ಅಲಿಗಡ ಕಳ್ಳಭಟ್ಟಿ ದುರಂತ: ಮೃತರ ಸಂಖ್ಯೆ 36ಕ್ಕೇರಿಕೆ, 17 ಜನರ ಬಂಧನ

Update: 2021-06-01 14:36 GMT

ಅಲಿಗಡ ಕಳ್ಳಭಟ್ಟಿ ದುರಂತ: ಮೃತರ ಸಂಖ್ಯೆ 36ಕ್ಕೇರಿಕೆ, 17 ಜನರ ಬಂಧನ

ಅಲಿಗಡ,ಜೂ.1: ಉತ್ತರ ಪ್ರದೇಶದ ಅಲಿಗಡ ಜಿಲ್ಲೆಯಲ್ಲಿ ವಿಷಪೂರಿತ ಮದ್ಯ ಸೇವನೆಯಿಂದ ಇನ್ನೂ 11 ಜನರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 36ಕ್ಕೇರಿದೆ.

ಕಳ್ಳಭಟ್ಟಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ 17 ಜನರನ್ನು ಪೊಲೀಸರು ಬಂಧಿಸಿದ್ದಾರೆ. 22 ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. 
ಉತ್ತರ ಪ್ರದೇಶ ಅಬಕಾರಿ ಆಯುಕ್ತ ಪಿ.ಗುರುಪ್ರಸಾದ ಅವರನ್ನು ಹುದ್ದೆಯಿಂದ ತೆರವುಗೊಳಿಸಲಾಗಿದೆ.

ಶುಕ್ರವಾರದಿಂದ ಒಟ್ಟು 71 ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು,ಈ ಪೈಕಿ 36 ಜನರು ವಿಷಪೂರಿತ ಮದ್ಯ ಸೇವಿಸಿ ಮೃತಪಟ್ಟಿರುವುದು ದೃಢಪಟ್ಟಿದೆ. ಇತರ 35 ಜನರೂ ವಿಷಪೂರಿತ ಮದ್ಯ ಸೇವಿಸಿ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಆದರೆ ವಿಸೆರಾ ವರದಿ ಬಂದ ನಂತರವೇ ಸಾವಿಗೆ ಕಾರಣ ದೃಢಪಡಬೇಕಿದೆ ಎಂದು ಅಲಿಗಡದ ಮುಖ್ಯ ವೈದ್ಯಾಧಿಕಾರಿ ಭಾನುಪ್ರತಾಪ ಕಲ್ಯಾಣಿ ತಿಳಿಸಿದರು.

ವಿಷಪೂರಿತ ಮದ್ಯಸೇವನೆಯಿಂದ ಮೃತರ ಪೈಕಿ 10 ಜನರು ಅಲಿಗಡದ ಕರ್ಸುವಾ ಗ್ರಾಮದವರಾಗಿದ್ದಾರೆ. ಗ್ರಾಮಸ್ಥರಿಗೆ ಮದ್ಯವನ್ನು ಮಾರಾಟ ಮಾಡಿದ್ದ ಅಂಗಡಿಯ ಪರವಾನಿಗೆ ಕಳೆದ ವರ್ಷದ ಮಾರ್ಚ್ನಲ್ಲಿ ಅಂತ್ಯಗೊಂಡಿತ್ತು ಮತ್ತು ಅದರ ವಿರುದ್ಧ ಅಕ್ಟೋಬರ್ನಲ್ಲಿ ದೂರನ್ನು ದಾಖಲಿಸಲಾಗಿತ್ತು. ಉತ್ತರ ಪ್ರದೇಶ ಸರಕಾರವು ಹಲವಾರು ಜಿಲ್ಲೆಗಳಲ್ಲಿ ಮದ್ಯದಂಗಡಿಗಳು ತೆರೆಯಲು ಅವಕಾಶ ಕಲ್ಪಿಸಿ ಕಳೆದ ಮೇ ತಿಂಗಳಲ್ಲಿ ಕೋವಿಡ್-19 ನಿರ್ಬಂಧಗಳನ್ನು ಸಡಿಲಿಸಿದ ಬಳಿಕ ಈ ಅಂಗಡಿಯು ಪುನರಾರಂಭಗೊಂಡಿತ್ತು ಎಂದು ಮಾಧ್ಯಮ ವರದಿಗಳು ತಿಳಿಸಿವೆ.
  
ತನ್ಮಧ್ಯೆ ಅಧಿಕಾರಿಗಳು 12 ಶವಗಳ ಮರಣೋತ್ತರ ಪರೀಕ್ಷೆ ಡೆಸಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಅವರ ಕುಟುಂಬಗಳಿಗೆ ರಾಜ್ಯ ಸರಕಾರವು ಪರಿಹಾರ ನೀಡಬೇಕು ಎಂದು ಎಸ್ಪಿ ನಾಯಕ ಝಮೀರುಲ್ಲಾ ಆಗ್ರಹಿಸಿದ್ದಾರೆ.
  
ಈ 12 ಶವಗಳಿಗೆ ಸಂಬಂಧಿಸಿದಂತೆ ಬಿಎಸ್ಪಿ ಕೂಡ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದೆ. ಸರಕಾರವು ಸಾವುಗಳ ಸಂಖ್ಯೆಯನ್ನು ಬಚ್ಚಿಡುತ್ತಿದೆ ಮತ್ತು ಮದ್ಯ ಮಾಫಿಯಾವನ್ನು ಬೆಂಬಲಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News