ಪಾದೂರು: ಅರಣ್ಯ ಇಲಾಖೆಯ ಬೋನಿಗೆ ಬಿದ್ದ ಚಿರತೆ
Update: 2021-05-31 21:26 IST
ಕಾಪು, ಮೇ 31: ಮಜೂರು ಗ್ರಾಪಂ ವ್ಯಾಪ್ತಿಯ ಪಾದೂರು ಕುರಾಲು ಜನವಸತಿ ಪ್ರದೇಶದಲ್ಲಿ ಜನರಲ್ಲಿ ಭೀತಿ ಹುಟ್ಟಿಸುತ್ತಿದ್ದ ಚಿರತೆಯೊಂದು ರವಿವಾರ ತಡರಾತ್ರಿ ಅರಣ್ಯ ಇಲಾಖೆಯ ಬೆನಿಗೆ ಬಿದ್ದಿರುವ ಬಗ್ಗೆ ವರದಿಯಾಗಿದೆ.
ಕುರಾಲ್ ರೆನ್ನಿ ಕುಂದರ್ ಎಂಬವರ ಮನೆ ಬಳಿ ಚಿರತೆಯ ಓಡಾಟದ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆಯವರು, ಕೆಲವು ದಿನಗಳ ಹಿಂದೆ ಚಿರತೆಯ ಸೆರೆಗಾಗಿ ಬೋನನ್ನು ಇರಿಸಿದ್ದರು. ರಾತ್ರಿ ವೇಳೆ ಬೇಟೆಯನ್ನು ಅರಸಿ ಬಂದ ಚಿರತೆಯು ಬೋನಿನ ಒಳಗೆ ಬಂಧಿಯಾಗಿದೆ.
ಬಳಿಕ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಚಿರತೆಯನ್ನು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. ಇದನ್ನು ನಾಲ್ಕು ವರ್ಷ ಪ್ರಾಯದ ಗಂಡು ಚಿರತೆ ಎಂದು ಗುರುತಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಜೀವನ್ ದಾಸ್ ಶೆಟ್ಟಿ, ಗುರುಪ್ರಸಾದ್, ಅರಣ್ಯ ರಕ್ಷಕರಾದ ಎಚ್.ಜಯರಾಮ ಶೆಟ್ಟಿ, ಅಭಿಲಾಷ್, ಪುರುಷೋತ್ತಮ ಹಾಗೂ ಕ್ಲಿಪರ್ಡ್ ಲೋಬೊ ಪಾಲ್ಗೊಂಡಿದ್ದರು.