×
Ad

ಉಡುಪಿ; ಗ್ರಾಪಂಗಳಲ್ಲಿ ಕೋವಿಡ್ ಸೋಂಕು ಶೂನ್ಯಕ್ಕೆ ಇಳಿಸಿ: ಸಚಿವ ಕೋಟ

Update: 2021-06-01 19:49 IST

ಉಡುಪಿ, ಜೂ.1: ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳನ್ನು ಶೂನ್ಯಕ್ಕೆ ತರುವ ನಿಟ್ಟಿನಲ್ಲಿ ಎಲ್ಲಾ ಗ್ರಾಪಂ ಕಾರ್ಯಪಡೆಗಳು ಕಾರ್ಯೋನ್ಮುಖವಾಗುವಂತೆ ರಾಜ್ಯ ಮುಜರಾಯಿ ಹಾಗೂ ಹಿಂದುಳಿದವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಮಂಗಳವಾರ ಕುಂದಾಪುರ ವಿಧಾನಸಭಾ ಕ್ಷೇತ್ರದ ಗ್ರಾಪಂಗಳೊಂದಿಗೆ ನಡೆದ ವೀಡಿಯೋ ಸಂವಾದದಲ್ಲಿ ಅವರು ಮಾತನಾಡು ತಿದ್ದರು. ಎಲ್ಲಾ ಗ್ರಾಮಗಳು 10 ದಿನದೊಳಗೆ ತಮ್ಮ ವ್ಯಾಪ್ತಿಯಲ್ಲಿ ಪ್ರಸ್ತುತ ಕಂಡುಬಂದಿರುವ ಕೋವಿಡ್ ಪ್ರಕರಣಗಳನ್ನು ಶೂನ್ಯಕ್ಕೆ ಇಳಿಸಿ, ಯಾವುದೇ ಹೊಸ ಪ್ರಕರಣಗಳು ಕಂಡು ಬರದಂತೆ ಕಾರ್ಯನಿರ್ವಹಿಸಬೇಕು. ಇದಕ್ಕಾಗಿ ತಮ್ಮ ವ್ಯಾಪ್ತಿಯಲ್ಲಿ ಕಠಿಣ ನಿರ್ಬಂಧಗಳನ್ನು ವಿಧಿಸಿ, ಕೋವಿಡ್ ಹರಡುವುದನ್ನು ನಿಯಂತ್ರಿಸಿ, ಕೋವಿಡ್ ಮುಕ್ತ ಗ್ರಾಮಗಳನ್ನಾಗಿಸಬೇಕು ಎಂದರು.

ಗ್ರಾಮದಲ್ಲಿ ಕೋವಿಡ್ ಸೋಂಕಿತರ ಮನೆಗಳನ್ನು ಸೀಲ್‌ಡೌನ್ ಮಾಡಿದ ನಂತರ ಅವರ ಜೀವನ ನಿರ್ವಹಣೆಗೆ ಯಾವುದೇ ತೊಂದರೆಯಾಗದಂತೆ ಪಂಚಾಯತ್ ವತಿಯಿಂದ ಆಹಾರ್ ಕಿಟ್‌ಗಳನ್ನು ವಿತರಿಸಬೇಕು. ಪ್ರತಿದಿನ ಅವರ ಆಕ್ಸಿಜನ್ ಪ್ರಮಾಣ ವನ್ನು ಪಲ್ಸ್ ಆಕ್ಸಿಮೀಟರ್ ಮೂಲಕ ಪರೀಕ್ಷಿಸಬೇಕು. ಗ್ರಾಪಂ ಸದಸ್ಯರು ಮತ್ತು ಅಧಿಕಾರಿಗಳು ಪ್ರತಿದಿನ ಅವರನ್ನು ಭೇಟಿ ಮಾಡಿ, ಅವರಲ್ಲಿ ಒಂಟಿಯಲ್ಲ ಎಂಬ ಭಾವನೆ ಮೂಡಿಸಿ, ಧೈರ್ಯ ತುಂಬಬೇಕು ಎಂದರು.

ಗ್ರಾಪಂ ವ್ಯಾಪಿಯಲ್ಲಿ 50ಕ್ಕಿಂತ ಹೆಚ್ಚು ಪ್ರಕರಣಗಳು ಕಂಡುಬಂದಲ್ಲಿ ಕಂಪ್ಲೀಟ್ ಲಾಕ್‌ಡೌನ್ ಮಾಡಲು ಈಗಾಗಲೇ ನಿರ್ಧರಿಸಿದ್ದು, ಗ್ರಾಮಗಳ ಗಡಿಯಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸುವ ಮೂಲಕ ಇತರೆ ಪಂಚಾಯತ್‌ಗಳ ಸಾರ್ವಜನಿಕರು ಗ್ರಾಮದೊಳಗೆ ಬರದಂತೆ ಮತ್ತು ಇಲ್ಲಿನ ಗ್ರಾಮಸ್ಥರು ಹೊರ ಹೋಗದಂತೆ ಕಾರ್ಯಪಡೆಯ ಸದಸ್ಯರು ಎಚ್ಚರ ವಹಿಸಬೇಕು. ಕೋವಿಡ್ ಹರಡು ವುದನ್ನು ನಿಯಂತ್ರಿಸಲು ಹಾಗೂ ಸಾರ್ವಜನಿಕ ಆರೋಗ್ಯಕ್ಕೆ ತೊಂದರೆ ಯಾಗಬಾರದು ಎನ್ನುವ ಉದ್ದೇಶದಿಂದ ಗ್ರಾಮಗಳನ್ನು ಲಾಕ್‌ಡೌನ್ ಮಾಡು ತ್ತಿದ್ದು, ಸಾರ್ವಜನಿಕರೂ ಅಗತ್ಯ ಸಹಕಾರ ನೀಡಬೇಕು ಎಂದು ಸಚಿವ ಕೋಟ ಮನವಿ ಮಾಡಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಪರೀಕ್ಷೆ ನಡೆಸಿ ಪಾಸಿಟಿವ್ ಬಂದರೆ, ಈ ಮಾಹಿತಿಗಳನ್ನು ಗ್ರಾಪಂಗಳಿಗೆ ನೀಡದ ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸೂಚನೆ ನೀಡಿದ ಸಚಿವ ಕೋಟ, ಹೋಂ ಐಸೋಲೇಶನ್ ನಲ್ಲಿದ್ದು ಸಾರ್ವಜನಿಕ ವಾಗಿ ಓಡಾಡುವವರ ವಿರುದ್ಧ ಸಹ ಪ್ರಕರಣ ದಾಖಲಿಸಿ ಹಾಗೂ ಅಂತಹವರ ಕೈಗಳಿಗೆ ಸೀಲ್ ಹಾಕುವಂತೆ ಸೂಚನೆ ನೀಡಿದರು.

