ದ.ಕ. ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ಮಳೆ
Update: 2021-05-31 22:20 IST
ಮಂಗಳೂರು, ಮೇ 31: ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಸೋಮವಾರ ಉತ್ತಮ ಮಳೆಯಾಗಿದೆ. ಅಲ್ಲದೆ ಹಲವು ಇತರೆಡೆಗಳಲ್ಲಿ ಮೋಡ ಕವಿದ ಬಿಸಿಲಿನ ವಾತಾವರಣದೊಂದಿಗೆ ಸಾಮಾನ್ಯ ಮಳೆ ಸುರಿದಿದೆ.
ಬೆಳ್ತಂಗಡಿಯ ನೆರಿಯದಲ್ಲಿ ಜಿಲ್ಲೆಯಲ್ಲೇ ಅತ್ಯಧಿಕ 40.5 ಮಿ.ಮೀ. ಮಳೆಯಾಗಿದೆ. ಕಡಬ, ಸುಬ್ರಹ್ಮಣ್ಯ, ಪುತ್ತೂರು ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ಮಂಗಳೂರು ನಗರದಲ್ಲಿ ಹಗಲು ಮಳೆ-ಬಿಸಿಲಿನ ವಾತಾವರಣವಿತ್ತು.
ಸೋಮವಾರದ ಗರಿಷ್ಠ ತಾಪಮಾನ 31.2 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 23.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಪೂರ್ವ ಮುಂಗಾರು ಮಳೆಯ ಅವಧಿ ಸೋಮವಾರಕ್ಕೆ ಕೊನೆಗೊಂಡಿದೆ. ತೌಕ್ತೆ ಚಂಡಮಾರುತದ ಪ್ರಭಾವದಿಂದ ಪೂರ್ವ ಮುಂಗಾರು ಮಳೆ ಉತ್ತಮವಾಗಿತ್ತು. ಜೂ.1ರಿಂದ ಮುಂಗಾರು ಆರಂಭವಾಗಬೇಕಿತ್ತು. ಆದರೆ ಕೇರಳಕ್ಕೆ ಇನ್ನೂ ಮುಂಗಾರು ಪ್ರವೇಶಿಸದ ಕಾರಣ ಕರ್ನಾಟಕ ಕರಾವಳಿಗೆ ಮುಂಗಾರು ತಲುಪಲು ತಡವಾಗಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.