ಕೋವಿಡ್ ಸೋಂಕಿತೆ ಗರ್ಭಿಣಿಗೆ ಚಿಕಿತ್ಸೆ ನಿರಾಕರಣೆ: ವೈದ್ಯರುಗಳ ವಿರುದ್ಧ ದೂರು
ಮಂಗಳೂರು, ಜೂ.2: ಕೋವಿಡ್ ಸೋಂಕಿತೆ ಗರ್ಭಿಣಿಗೆ ಚಿಕಿತ್ಸೆ ನಿರಾಕರಿಸಿದ ಪ್ರಕರಣ ಬೆಳಕಿಗೆ ಬಂದಿದ್ದು, ಈ ಬಗ್ಗೆ ಕದ್ರಿ ಠಾಣೆಗೆ ದೂರು ನೀಡಲಾಗಿದೆ.
ನಗರದ ಬೋಳಾರದ ಮುಳಿಹಿತ್ಲು ರಸ್ತೆಯ ಫ್ಲಾಟ್‌ವೊಂದರ ನಿವಾಸಿ ಮುಹಮ್ಮದ್ ನಾಸಿರ್ ಎಂಬವರ ಪತ್ನಿ ದೂರು ನೀಡಿದ ಕೋವಿಡ್ ಸೋಂಕಿತೆ ಗರ್ಭಿಣಿಯಾಗಿದ್ದಾರೆ. ವೈದ್ಯರಾದ ಡಾ. ಪ್ರಿಯಾ ಬಳ್ಳಾಲ್, ಡಾ. ಮುರಳೀಧರ್, ಡಾ. ಜಯಪ್ರಕಾಶ್, ಡಾ. ವಿಜಯ್ ಹಾಗೂ ಸರಕಾರಿ ವೆನ್ಲಾಕ್ ಮತ್ತು ಇತರ ನಾಲ್ಕು ಖಾಸಗಿ ಆಸ್ಪತ್ರೆಯ ವಿರುದ್ಧ ದೂರು ನೀಡಿ ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ.
ತುಂಬು ಗರ್ಭಿಣಿಯಾಗಿದ್ದ ನನಗೆ ಕೋವಿಡ್ ಸೋಂಕು ಆಗಿದ್ದು, ಚಿಕಿತ್ಸೆಗಾಗಿ ವೈದ್ಯರನ್ನು ಭೇಟಿ ಮಾಡಿದಾಗ ಸರಿಯಾಗಿ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಮೊದಲ ಆರೋಪಿ ಡಾ. ಪ್ರಿಯಾ ಬಳ್ಳಾಲ್‌ರ ಕುಮ್ಮಕ್ಕಿನ ಮೇರೆಗೆ ಎರಡನೇ ಆರೋಪಿ ಡಾ. ಮುರಳೀಧರ್ ತನ್ನ ಕೊಲೆಗೆ ಯತ್ನಿಸಿದ್ದಾರೆ. ಅಲ್ಲದೆ ಆರೋಪಿಗಳು ಎಲ್ಲೂ ಚಿಕಿತ್ಸೆ ನೀಡದೆ ನನಗೆ ಮತ್ತು ನನ್ನ ಕುಟುಂಬವನ್ನು ತೀವ್ರ ಆತಂಕಕ್ಕೆ ಒಳಪಡಿಸಿದ್ದಾರೆ ಎಂದು ಖತೀಜಾ ಜಾಸ್ಮಿನ್ ದೂರಿನಲ್ಲಿ ತಿಳಿಸಿದ್ದಾರೆ.
