×
Ad

ಉಡುಪಿ ಜಿಲ್ಲೆಯ 35 ಗ್ರಾಮಗಳಲ್ಲಿ ಜೂ. 2ರಿಂದ 6ರವರೆಗೆ ಸಂಪೂರ್ಣ ಲಾಕ್‌ಡೌನ್ : ಸಚಿವ ಬೊಮ್ಮಾಯಿ

Update: 2021-05-31 21:18 IST

ಉಡುಪಿ, ಮೇ 31: ಜಿಲ್ಲೆಯಲ್ಲಿ ಕೋವಿಡ್ 3ನೇ ಅಲೆಯನ್ನು ಎದುರಿಸುವ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಿದ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮಕ್ಕಳ ಚಿಕಿತ್ಸೆ ಗಾಗಿ ಆಸ್ಪತ್ರೆ ಗಳಲ್ಲಿ ಪ್ರತ್ಯೇಕ ವಾರ್ಡ್‌ಗಳ ನಿರ್ಮಾಣ, ಅಗತ್ಯ ಬೆಡ್‌ಗಳ ವ್ಯವಸ್ಥೆ ಮತ್ತು ಚೈಲ್ಡ್ ವೆಂಟಿಲೇಟರ್‌ಗಳನ್ನು ಅಳವಡಿಸಿಕೊಳ್ಳುವಂತೆ ಸೂಚನೆಗಳನ್ನು ನೀಡಿದ್ದಾರೆ.

ಬೆಂಗಳೂರಿನಿಂದ ಸೋಮವಾರ ಸಂಜೆ ವೀಡಿಯೋ ಸಂವಾದದ ಮೂಲಕ ಜಿಲ್ಲೆಯ ಕೋವಿಡ್ ಸ್ಥಿತಿಗತಿ ಕುರಿತು ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡುತಿದ್ದರು.

ಕೋವಿಡ್ ಪಾಸಿಟಿವಿಟಿ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ 50ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿರುವ ಗ್ರಾಮ ಪಂಚಾಯತ್‌ಗಳನ್ನು ಮುಂದಿನ ಬುಧವಾರದಿಂದ ರವಿವಾರ (2ರಿಂದ 6)ದವರೆಗೆ 5 ದಿನಗಳ ಕಾಲ ಸಂಪೂರ್ಣ ಲಾಕ್‌ಡೌನ್ ಮಾಡುವ ಕುರಿತಂತೆ ಕ್ರಮ ಕೈಗೊಳ್ಳಿ. ಸಂಬಂಧಪಟ್ಟ ಗ್ರಾಮಗಳ ಜನತೆಗೆ ಅಗತ್ಯ ವಸ್ತುಗಳ ಖರೀದಿಗೆ ಒಂದು ದಿನ ಕಾಲಾವಕಾಶ ನೀಡಿ. ನಂತರದ ದಿನಗಳಲ್ಲಿ ಪೂರ್ಣ ಲಾಕ್‌ಡೌನ್ ಮಾಡುವಂತೆ ಸಚಿವ ಬೊಮ್ಮಾಯಿ ಸ್ಪಷ್ಟ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಪ್ರಸ್ತುತ 35 ಗ್ರಾಮ ಪಂಚಾಯತ್‌ಗಳಲ್ಲಿ 50ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿದ್ದು, ಈ ಗ್ರಾಪಂಗಳನ್ನು ಬುಧವಾರದಿಂದ ರವಿವಾರದ ವರೆಗೆ ಸಂಪೂರ್ಣ ಲಾಕ್‌ಡೌನ್ ಮಾಡಲಾಗುವುದು. ಈ ಅವಧಿಯಲ್ಲಿ ಔಷಧ ಅಂಗಡಿ ಮತ್ತು ಕೃಷಿ ಚಟುವಟಿಕೆಗೆ ಮಾತ್ರ ಅವಕಾಶವಿದ್ದು, ಗ್ರಾಮಗಳ ಗಡಿಯನ್ನು ಬ್ಯಾರಿಕೇಡ್ ಮೂಲಕ ಮುಚ್ಚಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಅಲ್ಲದೇ ಪ್ರತೀದಿನದ ಕೋವಿಡ್ ವರದಿಯಂತೆ 50ಕ್ಕೂ ಹೆಚ್ಚು ಸಕ್ರಿಯ ಪಾಸಿಟಿವ್ ಪ್ರಕರಣ ಇರುವ ಗ್ರಾಮ ಪಂಚಾಯತ್‌ ಗಳನ್ನೂ ಸಹ ಸಂಪೂರ್ಣ ಲಾಕ್‌ಡೌನ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಮಾಣವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ ಸಚಿವ ಬೊಮ್ಮಾಯಿ, ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ನಡೆಸಿ, ಶೀಘ್ರದಲ್ಲಿ ಫಲಿತಾಂಶ ನೀಡಿ, ಸೋಂಕಿತರಿಗೆ ತಕ್ಷಣದಿಂದ ಚಿಕಿತ್ಸೆ ಆರಂಭಿಸುವ ಮೂಲಕ ಪಾಸಿಟಿವಿಟಿ ಪ್ರಮಾಣ ಹೆಚ್ಚಾಗದಂತೆ ತಡೆಯಲು ಸಾಧ್ಯವಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕಿ ತರನ್ನು ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸುವಂತೆ ರಾಜ್ಯ ಗೃಹ ಸಚಿವರು ಸೂಚಿಸಿದರು.

