ವಾಟ್ಸ್ ಆ್ಯಪ್ ತಂತ್ರಗಾರಿಕೆ ಮೂಲಕ ಗೌಪ್ಯತಾ ನೀತಿಗೆ ಒಪ್ಪಿಗೆ ಪಡೆಯುತ್ತಿದೆ: ದಿಲ್ಲಿ ಹೈಕೋರ್ಟ್‍ಗೆ ಹೇಳಿದ ಕೇಂದ್ರ

Update: 2021-06-03 10:35 GMT

ಹೊಸದಿಲ್ಲಿ: ವಾಟ್ಸ್ ಆ್ಯಪ್ ತನ್ನ ಹೊಸ ಗೌಪ್ಯತಾ ನೀತಿಗೆ ಬಳಕೆದಾರರಿಂದ "ತಂತ್ರಗಾರಿಕೆ'' ಮೂಲಕ  ಒಪ್ಪಿಗೆ ಪಡೆದುಕೊಳ್ಳುತ್ತಿದೆ ಎಂದು ಕೇಂದ್ರ ಸರಕಾರ ಇಂದು ದಿಲ್ಲಿ ಹೈಕೋರ್ಟ್‍ಗೆ ಹೇಳಿದೆ.

"ವಾಟ್ಸ್ ಆ್ಯಪ್ ನ ಪರಿಷ್ಕೃತ 2021 ಗೌಪ್ಯತಾ ನೀತಿಯನ್ನು ಇನ್ನೂ ಒಪ್ಪದೇ ಇರುವ ಮಿಲಿಯಗಟ್ಟಲೆ ಬಲೆದಾರರಿಗೆ ಪ್ರತಿ ದಿನವೆಂಬಂತೆ ಅಸಂಖ್ಯಾತ ನೋಟಿಫಿಕೇಶನ್‍ಗಳನ್ನು ನೀಡಲಾಗುತ್ತಿದೆ,'' ಎಂದು ವಾಟ್ಸ್ ಆ್ಯಪ್ ಗೌಪ್ಯತಾ ನೀತಿಯನ್ನು ಪ್ರಶ್ನಿಸಿ ಸಲ್ಲಿಸಲಾದ ಅಪೀಲಿಗೆ ತನ್ನ ಪ್ರತಿಕ್ರಿಯೆಯಲ್ಲಿ ಸರಕಾರ ಹೇಳಿದೆ.

"ಸರಕಾರದ ಖಾಸಗಿ ದತ್ತಾಂಶ ಸಂರಕ್ಷಣಾ ಮಸೂದೆ ಕಾನೂನು ಆಗುವ ಮುನ್ನ ವಾಟ್ಸ್ ಆ್ಯಪ್ ತನ್ನ ಡಿಜಿಟಲ್ ಬಲವನ್ನು ಬಳಸಿ ತನ್ನ ಈಗಿನ ಬಳಕೆದಾರರು ತನ್ನ ಪರಿಷ್ಕೃತ 2021 ಗೌಪ್ಯತಾ ನೀತಿ ಒಪ್ಪುವಂತೆ ಮಾಡುತ್ತಿದೆ,'' ಎಂದು ಸರಕಾರ ತನ್ನ ಅಫಿಡವಿಟ್‍ನಲ್ಲಿ ಹೇಳಿದೆ.

ವಾಟ್ಸ್ ಆ್ಯಪ್ ತನ್ನ ಬಳಕೆದಾರರಿಗೆ ನೋಟಿಫಿಕೇಶನ್‍ಗಳನ್ನು ಕಳುಹಿಸುವುದನ್ನು ನಿಲ್ಲಿಸಬೇಕು ಎಂದು ಕೇಂದ್ರ ಹೇಳಿದೆ.

ತನ್ನ ಹೊಸ ಗೌಪ್ಯತಾ ನೀತಿಯನ್ನು ಒಪ್ಪದ ಬಳಕೆದಾರರ ಖಾತೆಗಳನ್ನು ನಿಧಾನವಾಗಿ ಡಿಲೀಟ್ ಮಾಡಲಾಗುವುದು ಎಂದು ಮೇ 17ರಂದು ಹೇಳಿದ್ದ ವಾಟ್ಸ್ ಆ್ಯಪ್, ಮೇ 25ರಂದು ಪ್ರತಿಕ್ರಿಯಿಸಿ ತನ್ನ ಪರಿಷ್ಕೃತ ನೀತಿಯನ್ನು ಒಪ್ಪದ ಬಳಕೆದಾರರಿಗೆ ಒದಗಿಸಲಾಗುವ ಸೇವೆಗಳನ್ನು ಮಿತಿಗೊಳಿಸಲಾಗುವುದಿಲ್ಲ ಎಂದು ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News