ಖತೀಜಾ ಜಾಸ್ಮಿನ್ ನೀಡಿದ ದೂರಿಗೆ ಸಂಬಂಧಿಸಿ ಪ್ರಕರಣ ದಾಖಲಾಗಿಲ್ಲ. ಈ ದೂರಿನ ತನಿಖೆ ಮತ್ತು ಸೂಕ್ತ ಕ್ರಮಕ್ಕೆ ಜಿಲ್ಲಾಡಳಿತಕ್ಕೆ ರವಾನಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
''ಗಲ್ಫ್‌ನಲ್ಲಿ ಪತಿಯೊಂದಿಗಿದ್ದ ನಾನು ಈಗಾಗಲೆ ಎರಡು ಮಕ್ಕಳಿಗೆ ಜನ್ಮ ನೀಡಿದ್ದೇನೆ. ಈ ಸಂದರ್ಭ ಡಾ. ಪ್ರಿಯಾ ಬಳ್ಳಾಲ್ ನನಗೆ ವೈದ್ಯಕೀಯ ಚಿಕ್ಸಿತೆ ಪಡೆದಿದ್ದ. ಮೂರನೇ ಮಗುವಿಗೆ ಗರ್ಭವತಿಯಾದಾಗ ಡಾ. ಪ್ರಿಯಾ ಬಳ್ಳಾಲ್‌ರಿಂದಲೇ ವೈದ್ಯಕೀಯ ಸಲಹೆ ಪಡೆದಿದ್ದೆ. ಅಲ್ಲದೆ ಮೂರು ತಿಂಗಳ ಹಿಂದೆ ಊರಿಗೆ ಬಂದಿದ್ದೆ. ಮೇ 17ರಂದು ನನಗೆ ಶೀತ ಮತ್ತು ಜ್ವರದ ಅನುಭವವಾಯಿತು. ಅದರಂತೆ ಡಾ. ಪ್ರಿಯಾ ಬಳ್ಳಾಲ್‌ರ ಸಲಹೆಯಂತೆ ಮಾತ್ರೆ ತೆಗೆದುಕೊಂಡು ಮನೆಯಲ್ಲೇ ವಿಶ್ರಾಂತಿ ಪಡೆದಿದ್ದೆ. ಆದರೆ ಶೀತ ಕಡಿಮೆಯಾಗದ ಕಾರಣ ಡಾ.ಪ್ರಿಯಾ ಬಳ್ಳಾಲ್‌ರನ್ನು ಸಂಪರ್ಕಿಸಿದೆ. ಅಲ್ಲದೆ ಮೇ 19ರಂದು ಖಾಸಗಿ ಆಸ್ಪತ್ರೆಗೆ ತೆರಳಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡೆ. 8 ತಿಂಗಳ ಗರ್ಭಿಣಿಯಾಗಿದ್ದ ನನಗೆ ಕೋವಿಡ್ ಪಾಸಿಟಿವ್ ಇರುವುದನ್ನು ಮರುದಿನ ತಿಳಿದುಕೊಂಡೆ. ನಂತರ ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ಡಾ.ಪ್ರಿಯಾ ಬಳ್ಳಾಲ್‌ರ ಆಸ್ಪತ್ರೆಗೆ ದಾಖಲಾಗುವುದಾಗಿ ಹೇಳಿದಾಗ ಕೊರೋನ ಪಾಸಿಟಿವ್‌ನಿಂದ ಗುಣಮುಖರಾಗುವವರೆಗೆ ಚಿಕಿತ್ಸೆ ನೀಡಲಾಗುವುದಿಲ್ಲ ಎಂದು ಹೇಳಿದರು. ನಂತರ ನಾನು ಮತ್ತೊಂದು ಖಾಸಗಿ ಆಸ್ಪತ್ರೆಗೆ ತೆರಳಿದಾಗ ಅಲ್ಲಿನ ವೈದ್ಯೆ ಡಾ. ವೀಣಾ ಭಟ್ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲಾಗುವಂತೆ ಸೂಚಿಸಿದ್ದರು. ಈ ಮಧ್ಯೆ ಡಾ. ಪ್ರಿಯಾ ಬಳ್ಳಾಲ್‌ರ ಜೊತೆ ಮಾತನಾಡಿದ ಬಳಿಕ ಡಾ.