 ಜಿಲ್ಲೆಯಲ್ಲಿ ಬ್ಲಾಕ್ ಫಂಗಸ್ ಚಿಕಿತ್ಸೆಗೆ ಅಗತ್ಯವಿರುವ ಔಷಧಗಳನ್ನು ಶೀಘ್ರದಲ್ಲಿ ಸರಬರಾಜು ಮಾಡಲಾಗುವುದು ಎಂದ ಸಚಿವರು, ಕೋವಿಡ್ ಕೇರ್ ಸೆಂಟರ್‌ಗಳಿಗೆ ಆಕ್ಸಿಜನ್ ಕಾನ್ಸಂಟ್ರೇಟರ್‌ಗಳನ್ನು ಅಳವಡಿಸಿ, ರೋಗಿ ಗಳಿಗೆ ವೆಂಟಿಲೇಟರ್‌ಗಳ ಸಮಸ್ಯೆ ಯಾಗದಂತೆ ಎಚ್ಚರವಹಿಸಿ. ಜಿಲ್ಲೆಯಲ್ಲಿ ಸಾವಿನ ಪ್ರಮಾಣವನ್ನು ತಗ್ಗಿಸಲು ಕ್ರಮ ಕೈಗೊಳ್ಳಿ ಎಂದವರು ಹೇಳಿದರು.

ಬ್ಲಾಕ್ ಫಂಗಸ್ ಚಿಕಿತ್ಸೆಯನ್ನು ಎಬಿಆರ್‌ಕೆ ಯೋಜನೆಯಡಿ ಸೇರ್ಪಡೆ ಮಾಡಿ. ಚಿಕಿತ್ಸೆ ನೀಡಲು ಅವಕಾಶ ನೀಡುವಂತೆ ಹಾಗೂ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳನ್ನು ಕೋವಿಡ್ ಕಾರ್ಯಗಳಿಗೆ ಬಳಸಿಕೊಳ್ಳಲು ಅವಕಾಶ ನೀಡುವಂತೆ ಜಿಲ್ಲಾದಿಕಾರಿ ಜಿ.ಜಗದೀಶ್ ಕೋರಿದರು.

ಸಭೆಯಲ್ಲಿ ಶಾಸಕರಾದ ಕೆ.ರಘುಪತಿ ಭಟ್, ಸುನಿಲ್ ಕುಮಾರ್, ಲಾಲಾಜಿ ಆರ್ ಮೆಂಡನ್, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಪಂ ಸಿಇಓ ಡಾ. ನವೀನ್ ಭಟ್, ಎಎಸ್ಪಿ ಕುಮಾರಚಂದ್ರ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ನೂತನ ಡಿಹೆಚ್‌ಓ ಡಾ.ನಾಗಭೂಷಣ ಉಡುಪ, ಜಿಲ್ಲಾ ಸರ್ಜನ್ ಡಾ. ಮಧು ಸೂದನ್ ನಾಯಕ್, ಕೋವಿಡ್ ನೋಡೆಲ್ ಆದಿಕಾರಿ ಡಾ. ಪ್ರಶಾಂತ್ ಭಟ್‌ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಸಂಪೂರ್ಣ ಲಾಕ್‌ಡೌನ್‌ಗೊಳಗಾಗುವ ಗ್ರಾಮಗಳು

ಕುಂದಾಪುರ-ಬೈಂದೂರು ತಾಲೂಕಿನ: ಶಿರೂರು, ಜಡ್ಕಲ್, ಕಂಬದಕೋಣೆ, ನಾಡ, ಕಾವ್ರಾಡಿ, ಹೊಂಬಾಡಿ-ಮಂಡಾಡಿ, ಕೋಟೇಶ್ವರ, ಹಾಲಾಡಿ, ಇಡೂರು ಕುಂಜ್ಞಾಡಿ, ಆಜ್ರಿ, ಆಲೂರು.

ಉಡುಪಿ, ಬ್ರಹ್ಮಾವ, ಕಾಪು ತಾಲೂಕಿನ: 38 ಕಳತ್ತೂರು, 80 ಬಡಗುಬೆಟ್ಟು, ಅಲೆವೂರು, ಪೆರ್ಡೂರು, ತೆಂಕನಿಡಿಯೂರು, ಬೊಮ್ಮರಬೆಟ್ಟು, ಬೆಳಪು, ಬೆಳ್ಳೆ, ಪಡುಬಿದ್ರಿ, ಶಿರ್ವ.

ಕಾರ್ಕಳ, ಹೆಬ್ರಿ ತಾಲೂಕಿನ: ಮಾಳ, ಈದು, ಕುಕ್ಕುಂದೂರು, ಕಡ್ತಲ, ಮರ್ಣೆ, ಪಳ್ಳಿ, ನಿಟ್ಟೆ, ಮಿಯಾರು, ಬೆಳ್ಮಣ್ಣು, ಬೆಳ್ವೆ, ಮುದ್ರಾಡಿ, ವರಂಗ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News