ಸಹಕಾರ ನೀಡಿದ ವೈದ್ಯರನ್ನೇ ಕೆಟ್ಟವರಾಗಿ ಬಿಂಬಿಸಲಾಗಿದೆ: ಎಎಂಸಿ ಆರೋಪ
ಮಂಗಳೂರು, ಜೂ.4: ಕೋವಿಡ್ ಸೋಂಕಿತ ಗರ್ಭಿಣಿಗೆ ಚಿಕಿತ್ಸೆಗೆ ನಿರಾಕರಣೆ ಎಂಬುದು ಸುಳ್ಳು ಆರೋಪವಾಗಿದ್ದು, ವೈದ್ಯರ ತೇಜೋವಧೆ ಮಾಡುವ ಉದ್ದೇಶದಿಂದಲೇ ಈ ಆರೋಪಗಳನ್ನು ಮಾಡಲಾಗಿದೆ. ಮಾತ್ರವಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿ ಆರಂಭದಿಂದಲೂ ಸಹಕಾರ ನೀಡಿದ ವೈದ್ಯರನ್ನೇ ಕೆಟ್ಟವರನ್ನಾಗಿ ಬಿಂಬಿಸಲಾಗಿದೆ ಎಂದು ಮಂಗಳೂರು ತಜ್ಞ ವೈದ್ಯರ ಸಂಘ (ಎಎಂಸಿ- ಅಸೋಸಿಯೇಶನ್ ಆಫ್ ಮೆಡಿಕಲ್ ಕನ್ಸಲ್ಟೆಂಟ್ಸ್) ಆರೋಪಿಸಿದೆ.
ಐಎಂಎ ಸಭಾಂಗಣದಲ್ಲಿಂದು ಇಂದು ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಘಟಕ ಹಾಗೂ ಎಎಂಸಿ ವತಿಯಿಂದ ಕರೆದ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಎಂಸಿ ಅಧ್ಯಕ್ಷ ಕೆ.ಆರ್.ಕಾಮತ್, ಪಟ್ಟಭದ್ರ ಹಿತಾಸಕ್ತಿಗಳ ಈ ಆರೋಪಗಳು ಕೋವಿಡ್ ಒತ್ತಡದ ನಡುವೆ ಕಾರ್ಯ ನಿರ್ವಹಿಸುತ್ತಿರುವ ವೈದ್ಯರ ಆತ್ಮಸ್ಥೈರ್ಯವನ್ನು ಕುಗ್ಗಿಸಿದೆ ಎಂದು ಹೇಳಿದರು.
ಕೋವಿಡ್ ಸೋಂಕಿತ ಗರ್ಭಿಣಿ ಖತೀಜಾ ಜಾಸ್ಮಿನ್‌ರ ಪ್ರಕರಣದಲ್ಲಿ ಆಕೆ ಆರಂಭದಲ್ಲೇ ತನ್ನ ವೈದ್ಯರು ಹೇಳಿದ ಸಲಹೆಯನ್ನು ಅನುಸರಿಸಿಲ್ಲ. ಕೋವಿಡ್ ಸೋಂಕಿತ ಗರ್ಭಿಣಿಗೆ ವೆಂಟಿಲೇಟರ್ ಅಗತ್ಯವಿದ್ದಾಗ ಆ ಸೌಲಭ್ಯ ಎಲ್ಲಿದೆ ಎಂದು ವಿಚಾರಿಸಿಕೊಂಡು, ವೈದ್ಯರು ಹೇಳಿದ ಸಲಹೆಯನ್ನು ಅನುಸರಿಸಿದ್ದರೆ ಆಸ್ಪತ್ರೆಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ ಎಂದು ಎಎಂಸಿ ಭಾವಿ ಅಧ್ಯಕ್ಷ ಡಾ. ಲಕ್ಷ್ಮಣ ಪ್ರಭು ಆರೋಪಿಸಿದ್ದಾರೆ.
