×
Ad

ಉಡುಪಿ: ಜೂ.2ರಿಂದ 35 ಗ್ರಾಪಂಗಳಲ್ಲಿ ಸಂಪೂರ್ಣ ಲಾಕ್‌ಡೌನ್; ಅಗತ್ಯವಸ್ತುಗಳ ಖರೀದಿಗೆ ಮುಗಿಬಿದ್ದ ಜನತೆ

Update: 2021-06-01 20:51 IST

ಉಡುಪಿ, ಜೂ.1: ಜಿಲ್ಲೆಯಲ್ಲಿ 50ಕ್ಕೂ ಅಧಿಕ ಕೊರೋನಾ ಪಾಸಿಟಿವ್ ಪ್ರಕರಣಗಳಿರುವ ಒಟ್ಟು 33 ಗ್ರಾಪಂಗಳ ವ್ಯಾಪ್ತಿಯಲ್ಲಿ ಬುಧವಾರದಿಂದ ಐದು ದಿನಗಳ ಕಾಲ ಸಂಪೂರ್ಣ ಲಾಕ್‌ಡೌನ್ ಘೋಷಿಸಿದ್ದು, ಈ ಹಿನ್ನೆಲೆಯಲ್ಲಿ ಮಂಗಳವಾರ ಈ ಗ್ರಾಪಂ ವ್ಯಾಪ್ತಿಯಲ್ಲಿ ಜನ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದರು.

ಸಂಪೂರ್ಣ ಲಾಕ್‌ಡೌನ್ ಘೋಷಣೆಯಾಗಿರುವ ಬೈಂದೂರು ತಾಲೂಕಿನಲ್ಲಿ ನಾಲ್ಕು, ಕುಂದಾಪುರ ತಾಲೂಕಿನಲ್ಲಿ ಏಳು, ಬ್ರಹ್ಮಾ ವರ ಒಂದು, ಉಡುಪಿ ಐದು, ಕಾಪು ನಾಲ್ಕು, ಕಾರ್ಕಳ ಒಂಭತ್ತು, ಹೆಬ್ರಿ ತಾಲೂಕಿನಲ್ಲಿ ಮೂರು ಗ್ರಾಪಂಗಳಲ್ಲಿ ಈಗಾಗಲೇ ಎಲ್ಲ ರೀತಿಯ ಬಂದೋಬಸ್ತ್ ಹಾಗೂ ಚೆಕ್‌ಪೋಸ್ಟ್‌ಗಳ್ನು ರಚಿಸಿ ಕಟ್ಟೆಚ್ಚರ ವಹಿಸಲಾಗಿದೆ.

ಸಂಪೂರ್ಣ ಲಾಕ್‌ಡೌನ್ ಏಕಾಏಕಿ ಘೋಷಣೆ ಹಿನ್ನೆಲೆಯಲ್ಲಿ ಜನ ಬೆಳಗ್ಗೆ ಯಿಂದಲೇ ಮಾರುಕಟ್ಟೆಗೆ ಆಗಮಿಸಿ ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಯಾವುದೇ ಸುರಕ್ಷಿತ ಅಂತರ ಕಾಪಾಡದೆ ಖರೀದಿಸುವ ದೃಶ್ಯ ಕಂಡುಬಂತು. ಹೀಗೆ ಬೆಳಗ್ಗೆ 11ಗಂಟೆಯ ವರೆಗೆ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಕೇವಲ ಒಂದು ದಿನ ಮಾತ್ರ ಅವಕಾಶ ನೀಡಿರುವುದರಿಂದ ಜಿಲ್ಲೆಯ ಪ್ರಮುಖ ಜಂಕ್ಷನ್‌ಗಳಿರುವ ಗ್ರಾಪಂ ವ್ಯಾಪ್ತಿಯಲ್ಲಿ ಜನಸಂದಣಿ ಹೆಚ್ಚು ಕಂಡುಬಂದವು.

ಪ್ರಮುಖ ಪೇಟೆ ಹೊಂದಿರುವ ಶಿರೂರು, ಪಡುಬಿದ್ರೆ, ಶಿರ್ವ, ಕೋಟೇಶ್ವರ, ನಿಟ್ಟೆ, ಪಡುಬಿದ್ರಿ, ಪೆರ್ಡೂರು, ಬೆಳ್ಮಣ್ ಗ್ರಾಪಂ ವ್ಯಾಪ್ತಿಯಲ್ಲಿ ತರಕಾರಿ, ದಿನಸಿ ವಸ್ತುಗಳನ್ನು ಖರೀದಿಸಲು ಹೆಚ್ಚು ಜನ ಸೇರಿರುವುದು ಕಂಡುಬಂದವು. ಪಡುಬಿದ್ರಿ, ಶಿರ್ವ, ಶಿರೂರು ಗಳ ರಸ್ತೆ ಬದಿಗಳಲ್ಲಿ ವಾಹನಗಳನ್ನು ಪಾರ್ಕ್ ಮಾಡಿದ ಪರಿಣಾಮ ಟ್ರಾಫಿಕ್ ಜಾಮ್ ಕಿರಿಕಿರಿ ಅನುಭವಿಸುವಂತಾಯಿತು.

