ತೃಣಮೂಲಕ್ಕೆ ವಾಪಸಾಗುತ್ತಾರೆಂಬ ವದಂತಿಯ ಮಧ್ಯೆ ಮುಕುಲ್ ರಾಯ್ ಗೆ ಕರೆ ಮಾಡಿದ ಪ್ರಧಾನಿ ಮೋದಿ: ವರದಿ

Update: 2021-06-03 10:58 GMT

ಹೊಸದಿಲ್ಲಿ: ಬಿಜೆಪಿ ಮುಖಂಡ ಮುಕುಲ್ ರಾಯ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ದೂರವಾಣಿ ಕರೆ ಮಾಡಿ ಕೋಲ್ಕತ್ತಾದ ಆಸ್ಪತ್ರೆಯಲ್ಲಿರುವ ರಾಯ್ ಅವರ ಪತ್ನಿಯ ಆರೋಗ್ಯ ವಿಚಾರಿಸಿದ್ದಾರೆ. ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಬುಧವಾರ ಸಂಜೆ ಆಸ್ಪತ್ರೆಗೆ ಭೇಟಿ ನೀಡಿದ ನಂತರ ಪ್ರಧಾನಿಯ ಈ ಕರೆ ಮಹತ್ವ ಪಡೆದಿದೆ ಎಂದು ndtv ವರದಿ ಮಾಡಿದೆ.

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ನಿಂದ ಬಿಜೆಪಿಗೆ ಮೊದಲು ಪಕ್ಷಾಂತರ ಮಾಡಿದವರಲ್ಲಿ ಮುಕುಲ್ ರಾಯ್ ಪ್ರಮುಖರಾಗಿದ್ದರು. ಇತ್ತೀಚೆಗೆ ಶಾಸಕರಾಗಿ ಆಯ್ಕೆಯಾಗಿರುವ ರಾಯ್, ಬಿಜೆಪಿ ಪಕ್ಷವು ತನ್ನನ್ನು ನಿರ್ಲಕ್ಷಿ ಸುತ್ತಿರುವುದರಿಂದ ಸಂಕಟ ಅನುಭವಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ರಾಜ್ಯ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಭರ್ಜರಿ ಜಯ ಸಾಧಿಸಿದ ನಂತರ ಬಿಜೆಪಿಯಲ್ಲಿರುವ ಕೆಲವರು ತೃಣಮೂಲಕ್ಕೆ ಮರಳುವ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದ್ದಾರೆ.

ತೃಣಮೂಲದಿಂದ ಬಿಜೆಪಿಗೆ ಸೇರಿದ್ದ ಸುವೇಂದು ಅಧಿಕಾರಿಯನ್ನು ರಾಜ್ಯದ ಪ್ರತಿಪಕ್ಷ ನಾಯಕರನ್ನಾಗಿ ಮಾಡಿದಾಗಿನಿಂದ ರಾಯ್ ಅವರು ಬಿಜೆಪಿಯ ಹೊಸ ನಾಯಕತ್ವದಿಂದ ಅಸಮಾಧಾನಗೊಂಡಿದ್ದಾರೆ ಎಂಬ ಊಹಾಪೋಹಗಳಿವೆ. ಅವರು ತೃಣಮೂಲಕ್ಕೆ ವಾಪಸಾಗುವುದನ್ನು ಪರಿಗಣಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

ಕೆಲವು ನಿಮಿಷಗಳ ಕಾಲ ನಡೆದ ದೂರವಾಣಿ ಕರೆಯಲ್ಲಿ ಪ್ರಧಾನ ಮಂತ್ರಿ ಅವರು ರಾಯ್ ಅವರ ಪತ್ನಿಯ ಆರೋಗ್ಯದ ಬಗ್ಗೆ ವಿಚಾರಿಸಿದರು, ಈ ವೇಳೆ ಯಾವುದೇ ರಾಜಕೀಯ ವಿಚಾರವನ್ನು ಚರ್ಚಿಸಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ರಾಯ್ ಅವರು ಮಮತಾ ಬ್ಯಾನರ್ಜಿ ಅವರ ಪ್ರಮುಖ ತಂಡದ ಭಾಗವಾಗಿದ್ದರು. ಅವರು 2017 ರಲ್ಲಿ ಬಿಜೆಪಿಗೆ ಸೇರಿದ್ದರು. 

2019ರಲ್ಲಿ  ನಡೆದ ಲೋಕಸಭಾ ಚುನಾವಣೆಯಲ್ಲಿ, ತೃಣಮೂಲ ಕಾಂಗ್ರೆಸ್ಸಿಗೆ ಆಘಾತವಾಗುವ ರೀತಿಯಲ್ಲಿ ಬಂಗಾಳದ 42 ಸ್ಥಾನಗಳಲ್ಲಿ 18 ಸ್ಥಾನಗಳಲ್ಲಿ ಬಿಜೆಪಿ ಜಯ ಸಾಧಿಸಿತ್ತು. ಇದರಲ್ಲಿ ರಾಯ್ ಅವರ ಪ್ರಭಾವ ಸಾಕಷ್ಟು ಇತ್ತು.

"ಜನರು ಆಯ್ಕೆ ಮಾಡಿದ ಸರಕಾರವನ್ನು ಟೀಕಿಸುವುದಕ್ಕಿಂತ ಸ್ವಯಂ ವಿಮರ್ಶೆ ಹೆಚ್ಚು ಅಗತ್ಯ’’ ಎಂದು ತಂದೆಯೊಂದಿಗೆ ತೃಣಮೂಲವನ್ನು ತ್ಯಜಿಸಿ ಬಿಜೆಪಿ ಸೇರಿದ್ದ ರಾಯ್ ಅವರ ಪುತ್ರ ಸುಭ್ರಾಂಶು ಇತ್ತೀಚೆಗೆ ಫೇಸ್ ಬುಕ್ ನಲ್ಲಿ ಬರೆದಿದ್ದರು. ಈ ರಹಸ್ಯ ಸಂದೇಶವು ಬಿಜೆಪಿಯನ್ನು ಗುರಿಯಾಗಿಸಿ ಬರೆಯಲಾಗಿದೆ ಎಂದು ವಿಶ್ಲೇಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News