ವೀಣಾ ಭಟ್ ಆಸ್ಪತ್ರೆಯಲ್ಲಿ ದಾಖಲಾಗುವುದು ಬೇಡ. ಮಾತ್ರೆ ತೆಗೆದುಕೊಂಡು ಮನೆಯಲ್ಲೇ ವಿಶ್ರಾಂತಿ ಪಡೆಯುವಂತೆ ಸೂಚಿಸಿದರು ಎಂದು ಖತೀಜಾ ಜಾಸ್ಮಿನ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮೇ 20ರಂದು ಮತ್ತೆ ಡಾ.ಪ್ರಿಯಾ ಬಳ್ಳಾಲ್‌ರನ್ನು ಸಂಪರ್ಕಿಸಿದಾಗಲೂ ಚಿಕಿತ್ಸೆಗೆ ಬರುವುದು ಬೇಡ ಎಂದರು. ಹಾಗಾಗಿ ಮತ್ತೊಂದು ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದೆ. ಅಲ್ಲಿನ ವೈದ್ಯರು ಕೂಡ ಡಾ.ಪ್ರಿಯಾ ಬಳ್ಳಾಲ್‌ರ ಜೊತೆ ಸಂಪರ್ಕಿಸಿದ ಬಳಿಕ ಏನೋ ಒಂದು ಕಾರಣ ನೀಡಿ ಬೇರೆ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದರು. ಅಲ್ಲಿಂದ ಬೇರೊಂದು ಖಾಸಗಿ ಆಸ್ಪತ್ರೆಗೆ ಹೋದೆ. ಅಲ್ಲಿನ ವೈದ್ಯರು ಕೂಡ ಡಾ.ಪ್ರಿಯಾ ಬಳ್ಳಾಲ್‌ರ ಸಂಪರ್ಕಿಸಿದ ಬಳಿಕ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಇಲ್ಲಿ ಸೂಕ್ತ ವ್ಯವಸ್ಥೆ ಇಲ್ಲ ಎಂದು ಹೇಳಿದರು. ಅಲ್ಲಿಂದ ಲೇಡಿಗೋಷನ್ ಆಸ್ಪತ್ರೆಗೆ ರಾತ್ರಿ ವೇಳೆ ಹೋದೆ. ಅಲ್ಲಿನ ವೈದ್ಯರು ಕೂಡ ಡಾ.ಪ್ರಿಯಾ ಬಳ್ಳಾಲ್‌ರ ಜೊತೆ ಮಾತನಾಡಿದ ಬಳಿಕ ಇಲ್ಲಿ ಸೂಕ್ತ ವ್ಯವಸ್ಥೆ ಇಲ್ಲ ಎನ್ನುತ್ತಾ ಕೈ ಚೆಲ್ಲಿದರು. ಬಳಿಕ ಮತ್ತೊಂದು ಖಾಸಗಿ ಆಸ್ಪತ್ರೆಗೆ ಹೋದೆವು. ಅಲ್ಲೂ ಕೂಡ ಡಾ.ಪ್ರಿಯಾ ಬಳ್ಳಾಲ್‌ರ ಜೊತೆ ಸಂಪರ್ಕಿಸಿದ ಬಳಿಕ ಚಿಕಿತ್ಸೆ ನೀಡಲು ನಿರಾಕರಿಸಿದರು. ಅಲ್ಲಿಂದ ಮತ್ತೊಂದು ಖಾಸಗಿ ಆಸ್ಪತ್ರೆಗೆ ಹೋದೆವು. ಅಲ್ಲೂ ಕೂಡ ನನ್ನನ್ನು ಪರೀಕ್ಷಿಸಿದ ವೈದ್ಯರು ಯಾವುದೋ ಒಂದು ಇಂಜೆಕ್ಷನ್ ಕೊಟ್ಟರು. ಆ ಬಳಿಕ ನನ್ನ ಆರೋಗ್ಯದಲ್ಲಿ ಏರು ಪೇರಾದರು. ಡಾ. ಪ್ರಿಯಾ ಬಳ್ಳಾಲ್‌ರ ಜೊತೆ ಮಾತನಾಡಿದ ಬಳಿಕ ಆ ವೈದ್ಯರು ‘ಹೊಟ್ಟೆಯಲ್ಲೇ ಮಗು ಸತ್ತಿದೆ. ಇವಳೂ ಇನ್ನರ್ಧ ಗಂಟೆಯಲ್ಲಿ ಸಾಯುತ್ತಾಳೆ’ ಎಂದು ಹೇಳಿ ಹೆದರಿಸಿದರು ಎಂದು ಖತೀಜಾ ಜಾಸ್ಮಿನ್ ತಿಳಿಸಿದ್ದಾರೆ.
