×
Ad

ಮೇ ತಿಂಗಳಲ್ಲಿ ಏರ್‌ಇಂಡಿಯಾದ ಐವರು ಹಿರಿಯ ಪೈಲಟ್‌ಗಳು ಕೋವಿಡ್ ಗೆ ಬಲಿ

Update: 2021-06-03 23:36 IST

ಹೊಸದಿಲ್ಲಿ, ಜೂ.3: ತಮಗೆ ಹಾಗೂ ಕುಟುಂಬದ ಸದಸ್ಯರಿಗೆ ಕೊರೋನ ಸೋಂಕಿನ ವಿರುದ್ಧದ ಲಸಿಕೆ ನೀಡಬೇಕೆಂದು ಏರ್‌ಇಂಡಿಯಾದ ಪೈಲಟ್‌ಗಳ ನಿರಂತರ ಒತ್ತಾಯಿಸಿರುವ ಸಂದರ್ಭದಲ್ಲೇ, ಮೇ ತಿಂಗಳಿನಲ್ಲಿ ಏರಿಂಡಿಯಾದ ಕನಿಷ್ಟ 5 ಹಿರಿಯ ಪೈಲಟ್‌ಗಳು ಸೋಂಕಿನಿಂದ ಮೃತಪಟ್ಟಿರುವುದಾಗಿ ವರದಿಯಾಗಿದೆ. ಕ್ಯಾಪ್ಟನ್ ಪ್ರಸಾದ್ ಕರ್ಮಾಕರ್, ಕ್ಯಾ. ಸಂದೀಪ್ ರಾಣಾ, ಕ್ಯಾ. ಅಮಿತೇಶ್ ಪ್ರಸಾದ್, ಕ್ಯಾ. ಜಿಪಿಎಸ್ ಗಿಲ್ ಮತ್ತು ಕ್ಯಾ. ಹರೀಶ್ ತಿವಾರಿ ಮೃತಪಟ್ಟವರು ಎಂದು ಏರಿಂಡಿಯಾದ ಮತ್ತು ಪೈಲಟ್‌ಗಳ ಯೂನಿಯನ್‌ನ ಮೂಲಗಳು ಹೇಳಿವೆ. ಇವರೆಲ್ಲಾ ಲಾಕ್‌ಡೌನ್ ಘೋಷಣೆಯಾದ ಬಳಿಕ ವಿದೇಶದಲ್ಲಿ ಸಿಕ್ಕಿಬಿದ್ದ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ವಂದೇ ಭಾರತ ಅಭಿಯಾನದಲ್ಲಿ ಕಾರ್ಯನಿರ್ವಹಿಸಿದ್ದರು ಎಂದು ವರದಿಯಾಗಿದೆ.

ಲಸಿಕೆ ಹಾಕಲು ವ್ಯವಸ್ಥೆ ಮಾಡದಿದ್ದರೆ ವಿಮಾನ ಚಲಾಯಿಸುವ ಕಾರ್ಯ ಸ್ಥಗಿತಗೊಳಿಸುವುದಾಗಿ ಮೇ 4ರಂದು ಪೈಲಟ್‌ಗಳು ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ, ತಿಂಗಳೊಳಗೆ ವಿಶೇಷ ಶಿಬಿರ ಏರ್ಪಡಿಸಿ ಎಲ್ಲಾ ಸಿಬಂದಿಗಳಿಗೆ ಲಸಿಕೆ ಹಾಕಿಸಲು ವ್ಯವಸ್ಥೆ ಮಾಡುವುದಾಗಿ ಏರಿಂಡಿಯಾ ಹೇಳಿತ್ತು. ಆದರೆ ಲಸಿಕೆಯ ಕೊರತೆಯಿಂದಾಗಿ 3 ಶಿಬಿರಗಳನ್ನು ರದ್ದುಮಾಡಲಾಗಿದ್ದು ಅಂತಿಮವಾಗಿ ಮೇ 15ರಿಂದ ಲಸಿಕೀಕರಣ ಅಭಿಯಾನ ಆರಂಭವಾಗಿದೆ. ಪೈಲಟ್‌ಗಳು ನಿರಂತರ ಕೊರೋನ ಸೋಂಕಿಗೆ ಒಳಗಾಗುತ್ತಿದ್ದು ಅವರ ಕುಟುಂಬದವರ ಸುರಕ್ಷತೆಯ ಬಗ್ಗೆಯೂ ಆತಂಕಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಭೀತಿಯಿಲ್ಲದೆ ಕರ್ತವ್ಯ ನಿರ್ವಹಿಸಲು ಸಂಸ್ಥೆಯ ಸಹಕಾರ ನಿರೀಕ್ಷಿಸುತ್ತಿದ್ದೇವೆ ಎಂದು ಭಾರತೀಯ ವಾಣಿಜ್ಯ ಪೈಲಟ್‌ಗಳ ಸಂಘಟನೆ ಏರಿಂಡಿಯಾ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News