ಅಡ್ಯಾರ್ : ಸಹೋದರರಿಗೆ ತಂಡದಿಂದ ಹಲ್ಲೆ ಆರೋಪ; ದೂರು
ಮಂಗಳೂರು, ಮೇ 31: ನಗರ ಹೊರವಲಯದ ಅಡ್ಯಾರ್ ಪೆಟ್ರೋಲ್ ಪಂಪ್ ಬಳಿ ತಂಡವೊಂದು ಲಾರಿ ಮಾಲಕ ಮತ್ತವರ ಸಹೋದರನಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಣ್ಣೂರು ನಿವಾಸಿಗಳಾದ ಪಜ್ಜು, ಬಜಾಲ್‌ನ ನೌಫಲ್ ಮತ್ತು ಇನ್ನೊಬ್ಬ ಪ್ರಕರಣದ ಆರೋಪಿಗಳು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಲಾರಿ ಮಾಲಕ ಮುಹಮ್ಮದ್ ಅಲ್ತಾಫ್ ಮತ್ತವರ ಸಹೋದರ ಮುಹಮ್ಮದ್ ಸೋಮವಾರ ಬೆಳಗ್ಗೆ 8:30ರ ವೇಳೆಗೆ ಅಡ್ಯಾರ್ ಪೆಟ್ರೋಲ್ ಪಂಪ್ ಬಳಿ ತಮ್ಮ ಬಾಬ್ತಿನ ಲಾರಿಗಾಗಿ ಕಾಯುತ್ತಿದ್ದರು. ಈ ಸಂದರ್ಭ ಕಣ್ಣೂರಿನ ಪಜ್ಜು ಎಂಬಾತ ಬೈಕಿನಲ್ಲಿ ಬಂದು ವಿನಾ ಕಾರಣ ಗಲಾಟೆ ಮಾಡಿದ್ದಲ್ಲದೆ ಲಾರಿಗೆ ಬೈಕ್ ಅಡ್ಡ ಹಾಕಿದ್ದಾನೆ. ಬಳಿಕ ಮೊಬೈಲ್‌ನಲ್ಲಿ ಯಾರನ್ನೋ ಬರಲು ಹೇಳಿದ್ದು, ಅದರಂತೆ ಕಾರಿನಲ್ಲಿ ಬಂದಿದ್ದ ಇಬ್ಬರು ‘ನಾವು ಜೈಲಿನಿಂದ ಬಂದಿರುತ್ತೇವೆ’ ಎನ್ನುತ್ತಾ ಅಲ್ತಾಫ್ ಗೆ ಹಲ್ಲೆ ನಡೆಸಿ, ಮುಹಮ್ಮದ್ ರಿಗೆ ಚಾಕುವಿನಿಂದ ಇರಿದು ಬಲಬುಜಕ್ಕೆ ಚುಚ್ಚಿದ್ದಾನೆ. ಅಲ್ಲದೆ ಲಾರಿ ಚಾಲಕನನ್ನು ಕೆಳಗೆ ಎಳೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ‘ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ’ ಎಂದು ಬೆದರಿಕೆ ಹಾಕಿದ್ದಾರೆಂದು ದೂರಲಾಗಿದೆ.