ಸೆಂಟ್ರಲ್ ಮಾರುಕಟ್ಟೆ ಕಟ್ಟಡ ನೆಲಸಮಕ್ಕೆ ಸಿಐಟಿಯು ಖಂಡನೆ
ಮಂಗಳೂರು, ಮೇ 31: ನಗರದ ಸೆಂಟ್ರಲ್ ಮಾರುಕಟ್ಟೆ ಕಟ್ಟಡವನ್ನು ಯಾವುದೇ ಒಂದು ಮುನ್ಸೂಚನೆ ನೀಡದೆ ಏಕಾಏಕಿ ಪೋಲಿಸ್ ಬಲಪ್ರಯೋಗದಿಂದ ಮಾಧ್ಯಮದವರನ್ನು ಕೂಡ ಹತ್ತಿರಕ್ಕೆ ಸುಳಿಯಲು ಬಿಡದೆ ನೆಲಸಮ ಮಾಡಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಳೆದ ವರ್ಷವೇ ಕೊರೋನದ ನೆಪದಲ್ಲಿ ಸುರಕ್ಷಿತ ಅಂತರವನ್ನು ಕಾಪಾಡುವ ನಿಟ್ಟಿನಲ್ಲಿ ಮಾರುಕಟ್ಟೆಯ ವ್ಯಾಪಾರಸ್ಥರನ್ನು ಬೈಕಂಪಾಡಿ ಎಪಿಎಂಸಿ ಯಾರ್ಡಿಗೆ ಸ್ಥಳಾಂತರಿಸಲಾಯಿತು. ವ್ಯಾಪಾರಸ್ಥರ ಪ್ರಬಲ ವಿರೋಧದ ಮಧ್ಯೆಯೂ ಕೊರೋನಾದ ಸಂಕಷ್ಟದ ಕಾಲಘಟ್ಟದಲ್ಲಿ ಜಿಲ್ಲಾಡಳಿತದ ನಿರ್ಧಾರಕ್ಕೆ ಸಹಕರಿಸಲಾಯಿತು. ಬಳಿಕ ಅಲ್ಲಿ ವ್ಯಾಪಾರಕ್ಕೆ ಅವಕಾಶ ಕೊಡದೆ ಇದೀಗ ನೆಲಸಮ ಮಾಡಲಾಗಿದೆ. ದ.ಕ.ಜಿಲ್ಲೆಯ ಆರ್ಥಿಕತೆಯ ಜೀವನಾಡಿಯಾದ ಸೆಂಟ್ರಲ್ ಮಾರುಕಟ್ಟೆಯಲ್ಲಿ 600ರಷ್ಟು ವ್ಯಾಪಾರಿ ಗಳು ಕೆಲವು ದಶಕಗಳಿಂದ ವ್ಯಾಪಾರ ಮಾಡುತ್ತಿದ್ದು, ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಿಲ್ಲ. ನೂತನ ಕಟ್ಟಡದಲ್ಲಿ ವ್ಯಾಪಾರ ಮಾಡಲು ಮೊದಲ ಪ್ರಾಶಸ್ತ್ಯವನ್ನು ಈ ವ್ಯಾಪಾರಿಗಳಿಗೆ ನೀಡಬೇಕು. ಇಲ್ಲದಿದ್ದಲ್ಲಿ ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳ ಜೊತೆಗೂಡಿ ಪ್ರಬಲ ಹೋರಾಟವನ್ನು ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.