ಉಡುಪಿ : ಕೊರೋನಕ್ಕೆ ಮತ್ತೆ 4 ಬಲಿ; 519 ಮಂದಿಗೆ ಕೋವಿಡ್ ಪಾಸಿಟಿವ್
ಉಡುಪಿ, ಮೇ 31: ಜಿಲ್ಲೆಯಲ್ಲಿ ಸತತ ನಾಲ್ಕನೇ ದಿನವಾಗಿ ಸೋಮವಾರವೂ ನಾಲ್ವರು ಕೊರೋನ ಸೋಂಕಿಗೆ ಬಲಿಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಕ್ಕೆ ಬಲಿಯಾದವರ ಒಟ್ಟು ಸಂಖ್ಯೆ 333ಕ್ಕೇರಿದೆ. ಇಂದು ಜಿಲ್ಲೆಯಲ್ಲಿ ಪಾಸಿಟಿವ್ ಸಂಖ್ಯೆಯಲ್ಲಿ ಇಳಿಮುಖವಾಗಿದ್ದು, 519 ಮಂದಿಯಲ್ಲಿ ಕೊರೋನ ಸೋಂಕು ದೃಢಪಟ್ಟಿದೆ. 765 ಮಂದಿ ಚಿಕಿತ್ಸೆಯಿಂದ ಗುಣಮುಖ ರಾದರೆ ಸದ್ಯ ಜಿಲ್ಲೆಯಲ್ಲಿ 5092 ಮಂದಿ ಸೋಂಕಿಗೆ ಸಕ್ರಿಯರಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಇಂದು ಜಿಲ್ಲೆಯಲ್ಲಿ ಮೃತಪಟ್ಟ ನಾಲ್ವರಲ್ಲಿ ಮೂವರು ಪುರುಷರು (89, 72, 49 ವರ್ಷ) ಹಾಗೂ 78 ವರ್ಷ ಪ್ರಾಯದ ಮಹಿಳೆ ಸೇರಿದ್ದಾರೆ. ಇವರಲ್ಲಿ ಮೂವರು ಉಡುಪಿ ತಾಲೂಕಿನವರಾದರೆ, ಒಬ್ಬರು ಕಾರ್ಕಳ ತಾಲೂಕಿನವರು. ಇವರೆಲ್ಲರೂ ಕೊರೋನ ರೋಗಲಕ್ಷಣದೊಂದಿಗೆ ಗಂಭೀರ ಉಸಿರಾಟದ ತೊಂದರೆ ಹಾಗೂ ಇತರ ಸಮಸ್ಯೆಗಳಿಗಾ ಚಿಕಿತ್ಸೆಗೆ ದಾಖಲಾಗಿದ್ದರು.
ರವಿವಾರ ಪಾಸಿಟಿವ್ ಬಂದ 519 ಮಂದಿಯಲ್ಲಿ 255 ಮಂದಿ ಪುರುಷರು ಹಾಗೂ 264 ಮಂದಿ ಮಹಿಳೆಯರು. ಇವರಲ್ಲಿ ಉಡುಪಿ ತಾಲೂಕಿನ 231, ಕುಂದಾಪುರ ತಾಲೂಕಿನ 174 ಹಾಗೂ ಕಾರ್ಕಳ ತಾಲೂಕಿನ 113 ಮಂದಿ ಇದ್ದು, ಉಳಿದೊಬ್ಬರು ಹೊರ ಜಿಲ್ಲೆಯವರು. ಇವರಲ್ಲಿ 9 ಮಂದಿ ಕೋವಿಡ್ ಆಸ್ಪತ್ರೆ ಹಾಗೂ 510 ಮಂದಿ ಹೋಮ್ ಐಸೋಲೇಷನ್‌ಗೆ ದಾಖಲಾಗಿದ್ದಾರೆ.
ರವಿವಾರ ಒಟ್ಟು 765 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 53,302ಕ್ಕೇರಿದೆ. ನಿನ್ನೆ ಜಿಲ್ಲೆಯ 2879 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿ ಕೊಂಡಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 58,727 ಆಗಿದೆ ಎಂದು ಡಾ.ಸೂಡ ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 5,92,469 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ.