×
Ad

ಪೋರ್ಚುಗಲ್ ಸಂಸ್ಥೆಯ ಜೊತೆ ವ್ಯಾಕ್ಸಿನ್ ಪಾಸ್‌ ಪೋರ್ಟ್ ಅಭಿವೃದ್ಧಿಗೆ ಮುಂದಾದ ಭಾರತ

Update: 2021-06-03 18:35 IST
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಜೂ.3: ನಾಗರಿಕ ವಾಯುಯಾನ ಸಚಿವಾಲಯವು ಮೊಬೈಲ್ ಆರೋಗ್ಯ ಪಾಸ್‌ಪೋರ್ಟ್ ಅಥವಾ ವ್ಯಾಕ್ಸಿನ್ ಪಾಸ್‌ಪೋರ್ಟ್ ಅನ್ನು ಅಭಿವೃದ್ಧಿಗೊಳಿಸಲು ಪೋರ್ಚುಗಲ್ ಮೂಲದ ಬಹುರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ‘ವಿಜನ್ ಬಾಕ್ಸ್ ’ಜೊತೆ ಕೈಜೋಡಿಸಿದೆ,ಆದರೆ ಈವರೆಗೆ ಈ ಬಗ್ಗೆ ಔಪಚಾರಿಕ ನಿರ್ಣಯವನ್ನು ಕೈಗೊಳ್ಳಲಾಗಿಲ್ಲ ಎಂದು ಸುದ್ದಿ ಜಾಲತಾಣ ThePrint ವರದಿ ಮಾಡಿದೆ.

ಬಯೊಮೆಟ್ರಿಕ್ಸ್,ಮೆಕ್ಯಾಟ್ರಾನಿಕ್ಸ್ ಮತ್ತು ಸರ್ವೇಕ್ಷಣೆ ಪರಿಹಾರ ಗಳನ್ನು ಅಭಿವೃದ್ಧಿಗೊಳಿಸುತ್ತಿರುವ ವಿಜನ್ ಬಾಕ್ಸ್ ವಿಶ್ವಾದ್ಯಂತ ವಿಮಾನ ನಿಲ್ದಾಣಗಳು,ವಿಮಾನಯಾನ ಸಂಸ್ಥೆಗಳು,ಗಡಿ ನಿಯಂತ್ರಣ ಮತ್ತು ಸರಕಾರಗಳೊಡನೆ ಸಹಭಾಗಿತ್ವವನ್ನು ಹೊಂದಿದೆ.

ಭಾರತದ ಮೊಬೈಲ್ ಆರೋಗ್ಯ ಪಾಸ್‌ಪೋರ್ಟ್ ತಂತ್ರಜ್ಞಾನದ ಬಗ್ಗೆ ಯಾವುದೇ ಔಪಚಾರಿಕ ನಿರ್ಣಯವನ್ನು ತೆಗೆದುಕೊಳ್ಳಲಾಗಿಲ್ಲ, ಆದರೆ ಅಂತರರಾಷ್ಟ್ರೀಯ ಪ್ರಯಾಣವನ್ನು ಪುನರಾರಂಭಿಸಲು ಮತ್ತು ಇತರ ರಾಷ್ಟ್ರಗಳು ಭಾರತೀಯರ ಪ್ರವೇಶಕ್ಕೆ ಅವಕಾಶ ನೀಡುವಂತಾಗಲು ಮೊಬೈಲ್ ಆರೋಗ್ಯ ಪಾಸ್‌ಪೋರ್ಟ್ ತಂತ್ರಜ್ಞಾನವು ಅಗತ್ಯವಾಗಲಿದೆ ಎಂದು ವಿಜನ್ ಬಾಕ್ಸ್‌ನ ಮಾರಾಟ ವಿಭಾಗದ ಮುಖ್ಯಸ್ಥ (ಯುರೋಪ್,ಮಧ್ಯಪ್ರಾಚ್ಯ,ಆಫ್ರಿಕಾ ಮತ್ತು ಭಾರತ) ಮಿತುಲ್ ರುಪಾರೇಲಿಯಾ ಅವರು ತಿಳಿಸಿದರು. ಇದು ಡಿಜಿಯಾತ್ರಾ ಪ್ಲಾಟ್‌ಫಾರ್ಮ್ ಜೊತೆ ನಿಕಟವಾಗಿ ಜೋಡಣೆಗೊಳ್ಳುವ ಸಾಧ್ಯತೆಯಿದೆ ಎಂದರು.

