×
Ad

ಉಡುಪಿ: ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ; ಪೋಕ್ಸೋ ಆರೋಪಿಗಳಾದ ತಂದೆ-ಮಗ ಸೆರೆ

Update: 2021-05-31 19:10 IST

ಉಡುಪಿ, ಮೇ 31: ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಲ್ಲಿ ಇಬ್ಬರನ್ನು ಉಡುಪಿ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಇಂದು ಪೋಕ್ಸೋ ಕಾಯಿದೆಯಡಿ ಬಂಧಿಸಿದ್ದಾರೆ.

ಬಳ್ಳಾರಿ ಮೂಲದ ಶಿವಶಂಕರ್ (58) ಮತ್ತು ಆತನ ಮಗ ಸಚಿನ್(28) ಬಂಧಿತ ಆರೋಪಿಗಳು.

ಇವರು ಮಣಿಪಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇರುವ ತಮ್ಮ ಮನೆಯಲ್ಲಿ ವಾಸವಾಗಿರುವ 14ರ ಹರೆಯದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರೆನ್ನಲಾಗಿದೆ. ಈ ಕುರಿತು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕಕ್ಕೆ ಬಂದ ದೂರಿನಂತೆ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ ಆರೋಪಿಗಳ ವಿರುದ್ಧ ಉಡುಪಿ ಮಹಿಳಾ ಪೊಲೀಸ್ ಠಾಣೆಗೆ ಇಂದು ದೂರು ನೀಡಿದರು. ಅದರಂತೆ ಠಾಣೆ ಪೊಲೀಸ್ ನಿರೀಕ್ಷಕ ಪ್ರಮೋದ್ ಮಾರ್ಗದರ್ಶನದಲ್ಲಿ ಉಪನಿರೀಕ್ಷಕಿ ವೈಲೆಟ್ ಫೆಮಿನಾ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಶಿವಶಂಕರ್ ಫುಡ್ ಡೆಲಿವರಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಸಚಿನ್ ಮಣಿಪಾಲದಲ್ಲಿರುವ ಕ್ಯಾಂಟಿನ್‌ನಲ್ಲಿ ದುಡಿಯುತ್ತಿದ್ದ ಎನ್ನಲಾಗಿದೆ.

ಈ ಪ್ರಕರಣದ ಬಗ್ಗೆ ಮಕ್ಕಳ ಸಹಾಯವಾಣಿಗೆ ದೂರು ಬಂದಿದ್ದು ತಕ್ಷಣ ನೊಂದ ಬಾಲಕಿಗೆ ರಕ್ಷಣೆ ಮತ್ತು ಪುನರ್ವಸತಿ ನೀಡುವ ಮೂಲಕ ಆರೋಪಿ ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕಾರ್ಯಾಚರಣೆಯಲ್ಲಿ ರಕ್ಷಣಾಧಿಕಾರಿ (ಅಸಾಂಸ್ಥಿಕ) ಕಪಿಲ, ಮಹಿಳಾ ಠಾಣೆ ಸಿಬ್ಬಂದಿ ಅಶೋಕ್ ಮತ್ತು ಜ್ಯೋತಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News