ವಿವಾಹೇತರ ಸಂಬಂಧವು ತಾಯಿಗೆ ಮಗುವಿನ ಪಾಲನೆಯನ್ನು ನಿರಾಕರಿಸಲು ಕಾರಣವಲ್ಲ: ಹೈಕೋರ್ಟ್ ತೀರ್ಪು

Update: 2021-06-03 17:38 GMT

ಚಂಡೀಗಢ, ಜೂ.3: ವಿವಾಹೇತರ ಸಂಬಂಧವು ಮಗುವಿನ ಪಾಲನೆಯನ್ನು ತಾಯಿಗೆ ನೀಡದಿರಲು ಸಕಾರಣವಲ್ಲ, ಮತ್ತು ಆಕೆ ಉತ್ತಮ ತಾಯಿಯಲ್ಲ ಎಂದು ನಿರ್ಧರಿಸಲು ಇದು ಆಧಾರವಲ್ಲ ಎಂದು ಪಂಜಾಬ್ ಮತ್ತು ಹರ್ಯಾನ ಹೈಕೋರ್ಟ್ ಹೇಳಿದೆ.

ಪಿತೃಪ್ರಧಾನ ಸಮಾಜದಲ್ಲಿ ಮಹಿಳೆಯ ನೈತಿಕತೆ, ಶೀಲದ ಬಗ್ಗೆ ದೋಷಾರೋಪಣೆ ಮಾಡುವುದು ಸಹಜ ಪ್ರಕ್ರಿಯೆಯಾಗಿದೆ ಮತ್ತು ಹೆಚ್ಚಿನ ಸಂದರ್ಭದಲ್ಲಿ ಈ ಆರೋಪಗಳು ನಿರಾಧಾರವಾಗಿರುತ್ತದೆ ಎಂದು ನ್ಯಾಯಾಲಯ ಹೇಳಿದೆ. ಪಂಜಾಬ್‌ನ ಫತೇಘಢ ಸಾಹಿಬ್ ಜಿಲ್ಲೆಯ ನಿವಾಸಿ ಮಹಿಳೆ ಪತಿಯಿಂದ ದೂರವಾದ ಬಳಿಕ ತನ್ನ ನಾಲ್ಕೂವರೆ ವರ್ಷದ ಪುತ್ರಿಯನ್ನು ತನ್ನ ವಶಕ್ಕೆ ನೀಡಬೇಕೆಂದು ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆ ಸಂದರ್ಭ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿ ಮಗುವನ್ನು ತಾಯಿಯ ವಶಕ್ಕೆ ಒಪ್ಪಿಸಬೇಕೆಂದು ಆದೇಶಿಸಿದೆ.

ಪಂಜಾಬ್‌ನ ಮಹಿಳೆ 2013ರಲ್ಲಿ ಆಸ್ಟ್ರೇಲಿಯಾದ ಪ್ರಜೆಯನ್ನು ವಿವಾಹವಾಗಿ ಬಳಿಕ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಳು. ದಂಪತಿಗೆ 2017ರಲ್ಲಿ ಮಗು ಜನಿಸಿದೆ. ಬಳಿಕ ದಾಂಪತ್ಯದಲ್ಲಿ ಬಿರುಕು ಮೂಡಿದೆ. ವಿವಾಹೇತರ ಸಂಬಂಧ ಹೊಂದಿದ್ದಾಳೆ ಎಂದು ಪತ್ನಿಯ ಮೇಲೆ ಆರೋಪ ಹೊರಿಸಿದ್ದ ಪತಿ, ಮಗುವನ್ನು ಆಕೆಯಿಂದ ದೂರ ಇರಿಸಿದ್ದಾನೆ ಎಂದು ಆರೋಪಿಸಲಾಗಿದೆ. ಇದನ್ನು ಪ್ರಶ್ನಿಸಿ ಮಹಿಳೆ ಪಂಜಾಬ್ ಮತ್ತು ಹರ್ಯಾನ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದಳು. ವಿವಾಹೇತರ ಸಂಬಂಧ ಹೊಂದಿರುವುದಕ್ಕೆ ಸೂಕ್ತವಾದ ಪುರಾವೆ ಒದಗಿಸಲು ಪತಿ ವಿಫಲನಾಗಿದ್ದಾನೆ. ಅಲ್ಲದೆ ಮಕ್ಕಳಿಗೆ ಬೆಳಯುವ ಹಂತದಲ್ಲಿ ತಾಯಿಯ ಮಮತೆ ಮತ್ತು ಆರೈಕೆಯ ಅಗತ್ಯವಿದೆ. ಅಲ್ಲದೆ ವಿವಾಹೇತರ ಸಂಬಂಧ ಹೊಂದಿರುವುದು ಸಾಬೀತಾದರೂ, ಆಕೆ ಒಳ್ಳೆಯ ತಾಯಿಯಾಗಲಾರಳು ಎಂಬ ಭಾವನೆ ಸರಿಯಲ್ಲ ಎಂದು ಹೇಳಿದ ನ್ಯಾಯಾಲಯ, ಮಗುವನ್ನು ತಾಯಿಯ ವಶಕ್ಕೆ ನೀಡುವಂತೆ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News