ದ.ಕ.ಜಿಲ್ಲೆಯ 8 ವೈದ್ಯಕೀಯ ಮಹಾ ವಿದ್ಯಾಲಯದ ಕಮ್ಯುನಿಟಿ ಮೆಡಿಸಿನ್ ವಿಭಾಗದ ತಜ್ಞರ ತಂಡ ರಚನೆ
ಮಂಗಳೂರು, ಜೂ.1: ದ.ಕ.ಜಿಲ್ಲೆಯ 8 ವೈದ್ಯಕೀಯ ಮಹಾ ವಿದ್ಯಾಲಯದ ಕಮ್ಯುನಿಟಿ ಮೆಡಿಸಿನ್ ವಿಭಾಗದ ತಜ್ಞರ ತಂಡ ರಚಿಸಲಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ದ.ಕ.ಜಿಲ್ಲೆಯಲ್ಲಿ ಇದೀಗ ದಿನಂಪ್ರತಿ 800ರಿಂದ 900ರಷ್ಟು ಕೋವಿಡ್-19 ಪ್ರಕರಣಗಳು ವರದಿಯಾಗುತ್ತಿದೆ. ಅದರಲ್ಲಿ ಶೇ.5ರಿಂದ 10ರಷ್ಟು ರೋಗಿಗಳು ಜಿಲ್ಲೆಯ ವಿವಿಧ ಸರಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಮತ್ತು ವೈದ್ಯಕೀಯ ವಿದ್ಯಾಲಯದ ಆಸ್ಪತ್ರೆಗಳಲ್ಲಿ ಒಳರೋಗಿಗಳಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುತ್ತಾರೆ. ಇವರಲ್ಲಿ ಕೆಲವೊಂದು ರೋಗಿಗಳು ಕಪ್ಪು ಶಿಲೀಂದ್ರ ಸೋಂಕಿನಿಂದ ಬಳಲುತ್ತಿರುವುದು ವರದಿಯಾಗುತ್ತಿದೆ. ಅನಿಯಂತ್ರಿತ ಮಧುಮೇಹ ರೋಗದಿಂದ ಬಳಲುತ್ತಿರುವ ಕೋವಿಡ್ 19 ಸೋಂಕಿತ ರೋಗಿಗಳಲ್ಲಿ ಮತ್ತು ಕೋವಿಡ್ ಚಿಕಿತ್ಸೆಗಾಗಿ ಸ್ಟಿರಾಯ್ಡಿ ಔಷಧವನ್ನು ಬಳಸುವುದರಿಂದ ಈ ಸೋಂಕು ಕೆಲವರಲ್ಲಿ ಕಾಣಿಸಿಕೊಳ್ಳುತ್ತಿರಲು ಕಾರಣವೆಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ.
ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ವಿವಿಧ ಆಸ್ಪತ್ರೆಗಳಲ್ಲಿ ಕೋವಿಡ್-19 ಸೋಂಕಿತರು ಒಳರೋಗಿಯಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ರೋಗಿಗಳು ಕಪ್ಪು ಶಿಲೀಂದ್ರ ಸೋಂಕಿಗೆ ಒಳಗಾಗುವುದನ್ನು ತಡೆಗಟ್ಟಲು ಆಸ್ಪತ್ತೆಯಿಂದ ಬಿಡುಗಡೆ ಹೊಂದಿದ ದಿನಾಂಕದಿಂದ 4 ವಾರಗಳ ಕಾಲ ಅವರ ಆರೋಗ್ಯದ ಬಗ್ಗೆ ನಿಗಾ ವಹಿಸುವುದು ಅತೀ ಅಗತ್ಯವಾಗಿರುವುದ ರಿಂದ ಜಿಲ್ಲೆಯ 8 ವೈದ್ಯಕೀಯ ಮಹಾದ್ಯಾಲಯದ ಕಮ್ಯುನಿಟಿ ಮೆಡಿಸಿನ್ ವಿಭಾಗದ ತಜ್ಞರ ತಂಡವನ್ನು ರಚಿಸಲಾಗಿದೆ.
