2 ಲಕ್ಷ ಫೆಲೆಸ್ತೀನೀಯರಿಗೆ ಆರೋಗ್ಯ ನೆರವಿನ ಅಗತ್ಯ: ಗಾಝಾ ಪಟ್ಟಿಗೆ ಭೇಟಿ ನೀಡಿದ ಬಳಿಕ ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ

Update: 2021-06-03 15:01 GMT

ಗಾಝಾ ನಗರ (ಫೆಲೆಸ್ತೀನ್), ಜೂ. 3: ಇಸ್ರೇಲ್ ನಡೆಸಿರುವ 11 ದಿನಗಳ ಬಾಂಬ್ ದಾಳಿಯಲ್ಲಿ ಧ್ವಂಸಗೊಂಡಿರುವ ಗಾಝಾ ಪಟ್ಟಿಗೆ ವಿಶ್ವಸಂಸ್ಥೆ ಮತ್ತು ರೆಡ್ ಕ್ರಾಸ್ ಅಧಿಕಾರಿಗಳು ಬುಧವಾರ ಭೇಟಿ ನೀಡಿದ್ದಾರೆ. ಧ್ವಂಸಗೊಂಡಿರುವ ಮನೆಗಳು, ಶಾಲೆಗಳು, ಆಸ್ಪತ್ರೆಗಳು ಮತ್ತು ಇತರ ಮೂಲಸೌಕರ್ಯಗಳನ್ನು ಅವರು ವೀಕ್ಷಿಸಿದರು.

ಮೇ 10ರಂದು ಆರಂಭವಾದ ಇಸ್ರೇಲ್ ದಾಳಿಯಲ್ಲಿ 66 ಮಕ್ಕಳು ಸೇರಿದಂತೆ ಕನಿಷ್ಠ 254 ಫೆಲೆಸ್ತೀನೀಯರು ಮೃತಪಟ್ಟಿದ್ದಾರೆ. ಅದೇ ವೇಳೆ, ಇಸ್ರೇಲ್ ಮೇಲೆ ಫೆಲೆಸ್ತೀನ್‌ನ ಸಶಸ್ತ್ರ ಗುಂಪುಗಳು ನಡೆಸಿದ ರಾಕೆಟ್ ದಾಳಿಗಳಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ 12 ಇಸ್ರೇಲಿಗರು ಪ್ರಾಣ ಕಳೆದುಕೊಂಡಿದ್ದಾರೆ.

ಆಕ್ರಮಿತ ಫೆಲೆಸ್ತೀನ್ ಭೂಭಾಗದಾದ್ಯಂತ ಅಗಾಧ ಪ್ರಮಾಣದಲ್ಲಿ ಆರೋಗ್ಯ ನೆರವಿನ ಅಗತ್ಯವಿದೆ ಎಂಬುದಾಗಿ ಬುಧವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಎಚ್ಚರಿಸಿದೆ. ಇತ್ತೀಚಿನ ಸಂಘರ್ಷವು ಇನ್ನಷ್ಟು ಮಾನವ ನಿರ್ವಸತಿಗೆ ಕಾರಣವಾಗಿದೆ ಹಾಗೂ ಸುದೀರ್ಘ ಮಾನವೀಯ ಬಿಕ್ಕಟ್ಟನ್ನು ಉಲ್ಬಣಿಸಿದೆ ಎಂದು ಅದು ಹೇಳಿದೆ.

‘‘77,000ಕ್ಕೂ ಅಧಿಕ ಮಂದಿ ಆಂತರಿಕವಾಗಿ ನಿರ್ವಸಿತರಾಗಿದ್ದಾರೆ ಹಾಗೂ ಸುಮಾರು 30 ಆರೋಗ್ಯ ಕಾಳಜಿ ಸಂಸ್ಥೆಗಳು ಹಾನಿಗೀಡಾಗಿವೆ’’ ಎಂದಿದೆ.

ಆಕ್ರಮಿತ ಪಶ್ಚಿಮ ದಂಡೆ ಸೇರಿದಂತೆ ಆಕ್ರಮಿತ ಫೆಲೆಸ್ತೀನ್ ಭೂಭಾಗದಾದ್ಯಂತ ಸುಮಾರು 2 ಲಕ್ಷ ಮಂದಿಗೆ ಆರೋಗ್ಯ ಸೇವೆಯ ಅಗತ್ಯವಿದೆ. ಅವರಿಗೆ ಆರೋಗ್ಯ ನೆರವನ್ನು ನೀಡುವುದಕ್ಕಾಗಿ ನಮ್ಮ ಕಾರ್ಯಕ್ರಮಗಳನ್ನು ವಿಸ್ತರಿಸುತ್ತಿದ್ದೇವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ರಿಕ್ ಪೀಪರ್‌ಕಾರ್ನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News