30 ಕೋಟಿ ಡೋಸ್ ಕೋವಿಡ್ ಲಸಿಕೆಗಾಗಿ ಬಯಾಲಜಿಕಲ್-ಇ ಜೊತೆ ಕೇಂದ್ರದ ಒಪ್ಪಂದ

Update: 2021-06-03 14:33 GMT

ಹೊಸದಿಲ್ಲಿ,ಜೂ.3: ಇನ್ನೂ ಕ್ಲಿನಿಕಲ್ ಟ್ರಯಲ್ ಹಂತದಲ್ಲಿರುವ ಕೋವಿಡ್-19 ಲಸಿಕೆಯ 30 ಕೋ.ಡೋಸ್‌ಗಳ ಖರೀದಿಗಾಗಿ ಹೈದರಾಬಾದಿನ ಬಯಾಲಜಿಕಲ್-ಇ ಜೊತೆ ಒಪ್ಪಂದವನ್ನು ಮಾಡಿಕೊಂಡಿರುವುದಾಗಿ ಕೇಂದ್ರ ಸರಕಾರವು ಗುರುವಾರ ತಿಳಿಸಿದೆ. ಇದಕ್ಕಾಗಿ ಕೇಂದ್ರ ಆರೋಗ್ಯ ಸಚಿವಾಲಯವು ಕಂಪನಿಗೆ 1,500 ಕೋ.ರೂ.ಗಳ ಮುಂಗಡ ಹಣವನ್ನು ಪಾವತಿಸಲಿದೆ.

ಬಯಾಲಜಿಕಲ್-ಇ ಅಭಿವೃದ್ಧಿಗೊಳಿಸುತ್ತಿರುವ ಲಸಿಕೆಯು ಆರ್‌ಬಿಡಿ ಪ್ರೋಟಿನ್ ಸಬ್ ಯೂನಿಟ್ ಆಗಿದ್ದು,ಮುಂದಿನ ಕೆಲವು ತಿಂಗಳುಗಳಲ್ಲಿ ಲಭ್ಯವಾಗುವ ಸಾಧ್ಯತೆಯಿದೆ.

ಬಯಾಲಜಿಕಲ್-ಇ 2021 ಆಗಸ್ಟ್‌ನಿಂದ ಡಿಸೆಂಬರ್‌ವರೆಗಿನ ಅವಧಿಯಲ್ಲಿ ಲಸಿಕೆಗಳನ್ನು ತಯಾರಿಸಿ ಪೂರೈಸಲಿದೆ ಎಂದು ಸಚಿವಾಲಯವು ತಿಳಿಸಿದೆ.

ಕಂಪನಿಯ ಲಸಿಕೆಯು ಮೊದಲ ಮತ್ತು ಎರಡನೇ ಹಂತಗಳಲ್ಲಿ ಭರವಸೆದಾಯಕ ಫಲಿತಾಂಶಗಳನ್ನು ನೀಡಿದ್ದು,ಸದ್ಯ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್‌ಗಳು ನಡೆಯುತ್ತಿವೆ. ಕೋವಿಡ್ -19 ಲಸಿಕೆ ವಿತರಣೆ ಕುರಿತು ರಾಷ್ಟ್ರೀಯ ತಜ್ಞರ ಸಮಿತಿಯು ಕಂಪನಿಯ ಪ್ರಸ್ತಾವವನ್ನು ಪರಿಶೀಲಿಸಿದೆ ಮತ್ತು ಶಿಫಾರಸು ಮಾಡಿದೆ ಎಂದು ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News