ಕರಾವಳಿಗೂ ಬಾಲಿವುಡ್ ನಟ ಸೋನು ಸೂದ್ ಸಹಾಯ ಹಸ್ತ: ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಆಮ್ಲಜನಕ ಕೇಂದ್ರ
ಮಂಗಳೂರು, ಜೂ. 3: ಕೋವಿಡ್ ಕ್ಲಿಷ್ಟಕರ ಸಂದರ್ಭದಲ್ಲಿ ಅತೀ ಅಗತ್ಯವಾದ ಆಕ್ಸಿಜನ್ ಹಾಗೂ ಅಗತ್ಯ ವೈದ್ಯಕೀಯ ನೆರವಿನ ಏರ್‌ಲಿಫ್ಟ್ ಮೂಲಕ ದೇಶದಲ್ಲಿ ಗಮನ ಸೆಳೆದಿರುವ ಬಾಲಿವುಡ್ ನಟ ಸೋನು ಸೂದ್ ಇದೀಗ ದ.ಕ. ಜಿಲ್ಲೆಯನ್ನೊಳಗೊಂಡು ಕರಾವಳಿಗೂ ಸಹಾಯದ ಹಸ್ತ ಚಾಚಿದ್ದಾರೆ.
ಸೋನು ಸೂದ್ ಚಾರಿಟೆಬಲ್ ಫೌಂಡೇಶನ್ ವತಿಯಿಂದ ಕರ್ನಾಟಕದ 4ನೆ ಕ್ಷಿಪ್ರ ಆಮ್ಲಜನ ಕೇಂದ್ರ (ರ್ಯಾಪಿಡ್ ಆಕ್ಸಿಜನ್ ಸೆಂಟರ್)ಕ್ಕೆ ನಗರದ ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಇಂದು ಚಾಲನೆ ನೀಡಲಾಯಿತು.
ದ.ಕ. ಜಿಲ್ಲೆ ಮಾತ್ರವಲ್ಲದೆ, ಉಡುಪಿ ಹಾಗೂ ಮಲ್ಪೆ ಸೇರಿದಂತೆ ಮಂಗಳೂರು ಕೇಂದ್ರದಿಂದ ಸುಮಾರು 80 ಕಿ.ಮೀ. ವ್ಯಾಪ್ತಿಯೊಳಗೆ ಈ ಕೇಂದ್ರದಿಂದ ತುರ್ತು ಸಂದರ್ಭದಲ್ಲಿ ಆಮ್ಲಜನಕ ಪೂರೈಸಲಾಗುವುದು. 7000 ಲೀಟರ್ ಹಾಗೂ 1300 ರಿಂದ 1400 ಲೀಟರ್ ಸಾಮರ್ಥ್ಯದ ತಲಾ 10ರಂತೆ 20 ಆಕ್ಸಿಜನ್ ಸಿಲಿಂಡರ್‌ಗಳು ಈ ಕೇಂದ್ರದಲ್ಲಿ ಸದ್ಯ ಲಭ್ಯವಿದೆ. ಅಗತ್ಯವಿದ್ದಲ್ಲಿ ಇನ್ನಷ್ಟು ಆಕ್ಸಿಜನ್ ಸಿಲಿಂಡರ್‌ಗಳನ್ನು ಏರ್‌ಲಿಫ್ಟ್ ಮಾಡಲಾಗುವುದು ಎಂದು ಸೋನು ಸೂದ್ ಸ್ವಾಗ್ ಇಆರ್‌ಟಿ ತಂಡದ ಅಮಿತ್ ಪುರೋಹಿತ್ ಮಾಹಿತಿ ನೀಡಿದರು.
ಸರಕಾರಿ ರೈಲ್ವೇ ಪೊಲೀಸ್ ಕೇಂದ್ರ(ಜಿಆರ್‌ಪಿ)ದಡಿ ಈ ರ್ಯಾಪಿಡ್ ಆಕ್ಸಿಜನ್ ಸೆಂಟರ್ ಕಾರ್ಯ ನಿರ್ವಹಿಸಲಿದ್ದು, ಕರ್ನಾಟಕದಲ್ಲಿ ಈಗಾಗಲೇ ಹುಬ್ಬಳ್ಳಿ, ಬೆಂಗಳೂರು, ಬಳ್ಳಾರಿಗಳಲ್ಲಿ ಈ ಕ್ಷಿಪ್ರ ಆಮ್ಲಜನ ಕೇಂದ್ರ ಕಾರ್ಯಾಚರಿಸುತ್ತಿದೆ. ಮುಂದೆ ಹಾಸನ, ದಾವಣಗೆರೆ, ಮೈಸೂರಿನಲ್ಲಿಯೂ ಕೇಂದ್ರ ತೆರೆಯಲು ನಿರ್ಧರಿಸಲಾಗಿದೆ.
ಆಮ್ಲಜನಕದ ತುರ್ತು ಸಂದರ್ಭದಲ್ಲಿ 7069999961 ಕ್ಕೆ ಕರೆ ಮಾಡಿದರೆ ಮಂಗಳೂರಿನ ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿರುವ ಜಿಆರ್‌ಪಿ ಕೇಂದ್ರವು ತುರ್ತು ಸಂದರ್ಭದಲ್ಲಿ ಆಕ್ಸಿಜನ್ ಪೂರೈಕೆ ಕಾರ್ಯ ಮಾಡಲಿದೆ. ಅಗತ್ಯವಿರುವಲ್ಲಿಗೆ ವಾಹನಗಳ ಮೂಲಕ ಆಕ್ಸಿಜನ್ ಪೂರೈಕೆ ಮಾಡುವುದು ಮಾತ್ರವಲ್ಲದೆ, ಆ್ಯಂಬುಲೆನ್ಸ್‌ನಲ್ಲಿ ತುರ್ತಾಗಿ ರೋಗಿಗೆ ಅಥವಾ ಆಸ್ಪತ್ರೆಯಲ್ಲಿ ತುರ್ತಾಗಿ ಆಮ್ಲಜನಕ ಅಗತ್ಯವಿದ್ದಲ್ಲಿಯೂ ಪೂರೈಕೆ ಮಾಡುವ ವ್ಯವಸ್ಥೆ ಇದೆ ಎಂದು ಅವರು ಹೇಳಿದರು.
ಈ ಸಂದರ್ಭ ಸೂದ್ ಚಾರಿಟಿ ಫೌಂಡೇಶನ್‌ನ ಅಜಯ್ ಪ್ರತಾಪ್ ಸಿಂಗ್, ಮಂಗಳೂರು ಸೆಂಟ್ರಲ್ ರೈಲ್ವೇ ಸರ್ಕಲ್ ಇನ್ಸ್‌ಪೆಕ್ಟರ್ ಮನೋಜ್ ಕುಮಾರ್, ಜಂಕ್ಷನ್ ರೈಲ್ವೇ ನಿಲ್ದಾಣದ ಸರ್ಕಲ್ ಇನ್ಸ್‌ಪೆಕ್ಟರ್ ಅಜಯ್ ಕುಮಾರ್, ಈಶ್ವರ್ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.