ಜಾರಕಿಹೊಳಿ ಪ್ರಕರಣದ ಸಂತ್ರಸ್ತೆಗೆ ನ್ಯಾಯ ದೊರಕಿಸಿ: ಮಹಿಳಾ ಕಾಂಗ್ರೆಸ್
ಉಡುಪಿ, ಮೇ 31: ಶಾಸಕ ರಮೇಶ್ ಜಾರಕಿಹೊಳಿ ಅತ್ಯಾಚಾರ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ, ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು. ತನ್ಮೂಲಕ ಸಂತ್ರಸ್ಥೆಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಒತ್ತಾಯಿಸಿದೆ.
ಈ ಪ್ರಕರಣವನ್ನು ಸರ್ಕಾರವು ನಿಭಾಯಿಸುತ್ತಿರುವ ರೀತಿ ನೋಡಿದಾಗ ಈ ಸರಕಾರದಲ್ಲಿ ಹೆಣ್ಣು ಮಕ್ಕಳಿಗೆ ಯಾವ ರಕ್ಷಣೆಯೂ ಇಲ್ಲದಂತಾಗಿದೆ ಮತ್ತು ಕಾನೂನಾತ್ಮಕ ರಕ್ಷಣೆ ದೊರಕಿಸುವುದು ಸಾಧ್ಯವಿಲ್ಲದಂತಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಮೇಶ್ ಜಾರಕಿಹೊಳಿ ಪರವಾಗಿ ನಿಂತಿರುವ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಂದ ಸಂತ್ರಸ್ತ ಯುವತಿಗೆ ನ್ಯಾಯ ಸಿಗುವುದು ಅನುಮಾನವಾಗಿದೆ. ಆದ್ದರಿಂದ ಈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿ, ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ, ಸಂತ್ರಸ್ತೆ ಗೆ ನ್ಯಾಯ ದೊರಕಿಸುವಂತೆ ರಾಜ್ಯಪಾಲರು ಹಾಗೂ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಿಗೆ ರಾಜ್ಯದ ಸಮಸ್ತ ಮಹಿಳೆಯರ ಪರವಾಗಿ ಪತ್ರ ಮೂಲಕ ಮನವಿ ಮಾಡಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.