×
Ad

ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ: ಅಂತಿಮ ತೀರ್ಪು ಜೂ.8ಕ್ಕೆ ಮುಂದೂಡಿಕೆ

Update: 2021-05-31 21:21 IST

ಉಡುಪಿ, ಮೇ 31: ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ಅಂತಿಮ ತೀರ್ಪು ಕೋವಿಡ್ ಲಾಕ್‌ಡೌನ್ ಕಾರಣದಿಂದ ಮತ್ತೆ ಮುಂದೂಡಿಕೆಯಾಗಿದ್ದು, ಜೂ.8ರಂದು ಅಂತಿಮ ತೀರ್ಪು ಪ್ರಕಟಿಸುವುದಾಗಿ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.

ಪ್ರಕರಣದ ವಾದ ಪ್ರತಿವಾದದ ಪ್ರಕ್ರಿಯೆಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಅಂತಿಮ ತೀರ್ಪನ್ನು ಮೇ 29ರಂದು ಪ್ರಕಟಿಸುವು ದಾಗಿ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸುಬ್ರಹ್ಮಣ್ಯ ಜೆ.ಎನ್. ಎ.20ರಂದು ಆದೇಶ ನೀಡಿದ್ದರು. ಆದರೆ ಮೇ 29ರಂದು ಕೊರೋನ ಹಿನ್ನೆಲೆಯಲ್ಲಿ ಹೈಕೋರ್ಟ್‌ನ ಆದೇಶದಂತೆ ಕೋರ್ಟ್‌ಗೆ ರಜೆ ಇದ್ದ ಕಾರಣ ಈ ತೀರ್ಪನ್ನು ಮೇ 31ಕ್ಕೆ ಮುಂದೂಡಲಾಗಿತ್ತು.

ಇದೀಗ ಇಂದು ಪ್ರಕರಣದ ಅಂತಿಮ ತೀರ್ಪನ್ನು ನ್ಯಾಯಾಲಯ ಮತ್ತೆ ಮುಂದೂಡಿ ಆದೇಶ ನೀಡಿದೆ. ಅಲ್ಲದೆ ಪ್ರಕರಣದ ಪ್ರಮುಖ ಆರೋಪಿ ಭಾಸ್ಕರ ಶೆಟ್ಟಿ ಅವರ ಪತ್ನಿ ರಾಜೇಶ್ವರಿ ಶೆಟ್ಟಿಗೆ ಜೀವಬೆದರಿಕೆ ಇರುವ ಹಿನ್ನೆಲೆಯಲ್ಲಿ ಸೂಕ್ತ ಪೊಲೀಸ್ ಭದ್ರತೆಯನ್ನು ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಮಣಿಪಾಲ ಪೊಲೀಸರಿಗೆ ನ್ಯಾಯಾಧೀಶರು ಆದೇಶಿಸಿದರು.

 ಜೂ.8ರಂದು ರಾಜೇಶ್ವರಿ ಶೆಟ್ಟಿ ಹಾಗೂ ಪ್ರಕರಣದ ಸಾಕ್ಷನಾಶ ಆರೋಪಿ ರಾಘವೇಂದ್ರ ಕಡ್ಡಾಯವಾಗಿ ನ್ಯಾಯಾಲಯದಲ್ಲಿ ಹಾಜರು ಇರುವಂತೆ ಸೂಚಿಸ ಲಾಗಿದೆ. ಬೆಂಗಳೂರಿನ ಜೈಲಿನಲ್ಲಿರುವ ಆರೋಪಿಗಳಾದ ನವನೀತ್ ಶೆಟ್ಟಿ ಹಾಗೂ ನಿರಂಜನ್ ಭಟ್ ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರಿರುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ. ಪ್ರಕರಣ ಇನ್ನೋರ್ವ ಸಾಕ್ಷನಾಶ ಆರೋಪಿ ಶ್ರೀನಿವಾಸ ಭಟ್ ಈಗಾಗಲೇ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News