ಡಿಜಿಯಾತ್ರಾ ಮುಖದ ಗುರುತು ಮತ್ತು ಇತರ ತಂತ್ರಜ್ಞಾನಗಳನ್ನು ಬಳಸಿಕೊಂಡು ಕಾಗದರಹಿತ ವಾಯು ಪ್ರಯಾಣವನ್ನು ಉತ್ತೇಜಿಸಲು ಮೋದಿ ಸರಕಾರವು 2018, ಅಕ್ಟೋಬರ್‌ನಲ್ಲಿ ಆರಂಭಿಸಿದ್ದ ಉಪಕ್ರಮವಾಗಿದೆ. ‘ನಾವು ಸಾಂಕ್ರಾಮಿಕದೊಂದಿಗೇ ಬದುಕಬೇಕಾಗಬಹುದು ಮತ್ತು ಮೊಬೈಲ್ ಆರೋಗ್ಯ ಪಾಸ್‌ಪೋರ್ಟ್ ನಿರಂತರದ ಅಗತ್ಯವಾಗಬಹುದು. ಪ್ರಯಾಣಕ್ಕೆ ಲಸಿಕೆ ಕಡ್ಡಾಯವಾಗಲಿದೆ ’ಎಂದು ರುಪಾರೇಲಿಯಾ ತಿಳಿಸಿದರು. ಮೊಬೈಲ್ ಆರೋಗ್ಯ ಪಾಸ್‌ಪೋರ್ಟ್ ಅಥವಾ ವ್ಯಾಕ್ಸಿನ್ ಪಾಸ್‌ಪೋರ್ಟ್ ಡಿಜಿಟಲ್ ಗುರುತು ವಿಧಾನವಾಗಿದ್ದು, ಸಾಂಕ್ರಾಮಿಕದ ಕಾಲದಲ್ಲಿ ಪೂರ್ಣವಾಗಿ ಲಸಿಕೆಯನ್ನು ಪಡೆದುಕೊಂಡವರ ಮುಕ್ತ ಚಲನವಲನಕ್ಕೆ ಅವಕಾಶ ಕಲ್ಪಿಸಲಿದೆ. ಅದು ಕೋವಿಡ್-19 ಪರೀಕ್ಷೆಗಳಿಂದ ಹಿಡಿದು ಚೇತರಿಕೆ ಮತ್ತು ಲಸಿಕೆ ನೀಡಿಕೆವರೆಗಿನ ವ್ಯಕ್ತಿಯ ಆರೋಗ್ಯ ದತ್ತಾಂಶಗಳನ್ನು ದೃಢಪಡಿಸುತ್ತದೆ. ಹಲವಾರು ದೇಶಗಳು,ಮುಖ್ಯವಾಗಿ ಪಾಶ್ಚಾತ್ಯ ದೇಶಗಳು ಇಂತಹ ಪಾಸ್‌ಪೋರ್ಟ್‌ಗಳನ್ನು ಅಂಗೀಕರಿಸಿವೆ ಅಥವಾ ತಮ್ಮದೇ ಆದ ಪಾಸ್‌ಪೋರ್ಟ್‌ಗಳನ್ನು ಅಭಿವೃದ್ಧಿಗೊಳಿಸುತ್ತಿವೆ. ಉದಾಹರಣೆಗೆ ಐರೋಪ್ಯ ಒಕ್ಕೂಟದ ಬೆಂಬಲವನ್ನು ಹೊಂದಿರುವ ಡಿಜಿಟಲ್ ಗ್ರೀನ್ ಸರ್ಟಿಫಿಕೇಟ್ ಜೂನ್ 2021ರಿಂದ ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಎಲ್ಲ ಸದಸ್ಯ ರಾಷ್ಟ್ರಗಳನ್ನು ಅರ್ಹವಾಗಿಸುತ್ತದೆ. ಈ ಸರ್ಟಿಫಿಕೇಟ್ ಅಗತ್ಯ ಮಾಹಿತಿಗಳು ಮತ್ತು ಡಿಜಿಟಲ್ ಸಹಿಯನ್ನು ಒಳಗೊಂಡಿರುವ ಡಿಜಿಟಲ್ ಅಥವಾ ಕಾಗದ ರೂಪದಲ್ಲಿಯ ಕ್ಯೂಆರ್ ಕೋಡ್ ಅನ್ನು ಹೊಂದಿರುತ್ತದೆ. ಸರ್ಟಿಫಿಕೇಟ್‌ನ್ನು ಉಚಿತವಾಗಿ ವಿತರಿಸುವ ಅಧಿಕಾರವನ್ನು ರಾಷ್ಟ್ರೀಯ ಅಧಿಕಾರಿಗಳು ಹೊಂದಿರುತ್ತಾರೆ.

