ಪ್ರೆಸಿಡೆನ್ಸಿ ಶಿಕ್ಷಣ ಸಂಸ್ಥೆಯಿಂದ ದಿನಸಿ ಕಿಟ್, ಆಶಾ ಕಾರ್ಯಕರ್ತೆಯರಿಗೆ ಕೋವಿಡ್ ಸಂರಕ್ಷಣಾ ಸಲಕರಣೆ ವಿತರಣೆ
ಮಂಗಳೂರು, ಜೂ.3: ಪ್ರೆಸಿಡೆನ್ಸಿ ಗ್ರೂಪ್ ಆಫ್ ಇನ್ ಸ್ಟಿಟ್ಯೂಶನ್ಸ್ ನ ಅಂಗಸಂಸ್ಥೆ, ಮಂಗಳೂರಿನ ನೀರುಮಾರ್ಗದ ಕೆಲರಾಯಿನಲ್ಲಿರುವ ಪ್ರೆಸಿಡೆನ್ಸಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ವತಿಯಿಂದ ನೀರುಮಾರ್ಗ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಗ್ರಾಪಂ ವ್ಯಾಪ್ತಿಯ 100 ಮಂದಿ ಕೋವಿಡ್ ಸಂತ್ರಸ್ತರಿಗೆ ದಿನಸಿ ಸಾಮಗ್ರಿಗಳ ಕಿಟ್ ಹಾಗೂ 11 ಆಶಾ ಕಾರ್ಯಕರ್ತೆಯರಿಗೆ ಪಿಪಿಇ ಕಿಟ್, ಆಕ್ಸಿಮೀಟರ್ ಗಳ ವಿತರಣೆ ಕಾರ್ಯಕ್ರಮ ಇಂದು ಜರುಗಿತು.
ಪ್ರೆಸಿಡೆನ್ಸಿ ಶಾಲಾ ವಠಾದಲ್ಲಿಂದು ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲೆ ಮಧುಲಿಕಾ, ಪ್ರೆಸಿಡೆನ್ಸಿ ಗ್ರೂಪ್ ಆಫ್ ಇನ್ ಸ್ಟಿಟ್ಯೂಶನ್ಸ್ ಬೆಂಗಳೂರಿನಲ್ಲಿ 100 ಆಮ್ಲಜನಕಯುಕ್ತ ಬೆಡ್ ಗಳು ಮತ್ತು (ಎಚ್.ಡಿಯುನೊಂದಿಗೆ) ಕೋವಿಡ್ ಆಸ್ಪತ್ರೆಯನ್ನು ಸ್ಥಾಪಿಸುವ ಮೂಲಕ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಸರಕಾರದ ಜೊತೆ ಕೈ ಜೋಡಿಸಿದೆ. ಇದೀಗ ಪ್ರೆಸಿಡೆನ್ಸಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ಸ್ಥಳೀಯ ಗ್ರಾಪಂ ಸಹಯೋಗದೊಂದಿಗೆ ಅಗತ್ಯವಿರುವವರಿಗೆ ಆಕ್ಸಿಮೀಟರ್, ಪಿಪಿಇ ಕಿಟ್, ದಿನಸಿ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸುವ ಮೂಲಕ ಕೋವಿಡ್ ವಿರುದ್ಧದ ಹೋರಾಟಕ್ಕೆ ನಿರಂತರ ಬೆಂಬಲ ನೀಡುತ್ತಿದೆ. ಇದು ಇತರರಿಗೂ ಪ್ರೇರಣೆಯಾಗಲಿ ಎಂದರು.
ನೀರುಮಾರ್ಗ ಗ್ರಾಮ ಪಂಚಾಯತ್ ಅಧ್ಯಕ್ಷೆ ಧನವಂತಿ, ಸದಸ್ಯ ಶ್ರೀಧರ ಮತ್ತು ಪಂಚಾಯತ್ ಪಿಡಿಒ ಸುಧೀರ್ ಮಾತನಾಡಿ ಕೋವಿಡ್ ಸಂತ್ರಸ್ತರಿ ಗೆ ಮತ್ತು ಮುಂಚೂಣಿ ಕಾರ್ಯ ಕರ್ತರಿಗೆ ನೆರವು ನೀಡಲು ಮುಂದೆ ಬಂದ ಪ್ರೆಸಿಡೆನ್ಸಿ ಶಿಕ್ಷಣ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.
ಸಮಾರಂಭದಲ್ಲಿ ಬೊಂಡಂತಿಲ ಗ್ರಾಮದ ಕೋವಿಡ್ -19 ಕಾರ್ಯಪಡೆಯ ಸದಸ್ಯ ಅಬ್ದುಲ್ ಹಮೀದ್, ನೀರುಮಾರ್ಗ ಗ್ರಾಮ ಪಂಚಾಯತ್ ಕೋವಿಡ್ 19 ಟಾಸ್ಕ್ ಫೋರ್ಸ್ ಸದಸ್ಯ ಭಾಸ್ಕರ ಜೆ. ಉಪ ಸ್ಥಿತರಿದ್ದರು.
ರಮಾನಾಥ ಕಾರ್ಯಕ್ರಮ ನಿರೂಪಿಸಿದರು.