ಮೃತದೇಹಗಳ ಗೌರವಪೂರ್ವಕ ಅಂತ್ಯಸಂಸ್ಕಾರಕ್ಕೆ 3 ಶ್ರೇಣಿಯ ಸಮಿತಿ ರಚಿಸಲು ಕೋರಿ ಸುಪ್ರೀಂಗೆ ಅರ್ಜಿ

Update: 2021-05-30 17:11 GMT

ಹೊಸದಿಲ್ಲಿ, ಮೇ 30: ಕೊರೋನ ರೋಗಿಗಳ ಮೃತದೇಹವನ್ನು ಗೌರವಪೂರ್ಣ ರೀತಿಯಲ್ಲಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಸಮಿತಿಯೊಂದನ್ನು ರಚಿಸಲು ಕೇಂದ್ರ ಸರಕಾರ ಹಾಗೂ ಇತರ ಪ್ರಾಧಿಕಾರಗಳಿಗೆ ನಿರ್ದೇಶಿಸಬೇಕೆಂದು ಕೋರಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಗಂಗಾನದಿಯಲ್ಲಿ ಮೃತದೇಹ ತೇಲಿಬಂದಿದ್ದ ಪ್ರಕರಣವನ್ನು ಉಲ್ಲೇಖಿಸಿ ಸಲ್ಲಿಸಿರುವ ಅರ್ಜಿಯಲ್ಲಿ , ಕೇಂದ್ರ ಮಟ್ಟ, ರಾಜ್ಯಮಟ್ಟ ಮತ್ತು ಗ್ರಾಮ ಪಂಚಾಯತ್ ಮಟ್ಟದ ಮೂರು ಶ್ರೇಣಿಯ  ಸಮಿತಿಯನ್ನು ರಚಿಸಲು ನಿರ್ದೇಶಿಸುವಂತೆ ಕೋರಲಾಗಿದೆ. ಕೊರೋನ ರೋಗಿಗಳ ಮೃತದೇಹವನ್ನು ನದಿಗಳಲ್ಲಿ ವಿಲೇವಾರಿ ಮಾಡುವುದರಿಂದ ನದಿ ತೀರದಲ್ಲಿರುವ ಗ್ರಾಮಗಳಲ್ಲಿ ವಾಸಿಸುತ್ತಿರುವ ಜನರು ಕುಡಿಯುವ ನೀರಿನ ಮೇಲೆ ವಿನಾಶಕಾರಿ ಪರಿಣಾಮ ಉಂಟುಮಾಡಲಿದೆ ಮತ್ತು ಸೋಂಕು ಹರಡುವ ಸಾಧ್ಯತೆಯಿದೆ. ಕೋವಿಡ್ ಸೋಂಕಿಗೆ ಒಳಗಾದವರ ಮೃತದೇಹವನ್ನು ನದಿ ತೀರದಲ್ಲಿ ದಫನ ಮಾಡಲಾಗುತ್ತದೆ. ಮಳೆ ಅಥವಾ ಬಿರುಗಾಳಿ ಬಂದರೆ ಮೃತದೇಹದ ಮೇಲೆ ಸುರಿದ ಮರಳು ಎದ್ದುಹೋಗಿ ಮೃತದೇಹ ಮೇಲಕ್ಕೆ ಕಾಣಿಸಿಕೊಳ್ಳುವ ಘಟನೆಯೂ ನಡೆದಿದೆ ಎಂದು ಅರ್ಜಿದಾರ ವಿನೀತ್ ಜಿಂದಾಲ್ ಉಲ್ಲೇಖಿಸಿದ್ದರು.

ಕೇಂದ್ರ ಸರಕಾರ, ರಾಷ್ಟ್ರೀಯ ಗಂಗಾ ನದಿ ಸ್ವಚ್ಛತಾ ಮಂಡಳಿ, ಉತ್ತರಪ್ರದೇಶ ಮತ್ತು ಬಿಹಾರ ಸರಕಾರ, ಹಾಗೂ ಈ ಎರಡು ರಾಜ್ಯಗಳ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗಳನ್ನು ಪ್ರತಿವಾದಿಗಳು ಎಂದು ಅರ್ಜಿದಾರರು ಉಲ್ಲೇಖಿಸಿದ್ದಾರೆ. ಗಂಗಾ ನದಿಯನ್ನು ಜೀವಾವರಣ ಸೂಕ್ಷ್ಮ ಪ್ರದೇಶವೆಂದು ಘೋಷಿಸಿ ಸಂರಕ್ಷಿಸಲು ಕ್ರಮ ಕೈಗೊಳ್ಳಬೇಕು,  ನದಿ ದಂಡೆಯಲ್ಲಿ ದಫನ ಮಾಡಲಾಗಿರುವ ಎಲ್ಲಾ ಮೃತದೇಹಗಳನ್ನು ಅಲ್ಲಿಂದ ತೆರವುಗೊಳಿಸಲು ಸೂಚಿಸುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ.

ನದಿ ತೀರದ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆ, ಮೃತದೇಹಗಳು ಕಂಡು ಬಂದ ನದಿ ತೀರದ ಗ್ರಾಮಗಳಲ್ಲಿ ಮನೆಮನೆಗೆ ತೆರಳಿ ಕೊರೋನ ಸೋಂಕು ಪರೀಕ್ಷೆ ನಡೆಸುವ ಮೂಲಕ ಸೋಂಕು ಹರಡದಂತೆ, ಗಂಗಾ ನದಿ ತೀರದ ನಿವಾಸಿಗಳಿಗೆ ಲಸಿಕೆ ನೀಡಲು ಕ್ರಮ ಕೈಗೊಳ್ಳುವಂತೆ, ಚಿತಾಗಾರ ಅಥವಾ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸಲು ಹಣ ಪಡೆಯುವುದರಿಂದ ಬಡಜನರಿಗೆ ಸಮಸ್ಯೆಯಾಗುತ್ತಿದ್ದು ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು, ಮೃತದೇಹಗಳನ್ನು ಗೌರವಪೂರ್ವಕವಾಗಿ ವಿಲೇವಾರಿಗೊಳಿಸುವ ಬಗ್ಗೆ ಚಿತಾಗಾರದ, ಸ್ಮಶಾನದ ಸಿಬಂದಿಗಳಲ್ಲಿ ಅರಿವು ಮೂಡಿಸಬೇಕು, ಈ ಸಿಬಂದಿಗಳು ಯಾವುದೇ ಭೀತಿಯಿಲ್ಲದೆ ತಮ್ಮ ಕರ್ತವ್ಯ ನಿರ್ವಹಿಸಲು ಅವರಿಗೆ  ಸೂಕ್ತವಾದ ಸುರಕ್ಷಿತಾ ಸಾಧನಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News