ಅವಧಿಗೆ ಮೊದಲೇ ಮುಚ್ಚುಗಡೆ

ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 11ಗಂಟೆಯವರೆಗೆ ಅವಕಾಶ ನೀಡಿದ್ದರೂ ಪಡುಬಿದ್ರೆ ಪೇಟೆಯಲ್ಲಿ ಪೊಲೀಸರು ಹಾಗೂ ಗ್ರಾಪಂ ಪ್ರತಿನಿಧಿಗಳು ಬೆಳಗ್ಗೆ 10ಗಂಟೆಗೆಯೇ ಅಂಗಡಿಗಳನ್ನು ಮುಚ್ಚಿಸಿದರು. ಈ ಬಗ್ಗೆ ವ್ಯಾಪಾರಸ್ಥರು ಹಾಗೂ ಗ್ರಾಹಕರು ತೀವ್ರ ಅಸಮಧಾನ ವ್ಯಕ್ತಪಡಿಡಸಿದರು. ಇರಿಂದ ಕೆಲಕಾಲ ಗೊಂದಲ ಉಂಟಾಯಿತು.

‘ಸಂಪೂರ್ಣ ಲಾಕ್‌ಡೌನ್ ಆದೇಶ ಅವೈಜ್ಞಾನಿಕವಾಗಿದೆ. ಜೂ.2ರಿಂದ ಜಾರಿಗೆ ತರುವ ಆದೇಶವನ್ನು ಮೇ31ಕ್ಕೆ ಘೋಷಣೆ ಮಾಡಲಾಗಿದೆ. ಅಲ್ಲದೆ ವಸ್ತುಗಳ ಖರೀದಿಗೆ ಕೇವಲ ಐದು ಗಂಟೆಗಳ ಕಾಲ ಸಮಯ ಅವಕಾಶ ನೀಡಿರುವುದು ಸರಿಯಲ್ಲ. ಮಧ್ಯಾಹ್ನ 12ಗಂಟೆಯವರೆಗಾದರೂ ಅವಕಾಶ ನೀಡಬೇಕಿತ್ತು ಎಂದು ಗ್ರಾಹಕರು ಅಸವಾಧಾನ ವ್ಯಕ್ತಪಡಿಸಿದರು.

ಪಡುಬಿದ್ರಿ ಪೇಟೆಯಲ್ಲಿ ಸಂತೆಗೆ ಅವಕಾಶ ನೀಡಿರುವ ಕ್ರಮದ ಬಗ್ಗೆ ಕಾಪು ತಹಶೀಲ್ದಾರ್ ಪ್ರತಿಭಾ ಆರ್. ಪೊಲೀಸರನ್ನು ಹಾಗೂ ಗ್ರಾಪಂನವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಸಂತೆಗೆ ನಿರ್ಬಂಧವಿದ್ದರೂ ಸಂತೆಗೆ ಅವಕಾಶ ನೀಡಿರುವುದು ಸರಿಯಲ್ಲ. ಮುಂದಿನ ಲಾಕ್‌ಡೌನ್ ಮುಗಿಯುವವರೆಗೆ ಸಂತೆಗೆ ಅವಕಾಶ ನೀಡಬಾರದು ಎಂದು ಸೂಚನೆ ನೀಡಿದರು

ಶಿರೂರಿನಲ್ಲಿ ಹಾಲಿನ ಬೂತ್ ಬಂದ್ 

ಶಿರೂರು ಗ್ರಾಪಂ ವ್ಯಾಪ್ತಿಯಲ್ಲಿ ನಾಳೆಯಿಂದ ಕೆಎಂಎಫ್ ಹಾಲಿನ ಬೂತು ಗಳನ್ನು ಕೂಡ ಬಂದ್ ಮಾಡಲಾಗುತ್ತದೆ. ಅದರ ಬದಲು ಸಂಪೂರ್ಣ ಲಾಕ್‌ಡೌನ್ ಅವಧಿಯಲ್ಲಿ ಮನೆಗಳಿಗೆ ಹಾಲಿನ ಪ್ಯಾಕೇಟ್‌ಗಳನ್ನು ವಿತರಿಸಲು ಆರು ಮಂದಿಗೆ ಹಾಲು ವಾರಾಟಗಾರರಿಗೆ ಅನುಮತಿ ನೀಡಲಾಗಿದೆ.

ಗ್ರಾಪಂ ವ್ಯಾಪ್ತಿಯಲ್ಲಿರುವ ಬ್ಯಾಂಕ್, ಅಂಚೆ ಕಚೇರಿ, ಸಹಕಾರಿ ಸಂಘಗಳಲ್ಲಿ ಸಾರ್ವಜನಿಕ ವ್ಯವಹಾರವನ್ನು ಸ್ಥಗಿತಗೊಳಿಸುವಂತೆ ಶಿರೂರು ಗ್ರಾಪಂ ಕಾರ್ಯ ಪಡೆ ಮನವಿ ಮಾಡಿಕೊಂಡಿದೆ. ಅದೇ ರೀತಿ ಭಟ್ಕಳ ಗಡಿ ಮತ್ತು ಬೈಂದೂರು ಗಡಿ ಪ್ರದೇಶದಲ್ಲಿ ಚೆಕ್‌ಪೋಸ್ಟ್ ರಚಿಸಿ ಬಂದೋಬಸ್ತ್ ಒದಗಿಸುವಂತೆ ಪೊಲೀಸರಿಗೆ ಮನವಿ ಮಾಡಲಾಗಿದೆ ಎಂದು ಶಿರೂರು ಪಿಡಿಓ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News