ಡಾ. ಪ್ರಿಯಾ ಬಳ್ಳಾಲ್ ಪ್ರತಿಕ್ರಿಯಿಸಿ, ‘‘ನನ್ನ 21 ವರ್ಷಗಳ ಸೇವಾವಧಿಯಲ್ಲಿ ನಾನು ಯಾವತ್ತೂ ರೋಗಿಗೆ ತೊಂದರೆಯಾಗುವ ರೀತಿಯಲ್ಲಿ ನಡೆದುಕೊಂಡಿಲ್ಲ. ಈ ಪ್ರಕರಣದಲ್ಲೂ ನಾನು ಕೋವಿಡ್ ಕಾರಣಕ್ಕೆ ಆಕೆಗೆ ಚಿಕಿತ್ಸೆ ನಿರಾಕರಣೆ ಮಾಡಿಲ್ಲ. ಪ್ರತೀ ಹಂತದಲ್ಲೂ ಆಕೆ ಹಾಗೂ ಆಕೆಯ ಮನೆಯವರಿಗೆ ಸಲಹೆ ನೀಡಿದ್ದೇನೆ. ಮೇ 17ರಂದು ಆಕೆ ನನಗೆ ಕರೆ ಮಾಡಿ ಕೆಮ್ಮು, ಶೀತ ಇರುವುದಾಗಿ ಹೇಳಿದಾಗ, ಕೋವಿಡ್ ತಪಾಸಣೆ ಮಾಡಬೇಕೆಂದು ಸಲಹೆ ನೀಡಿದ್ದೆ. ಬಳಿಕ 19ರಂದು ರಾತ್ರಿ ಕರೆ ಮಾಡಿ ಉಸಿರಾಟದ ತೊಂದರೆ ಇರುವ ಬಗ್ಗೆ ತಿಳಿಸಿದ್ದರು. ಆಗಲೂ ಆಸ್ಪತ್ರೆಗೆ ದಾಖಲಾಗಿ ಕೋವಿಡ್ ಟೆಸ್ಟ್ ಮಾಡಿಸುವಂತೆ ಸೂಚನೆ ನೀಡಿದ್ದೆ. ಉಸಿರಾಟದ ತೊಂದರೆಯಿಂದ ಆಕೆಯ ಪರಿಸ್ಥಿತಿ ಹದಗೆಟ್ಟಿದ್ದಾಗ ಇಂತಹ ಪರಿಸ್ಥಿತಿಯಲ್ಲಿ ಉನ್ನತ ಮಟ್ಟದ ಚಿಕಿತ್ಸೆ ಅಗತ್ಯವಿದ್ದು, ನನ್ನ ಕೈ ಮೀರಿದೆ ಎಂದು ಅಗತ್ಯ ಸಲಹೆ ನೀಡಿದ್ದೆ. ಲೇಡಿಗೋಶನ್ ಹಾಗೂ ಕೆಎಂಸಿಯ ಹೆರಿಗೆ ವಿಭಾಗದಲ್ಲಿ ನಾನು ಪ್ರಮುಖ ವೈದ್ಯೆಯಾಗಿರುವ ಕಾರಣ ಅಲ್ಲಿ ವೈದ್ಯರಿಗೆ ಸೂಚನೆ ನೀಡಿ ಸಹಕರಿಸುವಂತೆ ತಿಳಿಸಿದ್ದೆ. ನಾನು ಯಾವ ಆಸ್ಪತ್ರೆಯಲ್ಲೂ ದಾಖಲು ಮಾಡಿಕೊಳ್ಳದಂತೆ ಹೇಳಿಲ್ಲ. ನನ 21 ವರ್ಷದ ಅನುಭವದಲ್ಲಿ ನಾನು ಯಾವ ರೋಗಿಗೂ ತಪ್ಪು ಸಲಹೆ ನೀಡಿಲ್ಲ. ಆದರೆ ಇಂತಹ ಆರೋಪ ಮಾತ್ರ ಜೀರ್ಣಿಸಿಕೊಳ್ಳಲು ಅಸಾಧ್ಯವಾಗುತ್ತಿದೆ ಎಂದರು.
ಜಾಸ್ಮಿನ್ ಗೆ ಲೇಡಿಗೋಶನ್‌ನಲ್ಲಿ ಮೇ 20ರಂದು ರಾತ್ರಿ ಹೆರಿಗೆ ಆದ ಬಳಿಕ ಮೇ 21ರಂದು ಆಕೆಯ ಸಂಬಂಧಿಕರೊಬ್ಬರು ಕರೆ ಮಾಡಿ ಹೆರಿಗೆಯಾಗಿದ್ದು, ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿಸಿ ಧನ್ಯವಾದ ಅರ್ಪಿಸಿದ್ದಾರೆ. ಆದರೆ ಇದೀಗ ಇವೆಲ್ಲದಕ್ಕೂ ಭಿನ್ನವಾಗಿ ನನ್ನ ಮೇಲೆ ಆಪಾದಿಸುವುದನ್ನು ನಾನು ನಿರೀಕ್ಷಿಸಿರಲಿಲ್ಲ’’ ಎಂದು ಹೇಳಿದರು.