ಎಲ್ಲಾ ಗ್ರಾಪಂ ಕಾರ್ಯಪಡೆಗಳು ವಾರದಲ್ಲಿ 2 ಬಾರಿ ಸಭೆ ಸೇರಿ ತಾವು ಕೈಗೊಳ್ಳಬೆಕಾದ ಕಾರ್ಯಗಳ ಕುರಿತು ಯೋಜನೆ ಹಾಕಿಕೊಂಡು ಅದರಂತೆ ಕಾರ್ಯನಿರ್ವಹಿಸಬೇಕು. ಆಶಾ ಹಾಗೂ ಆರೋಗ್ಯ ಕಾರ್ಯಕರ್ತೆಯರು ನಿಯಮಿತವಾಗಿ ಸೋಂಕಿತರ ಮನೆಗಳಿಗೆ ಭೇಟಿ ನೀಡಬೇಕು. ಸೋಂಕಿತರ ಪ್ರಾಥಮಿಕ ಸಂಪರ್ಕಿತರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು ಎಂದರು.

ಗ್ರಾಪಂಗಳ ವ್ಯಾಪ್ತಿಯಲ್ಲಿ ನಿರ್ಬಂಧಗಳ ನಡುವೆ ಕ್ರಿಕೆಟ್ ಆಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಸಚಿವರು, ಕೋವಿಡ್ ನಿಯಮಗಳನ್ನು ಉಲ್ಲಂಸುವವರ ವಿರುದ್ಧ ಕ್ರಮ ಕೈಗೊಳ್ಳಲು ಅಗತ್ಯವಿದ್ದಲ್ಲಿ ಪೊಲೀಸರ ನೆರವು ಪಡೆಯಿರಿ ಎಂದು ಸಲಹೆ ನೀಡಿದರು.

ಗ್ರಾಪಂಗಳಲ್ಲಿ ಕೋವಿಡ್ ಲಸಿಕೆ ನೀಡುವ ಸಂದರ್ಭದಲ್ಲಿ ಗೊಂದಲಗಳು ಉಂಟಾಗದಂತೆ ನೋಡಿಕೊಳ್ಳಿ. ಪ್ರತಿದಿನ ಪಂಚಾಯತ್‌ ಗಳಿಗೆ ಪೂರೈಕೆಯಾಗುವ ಲಸಿಕೆಯ ಪ್ರಮಾಣವನ್ನು ಮುಂಚಿತವಾಗಿ ತಿಳಿದುಕೊಂಡು, ಜನಸಂದಣಿ ಸೇರದಂತೆ ಹಾಗೂ ಗೊಂದಲಗಳು ಉಂಟಾಗದಂತೆ ಸೂಕ್ತ ಯೋಜನೆ ರೂಪಿಸಿಕೊಂಡು ಲಸಿಕೆ ನೀಡುವ ವ್ಯವಸ್ಥೆ ಮಾಡಿ ಎಂದರು.

ಜಿಲ್ಲೆಯಲ್ಲಿ ಗ್ರಾಪಂ ಸದಸ್ಯರನ್ನು ಫ್ರಂಟ್‌ಲೈನ್ ವಾರಿಯರ್ಸ್‌ ಎಂದು ಘೋಷಿಸುವಂತೆ ತಾವು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದ ಮನವಿಯ ಕುರಿತಂತೆ ಇಂದು ಅಥವಾ ನಾಳೆ ಸರಕಾರಿ ಆದೇಶ ಆಗಲಿದ್ದು, ಆದ್ಯತೆಯಲ್ಲಿ ಲಸಿಕೆ ನೀಡಲಾಗುುದು ಎಂದು ಸಚಿವರು ನುಡಿದರು.

ವೈದ್ಯರ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದಲ್ಲಿ ಎಲ್ಲಾ ಪಂಚಾಯತ್ ಜನಪ್ರನಿಧಿಗಳೂ ಸಹ ಸಕ್ರಿಯವಾಗಿ ಭಾಗವಹಿಸುವಂತೆ ತಿಳಿಸಿದ ಸಚಿವರು, ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳನ್ನು ಕೋವಿಡ್ ಕಾರ್ಯದಲ್ಲಿ ಬಳಸಿಕೊಳ್ಳುವ ಕುರಿತಂತೆ ಸರಕಾರದ ಮಟ್ಟದಲ್ಲಿ ಚರ್ಚಿಸುವುದಾಗಿ ಹೇಳಿದರು.

ಸಭೆಯಲ್ಲಿ ಜಿಪಂ ಸಿಇಓ ಡಾ. ನವೀನ್ ಭಟ್, ವಿವಿಧ ಗ್ರಾಪಂಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಿಡಿಒಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News