ವೈದ್ಯರ ಹೆಸರು ಹಾಗೂ ತಾಲೂಕು/ವಲಯಗಳ ವಿವರ:
ಬಂಟ್ವಾಳ ತಾಲೂಕು - ಡಾ. ಸಂಜೀವ ಬಿ., ಮೊ.ಸಂಖ್ಯೆ: 9448114146 (ಎ.ಜೆ ಮೆಡಿಕಲ್ ಕಾಲೇಜು, ಮಂಗಳೂರು), ಬೆಳ್ತಂಗಡಿ ತಾಲೂಕು - ಡಾ. ಸೌರಭ್, ಮೊ.ಸಂಖ್ಯೆ:7026288455 (ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ, ಮಂಗಳೂರು), ಪುತ್ತೂರು ತಾಲೂಕು - ಡಾ. ನಂಜೇಶ್, ಮೊ.ಸಂಖ್ಯೆ:8861373863/ 9916819243 (ಕ್ಷೇಮಾ, ಮಂಗಳೂರು), ಮೂಡುಬಿದಿರೆ ತಾಲೂಕು - ಡಾ. ರೇಖಾ ಮೊ.ಸಂಖ್ಯೆ: 9449082214, (ಮಂಗಳೂರು. ಕೆಎಂಸಿ ಮೆಡಿಕಲ್ ಕಾಲೇಜು), ಉಳ್ಳಾಲ ತಾಲೂಕು- ಡಾ. ಪೂನಮ್ ನಾಯ್ಕಾ, ಮೊ.ಸಂಖ್ಯೆ: 7259346643(ಯೆನೆಪೊಯಾ ಮೆಡಿಕಲ್ ಕಾಲೇಜು ಆಸ್ಪತ್ರೆ, ಮಂಗಳೂರು).
ಜಿಲ್ಲೆಯ ಎಲ್ಲಾ ಆಸ್ಪತ್ರೆಗಳ ನೋಡಲ್ ಅಧಿಕಾರಿಗಳು ತಮ್ಮ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದು ಮೇ 1ರ ನಂತರ ಬಿಡುಗಡೆ ಹೊಂದಿದವರ ಪಟ್ಟಿಯನ್ನು ಮತ್ತು ಮುಂದಿನ ದಿನಗಳಲ್ಲಿ ಬಿಡುಗಡೆ ಹೊಂದಲಿರುವ ರೋಗಿಗಳ ಪಟ್ಟಿ ಯನ್ನು ವಿಭಾಗದ ತಜ್ಞರ ತಂಡಕ್ಕೆ ತಾಲೂಕು ಅಥವಾ ವಲಯಗಳಿಗೆ ಹಂಚಿಕೆ ಮಾಡಲಾದ ವೈದ್ಯರಿಗೆ ನೀಡಲು ತಿಳಿಸಲಾಗಿದೆ.
ರಚಿಸಲಾಗಿರುವ ತಂಡವು ಕಪ್ಪು ಶಿಲೀಂದ್ರ ಸೋಂಕು ತಗಲುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ನೋಡಲ್ ಅಧಿಕಾರಿಗಳಿಂದ ಪಡೆದ ಪಟ್ಟಿಯಲ್ಲಿರುವ ರೋಗಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿ ಖಚಿತ ಅಥವಾ ಸಂಶಯಾ ತ್ಮಕ ಪ್ರಕರಣಗಳು ಕಂಡುಬಂದಲ್ಲಿ ಅಂತಹ ರೋಗಿಗಳ ಸಂಪೂರ್ಣ ಮಾಹಿತಿಯನ್ನು ಜಿಲ್ಲಾ ಸರ್ವೇಕ್ಷಣಾಧಿಕಾರಿಯ ಕಚೇರಿಗೆ ಇಮೇಲ್ ಮೂಲಕ ತಕ್ಷಣ ತಿಳಿಸಬೇಕು ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಕ್ರೋಢೀಕೃತ ವರದಿಯನ್ನು ಜಿಲ್ಲಾಧಿಕಾರಿ ಕಚೇರಿಗೆ, ದ.ಕ.ಜಿಪಂ ಸಿಇಒ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ದಿನಂಪ್ರತಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.