‘‘ನಾನು ಐಸಿಯು, ವೆಂಟಿಲೇಟರ್ ತಜ್ಞ. ನಾನು ಹಣ ಮಾಡಬೇಕೆಂದು ಈ ವೃತ್ತಿಗೆ ಬಂದಿದ್ದರೆ ನಾನು ವಿದೇಶದಲ್ಲೋ ಯಾವುದೋ ದೊಡ್ಡ ಸಂಸ್ಥೆಯಲ್ಲಿ ಇರುತ್ತಿದ್ದೆ. ಆದರೆ ನನ್ನ ಸೇವೆ ನನ್ನ ಊರಿನವರಿಗೆ ಸಿಗಬೇಕೆಂಬ ನೆಲೆಯಲ್ಲಿ ನಾನು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಈ ಘಟನೆಯ ದಿನದಂದೂ ನಾನು ಸುರತ್ಕಲ್ ಮುಕ್ಕದ ಆಸ್ಪತ್ರೆಯಲ್ಲಿ ಒ.ಟಿ.ಯಲ್ಲಿದ್ದಾಗ ನನಗೆ ಸುಹೈಲ್ ಕಂದಕ್ ಎಂಬವರಿಂದ ಕರೆ ಬಂದು ಕೋವಿಡ್ ಸೋಂಕಿತ ಗರ್ಭಿಣಿ ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಇದ್ದಾರೆ ಎನ್ನುವಾಗ ನಾನು ಮಾನವೀಯತೆಯ ನೆಲೆಯಲ್ಲಿ ಖುದ್ದು ಮಂಗಳಾ ಆಸ್ಪತ್ರೆಗೆ ಆಗಮಿಸಿ ತುರ್ತು ಚಿಕಿತ್ಸೆ ನೀಡಿದ್ದೇನೆ. ಆದರೆ ಇದೀಗ ವಿನಾ ಕಾರಣ ನನ್ನನ್ನು ಈ ಪ್ರಕರಣದಲ್ಲಿ ಎಳೆದುಹಾಕಿರುವುದು ನನಗೆ ನನ್ನ ವೃತ್ತಿಯ ಬಗ್ಗೆಯೇ ಜಿಗುಪ್ಸೆ ಹುಟ್ಟಿಸಿದೆ’’ ಎಂದು ಅಸಮಾಧಾನ ವ್ಯಕ್ತಪಡಿಸಿದ ಡಾ.ಜಯಪ್ರಕಾಶ್, ‘‘ನನ್ನ ಮೇಲೆ ಮಾಡಿರುವ ಆರೋಪದ ಕುರಿತಂತೆ ಅದು ನ್ಯಾಯಾಲಯಕ್ಕೆ ಸಂಬಂಧ ಪಟ್ಟ ವಿಷಯವಾದ್ದರಿಂದ ನಾನು ಅಲ್ಲೇ ಉತ್ತರ ನೀಡುತ್ತೇನೆ’’ ಎಂದರು.
ಉಪಸ್ಥಿತರಿದ್ದ ಡಾ.ಮುರಳಿ ಮಾತನಾಡಿ, ಕೋವಿಡ್ ಪ್ರಥಮ ಅಲೆಯಿಂದ ದ್ವಿತೀಯ ಅಲೆಯ ಸಂದರ್ಭದಲ್ಲೂ ನಾನು ವೆನ್ಲಾಕ್‌ನಲ್ಲಿ ನನ್ನ ಮನೆಯವರಿಂದಲೂ ದೂರವಿದ್ದು ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ಈ ಪ್ರಕರಣದಲ್ಲಿಯೂ ಆ ಮಹಿಳೆ ಹಾಗೂ ಆಕೆಯ ಮನೆಯವರಿಗೆ ಧೈರ್ಯ ತುಂಬಿದ್ದೇನೆಯೇ ಹೊರತು ಅವರು ಆಪಾದಿಸಿರುವಂತೆ ನಡೆದುಕೊಂಡಿಲ್ಲ. ಅಲ್ಲಿ ನಾನು ಮಾಸ್ಕ್ ತೆಗೆಸಿದ್ದೇನೆ ಎಂದು ಆರೋಪಿಸಲಾಗಿದೆ. ಐಸಿಯು ವಾರ್ಡ್‌ನಲ್ಲಿ ಸಿಸಿಟಿವಿ ಕ್ಯಾಮರಾ ಇದೆ. ಅದರ ದಾಖಲೆ ಸೇರಿಂತೆ ನನ್ನ ಎಲ್ಲಾ ನಿವೇದನೆಯನ್ನು ನಾನು ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಪಟ್ಟವರಿಗೆ ನೀಡಿದ್ದೇನೆ’’ ಎಂದರು.
ಪ್ರಕರಣಕ್ಕೆ ಸಂಬಂಧಿಸಿ ಸೂಕ್ತ ತನಿಖೆಯಾಗಬೇಕು ಹಾಗೂ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಬೇಕು. ಕೋವಿಡ್‌ನಂತಹ ಈ ಕ್ಲಿಷ್ಟಕರ ಸಂದರ್ಭದಲ್ಲಿ ವೈದ್ಯರ ಮೇಲಿನ ಈ ರೀತಿಯ ಆರೋಪಗಳು ಅವರು ಕರ್ತವ್ಯದಿಂದ ಹಿಂದೆ ಸರಿಯುವಂತೆ ಮಾಡುತ್ತಿದೆ ಎಂದು ಇಂಡಿಯಾನ ಆಸ್ಪತ್ರೆಯ ಮುಖ್ಯಸ್ಥರು ಹಾಗೂ ನರ್ಸಿಂಗ್ ಮತ್ತು ಹಾಸ್ಪಿಟಲ್ಸ್ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷ ಡಾ.ಯೂಸುಫ್ ಕುಂಬ್ಳೆ ಹೇಳಿದ್ದಾರೆ.
ತಜ್ಞ ವೈದ್ಯರ ಸಂಘದ ಕಾನೂನು ಸಲಹಾ ಘಟಕದ ಅಧ್ಯಕ, ಡಾ.ಸತೀಶ್ ಭಟ್ ಉಪಸ್ಥಿತರಿದ್ದರು.