ಕಳೆದ ಎಪ್ರಿಲ್‌ನಿಂದ ವಿಶ್ವದ ಹಲವಾರು ವಿಮಾನಯಾನ ಸಂಸ್ಥೆಗಳು ಇನ್ನೊಂದು ವಿಧದ ಮೊಬೈಲ್ ಆರೋಗ್ಯ ಪಾಸ್‌ಪೋರ್ಟ್ ಆಗಿರುವ ಐಎಟಿಎ ಟ್ರಾವಲ್ ಪಾಸ್ ಅನ್ನು ತಮ್ಮ ಆ್ಯಪ್‌ಗಳಲ್ಲಿ ಅಳವಡಿಸಿಕೊಳ್ಳುತ್ತಿವೆ.

ಆದರೆ ಕೋವಿಡ್ ಎರಡನೇ ಅಲೆ,ನೂತನ ಪ್ರಭೇದ ಮತ್ತು ಅಂತರರಾಷ್ಟ್ರೀಯ ಪ್ರಯಾಣ ನಿರ್ಬಂಧಗಳೊಂದಿಗೆ ಹೆಣಗಾಡುತ್ತಿರುವ ಭಾರತವು ಯಾವಾಗ ಮೊಬೈಲ್ ಆರೋಗ್ಯ ಪಾಸ್‌ಪೋರ್ಟ್‌ಗಳನ್ನು ಅಧಿಕೃತವಾಗಿ ಅಳವಡಿಸಿಕೊಳ್ಳಲಿದೆ ಎನ್ನುವುದನ್ನು ನಿಷ್ಕರ್ಷಿಸಲು ಉದ್ಯಮ ತಜ್ಞರಿಗೆ ಸಾಧ್ಯವಾಗುತ್ತಿಲ್ಲ.

ಕೆಲವು ಲಸಿಕೆಗಳನ್ನು ಕೆಲವು ದೇಶಗಳು ಇನ್ನೂ ಅಂಗೀಕರಿಸಿಲ್ಲ, ಹೀಗಾಗಿ ಅಂತಹ ಲಸಿಕೆಗಳನ್ನು ಪಡೆದವರಿಗೆ ಆ ದೇಶಗಳು ಪ್ರವೇಶ ಅವಕಾಶವನ್ನು ನೀಡುತ್ತವೆಯೇ ಎನ್ನುವುದು ಸ್ಪಷ್ಟವಾಗಿಲ್ಲ,ಹೀಗಾಗಿ ಮೊಬೈಲ್ ಆರೋಗ್ಯ ಪಾಸ್‌ಪೋರ್ಟ್‌ಗಳ ವಿಷಯ ಸಂದಿಗ್ಧತೆಯಲ್ಲಿದೆ. ಉದಾಹರಣೆಗೆ ಭಾರತ ಬಯೊಟೆಕ್‌ನ ಕೋವ್ಯಾಕ್ಸಿನ್ ಅನ್ನು ವಿಶ್ವ ಆರೋಗ್ಯ ಸಂಸ್ಥೆಯು ಅಂಗೀಕರಿಸಿಲ್ಲ ಮತ್ತು ಭಾರತದಲ್ಲಿ ತುರ್ತು ಬಳಕೆಗೆ ಮಾತ್ರ ಅನುಮತಿ ನೀಡಲಾಗಿದೆ. ಹೀಗಾಗಿ ಕೋವ್ಯಾಕ್ಸಿನ್ ಲಸಿಕೆ ಪಡೆದವರಿಗೆ ಅಮೆರಿಕ ಅಥವಾ ಬ್ರಿಟನ್ ಪ್ರವೇಶಿಸಲು ಅವಕಾಶ ದೊರೆಯುತ್ತದೆಯೇ ಎನ್ನುವುದರ ಬಗ್ಗೆ ಸ್ಪಷ್ಟತೆಯಿಲ್ಲ. ಇಂತಹವರಲ್ಲಿ ವಿದೇಶಗಳಲ್ಲಿ ವ್ಯಾಸಂಗ ಮಾಡಬಯಸುವ ವಿದ್ಯಾರ್ಥಿಗಳೂ ಸೇರಿದ್ದು,ಇದು ಅವರಿಗೆ ಸಮಸ್ಯೆಯನ್ನು ಸೃಷ್ಟಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News