೆಗೆ ಕೋಳಿ ತ್ಯಾಜ್ಯ : ಆರೋಪಿಗಳು ವಶ

Update: 2021-05-30 16:18 GMT

ಕೋಟ, ಮೇ 30: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪಾರಂಪಳ್ಳಿ ಹೊಳೆಗೆ ಕೋಳಿ ತ್ಯಾಜ್ಯ ಎಸೆಯುತ್ತಿದ್ದ ಕೋಳಿ ಫಾರ್ಮ್‌ನವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು ಸಂಜೆ ವೇಳೆ ನಡೆದಿದೆ.

ಈ ಹೊಳೆಗೆ ಕಳೆದ ಹಲವು ವರ್ಷಗಳಿಂದ ಕೋಳಿ ತ್ಯಾಜ್ಯ ಹಾಗೂ ಇನ್ನಿತ ತ್ಯಾಜ್ಯಗಳನ್ನು ಎಸೆಯುತ್ತಿದ್ದು ಅಲ್ಲಿನ ಸ್ಥಳೀಯರಿಗೆ ತಲೆನೋವಾಗಿ ಪರಿಣ ಮಿಸಿತು. ಕಳೆದ ಎ.25ರಂದು ಇಲ್ಲಿ ಶೇಖರಣೆಯಾಗಿದ್ದ ಸತ್ತ ಕೋಳಿಯ ತ್ಯಾಜ್ಯ ಗಳನ್ನು ಸ್ಥಳೀಯ ಆಶಾ ಕಾರ್ಯಕರ್ತೆ ಶ್ಯಾಮಲ ಮೂಲಕ ಸ್ಥಳೀಯ ಪಟ್ಟಣ ಪಂಚಾಯತ್ ತೆರೆವು ಗೊಳಿಸಿತ್ತು.

ಅರುಣ್ ಕುಂದರ್ ಎಂಬವರಿಗೆ ಸೇರಿದ ಸಾಲಿಗ್ರಾಮ ಚಿತ್ರಪಾಡಿಯ ಗಿರಿಮುತ್ತು ಕೋಳಿ ಫಾರ್ಮ್‌ನ ಕೋಳಿ ತ್ಯಾಜ್ಯವನ್ನು ಏಸ್ ಟೆಂಪೋದಲ್ಲಿ ತಂದು ಹೊಳೆಗೆ ಹಾಕುತ್ತಿದ್ದು, ಈ ಬಗ್ಗೆ ಮಾಹಿತಿ ತಿಳಿದ ಆಶಾ ಕಾರ್ಯಕರ್ತೆ ಶ್ಯಾಮಲ ಪೂಜಾರಿ ಸ್ಥಳೀಯರ ಸಹಾಯದಿಂದ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಅನುಸೂಯ ಆನಂದರಾಮ ಹೇರ್ಳೆ, ಕೋಳಿ ಫಾರ್ಮ್‌ನ ಪರವಾನಿಗೆ ರದ್ದು ಮಾಡುವುದಾಗಿ ಎಚ್ಚರಿಕೆ ನೀಡಿದರು.

ಸಾಲಿಗ್ರಾಮ ಪಟ್ಟಣಪಂಚಾಯತ್ ಮುಖ್ಯಾಧಿಕಾರಿ ಅರುಣ್ ಬಿ., ಅಕ್ರಮವಾಗಿ ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಕೋಳಿ ತ್ಯಾಜ್ಯ ಎಸೆಯುವರ ಪರವಾನಿಗೆ ಯನ್ನು ರದ್ದುಗೊಳಿಸುವ ಅಥವಾ ಅಮಾನತ್ತಿನಲ್ಲಿಟ್ಟು ಅತ್ಯಧಿಕ ದಂಡ ವಿಧಿಸುವ ಕಾನೂನು ಶೀಘ್ರ ಜಾರಿಗೆ ತರಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೋಟ ಪೊಲೀಸ್ ಠಾಣಾಧಿಕಾರಿ ಸಂತೋಷ್ ಬಿ.ಪಿ., ಪಟ್ಟಣ ಪಂಚಾಯತ್ ಸದಸ್ಯರಾದ ರೇಖಾ ಕೇಶವ ಕರ್ಕೇರ, ಆಶಾ ಕಾರ್ಯ ಕರ್ತೆ ಶ್ಯಾಮಲಾ ಪೂಜಾರಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News