ಊಟ-ತಿಂಡಿಯ ಹೆಚ್ಚುವರಿ ಖರ್ಚನ್ನು ಸರಕಾರಕ್ಕೆ ಹಿಂದಿರುಗಿಸುವೆ: ಫಿನ್ ಲ್ಯಾಂಡ್ ಪ್ರಧಾನಿ

Update: 2021-06-02 17:04 GMT
photo : twitter.com/ConversationsEu

ಹೆಲ್ಸಿಂಕಿ (ಫಿನ್ಲ್ಯಾಂಡ್), ಜೂ. 2: ನನ್ನ ಮತ್ತು ನನ್ನ ಕುಟುಂಬ ಸದಸ್ಯರ ಊಟ-ತಿಂಡಿಗಳಿಗಾಗಿ ತಗಲಿರುವ ಹೆಚ್ಚುವರಿ ಖರ್ಚನ್ನು ಮರುಪಾವತಿಸುವುದಾಗಿ ಫಿನ್ಲ್ಯಾಂಡ್ ಪ್ರಧಾನಿ ಸನಾ ಮಾರಿನ್ ಹೇಳಿದ್ದಾರೆ.

ಒಂದೂವರೆ ವರ್ಷದ ಹಿಂದೆ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಂದಿನಿಂದ ತನ್ನ ನಿವಾಸದಲ್ಲಿ ಬಳಕೆಯಾಗಿರುವ ತಿಂಡಿ ಮತ್ತು ಊಟಗಳಿಗಾಗಿ ತಾನು ಸರಕಾರದ ಬೊಕ್ಕಸದಿಂದ ಪಡೆದುಕೊಂಡಿರುವ 14,000 ಯುರೋ (ಸುಮಾರು 12.43 ಲಕ್ಷ ರೂಪಾಯಿ) ಮೊತ್ತವನ್ನು ಹಿಂದಿರುಗಿಸುವುದಾಗಿ 35 ವರ್ಷದ ಸನಾ ಮಾರಿನ್ ಮಂಗಳವಾರ ತಿಳಿಸಿದ್ದಾರೆ.

‘‘ಊಟದ ಭತ್ತೆಗೆ ಸಂಬಂಧಿಸಿ ಪ್ರಶ್ನೆಗಳು ಎದ್ದಿರುವುದರಿಂದ, ಅದಕ್ಕೆ ಸಂಬಂಧಪಟ್ಟ ಖರ್ಚನ್ನು ನಾನೇ ಭರಿಸುತ್ತೇನೆ’’ ಎಂದು ಶನಿವಾರ ಅವರು ಟ್ವಿಟರ್ನಲ್ಲಿ ಹೇಳಿದ್ದರು.

‘‘ಕಾನೂನುಬದ್ಧವಾಗಿದ್ದರೂ ಮುಂದಕ್ಕೆ ನಾನು ಊಟದ ಭತ್ತೆಯನ್ನು ತೆಗೆದುಕೊಳ್ಳುವುದಿಲ್ಲ’’ ಎಂದು ಮಂಗಳವಾರ ಎಂಟಿವಿ3 ಟಿವಿಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

ಪ್ರಧಾನಿ ಸನಾ ಮಾರಿನ್ ತನ್ನ ಅಧಿಕೃತ ಸರಕಾರಿ ನಿವಾಸದಲ್ಲಿ ವಾಸಿಸುತ್ತಿದ್ದರೂ, ತನ್ನ ಕುಟುಂಬದ ಉಪಹಾರಗಳಿಗಾಗಿ ತಿಂಗಳಿಗೆ 300 ಯುರೋ (ಸುಮಾರು 26,700 ರೂಪಾಯಿ) ಮೊತ್ತವನ್ನು ಸರಕಾರದ ಬೊಕ್ಕಸದಿಂದ ಹೆಚ್ಚುವರಿಯಾಗಿ ಪಡೆದುಕೊಳ್ಳುತ್ತಿದ್ದಾರೆ ಎಂಬುದಾಗಿ ಕಳೆದ ವಾರ ಟ್ಯಾಬ್ಲಾಯಿಡ್ ಪತ್ರಿಕೆಯೊಂದು ವರದಿ ಮಾಡಿದ ಬಳಿಕ ಅವರ ನಡೆ ವಿವಾದಕ್ಕೆ ಒಳಗಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News