ಈ ಸಂದರ್ಭ ಮನೆ ಮಂದಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಚೊಕ್ಕಬೆಟ್ಟುವಿನ ಮುಹಮ್ಮದ್ ಆಸೀಫ್‌ರಿಗೆ ಕರೆ ಮಾಡಿ ವಿಷಯ ತಿಳಿಸಿದರು. ಅವರು ತಕ್ಷಣ ಡಿಎಚ್‌ಒ ಡಾ. ಕಿಶೋರ್ ಕುಮಾರ್‌ರನ್ನು ಸಂಪರ್ಕಿಸಿ ವಿಷಯ ತಿಳಿಸಿದರು. ಅದರಂತೆ ಡಿಎಚ್‌ಒ ಲೇಡಿಗೋಶನ್ ಆಸ್ಪತ್ರೆಯಲ್ಲಿ ದಾಖಲಿಸಲು ಸೂಚಿಸಿದರು. ಅಲ್ಲಿ ಶಸ್ತ್ರಚಿಕಿತ್ಸೆ ಮಾಡಿ ಹೆಣ್ಣು ಮಗುವನ್ನು ಹೊರತೆಗೆಯಲಾಯಿತು. ನಾನು ಕೋವಿಡ್ ಸೋಂಕಿತೆಯಾದ ಕಾರಣ ಆ ರಾತ್ರಿಯೇ ನನ್ನನ್ನು ವೆನ್ಲಾಕ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಮೇ 21ರಂದು ಅಲ್ಲಿಗೆ ಬಂದ ವೈದ್ಯರೊಬ್ಬರು ನನ್ನನ್ನು ಕಂಡು ತುಚ್ಛವಾಗಿ ಮಾತನಾಡಿದರು. ಹೆದರಿದ ನಾನು ನನ್ನ ಸೋದರ ಸಂಬಂಧಿಯೊಬ್ಬರ ಜೊತೆ ವೀಡಿಯೋ ಕಾಲ್ ಮಾಡಿ ವೈದ್ಯರೊಬ್ಬರು ಆಡಿದ ಮಾತನ್ನು ಹೇಳಿ ನನ್ನನ್ನು ವೆನ್ಲಾಕ್‌ನಿಂದ ಡಿಸ್‌ಜಾರ್ಜ್ ಮಾಡುವಂತೆ ವಿನಂತಿಸಿದೆ. ಹಾಗೇ ಮತ್ತೊಂದು ಖಾಸಗಿ ಆಸ್ಪತ್ರೆಯಲ್ಲಿ ನನ್ನನ್ನು ದಾಖಲಿಸಲಾಯಿತು. ಈ ಆಸ್ಪತ್ರೆಯ ಆವರಣದಲ್ಲಿ ನನ್ನ ಕುಟುಂಬದ ಸದಸ್ಯರು ವೈದ್ಯರೊಬ್ಬರನ್ನು ಪ್ರಶ್ನಿಸಿದಾಗ ನನಗೆ ಚಿಕಿತ್ಸೆ ನೀಡಲು ನಿರಾಕರಿಸಿರುವುದರ ಹಿಂದೆ ಯಾರಿದ್ದಾರೆ ಎಂಬುದು ಬೆಳಕಿಗೆ ಬಂತು. ಹಾಗೇ ಮೇ 23ರಂದು ನನ್ನನ್ನು ಅಲ್ಲಿಂದ ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವಧಿಗೆ ಮುನ್ನ ಮಗುವಿನ ಜನನವಾದ ಕಾರಣ ಲೇಡಿಗೋಶನ್ ಆಸ್ಪತ್ರೆಯ ಐಸಿಯು ಘಟಕದಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗಿತ್ತು. ಮೇ 28ರಂದು ನಾನು ಗುಣಮುಖಗೊಂಡು ಆಸ್ಪತ್ರೆಯಿಂದ ಡಿಸ್‌ಜಾರ್ಜ್ ಆಗಿ ಮನೆಯಲ್ಲಿ ವಿಶ್ರಾಂತಿಯಲ್ಲಿರುವೆ ಎಂದು ಖತೀಜಾ ಜಾಸ್ಮಿನ್ ದೂರಿನಲ್ಲಿ ತಿಳಿಸಿದ್ದಾರೆ.
ನನಗೆ ಚಿಕಿತ್ಸೆ ನೀಡಲು ನಿರಾಕರಣೆಯ ಹಿಂದೆ ಡಾ. ಪ್ರಿಯಾ ಬಳ್ಳಾಲ್‌ರ ಕೈವಾಡವಿದೆ. ಅಲ್ಲದೆ ಅವರ ಮಾತಿನಂತೆ ಕೆಲವು ವೈದ್ಯರು ನನಗೆ ಸೂಕ್ತ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಹಾಗಾಗಿ ಇವರೆಲ್ಲರ ವಿರುದ್ಧ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.