ಆನ್‌ಲೈನ್ ಕ್ಲಾಸ್‌ಗಾಗಿ ನಾಡ್ಪಾಲು ಗ್ರಾಮದ ವಿದ್ಯಾರ್ಥಿಗಳಿಗೆ ವೈಫೈ ವ್ಯವಸ್ಥೆ

Update: 2021-06-04 14:33 GMT
ವೈಫೈ ವ್ಯವಸ್ಥೆಯನ್ನು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ವೀಕ್ಷಿಸುತ್ತಿರುವುದು

ಹೆಬ್ರಿ, ಜೂ.4: ಪಶ್ಚಿಮಘಟ್ಟ ತಪ್ಪಲಿನಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಯಿಂದ ಆನ್‌ಲೈನ್ ಕ್ಲಾಸ್‌ಗಳಿಗಾಗಿ ಪರದಾಡುತ್ತಿರುವ ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮ ಪಂಚಾಯತ್ ಆಶಾಕಿರಣವಾಗಿ ಮೂಡಿಬಂದಿದೆ.

ಇಲ್ಲಿನ ವಿದ್ಯಾರ್ಥಿಗಳ ಅಧ್ಯಯನಕ್ಕೆ ಗ್ರಾಪಂ ಕಚೇರಿಯ ಹಾಲ್‌ನಲ್ಲಿ ವೈಫೈ ವ್ಯವಸ್ಥೆ ಕಲ್ಪಿಸಲಾಗಿದೆ.

ಲಾಕ್‌ಡೌನ್‌ನಿಂದ ಇಡೀ ರಾಜ್ಯದ ವಿದ್ಯಾರ್ಥಿಗಳು ಶಾಲಾ ತರಗತಿಯಿಂದ ವಂಚಿತರಾಗಿದ್ದರೆ ಇಲ್ಲಿನ ವಿದ್ಯಾರ್ಥಿಗಳು ತರಗತಿ ಜೊತೆ ನೆಟ್‌ವರ್ಕ್ ಸಮಸ್ಯೆ ಯಿಂದ ಆನ್‌ಲೈನ್ ಕ್ಲಾಸ್‌ಗಳಿಂದಲೂ ವಂಚಿತರಾಗುತ್ತಿದ್ದಾರೆ. ಮನೆಯಲ್ಲಿ ಇಂಟರ್‌ನೆಟ್ ಸಿಗದ ಕಾರಣಕ್ಕೆ ವಿದ್ಯಾರ್ಥಿಗಳು ನೆಟ್‌ವರ್ಕ್ ಹುಡುಕಿಕೊಂಡು ಬಹುದೂರ ಅಲೆದಾಡುವ ಪರಿಸ್ಥಿತಿ ಎದುರಾಗಿದೆ.

ತೀರಾ ಅರಣ್ಯ ಪ್ರದೇಶವಾಗಿರುವ ಈ ಗ್ರಾಮದಲ್ಲಿ ವಿದ್ಯಾರ್ಥಿಗಳು ನೆಟ್ ವರ್ಕ್‌ಗಾಗಿ ಮನೆಯಿಂದ ದೂರ ಹೋಗುವುದು ಕೂಡ ಅಪಾಯ. ಅದರಲ್ಲೂ ವಿದ್ಯಾರ್ಥಿನಿಯರು ರಸ್ತೆ ಬದಿಯಲ್ಲಿ ನಿಂತು ಆನ್‌ಲೈನ್ ಕ್ಲಾಸ್‌ನಲ್ಲಿ ಪಾಲ್ಗೊಳ್ಳುವುದು ಸುರಕ್ಷಿತ ಕೂಡ ಅಲ್ಲ ಎಂಬುದನ್ನು ಮನಗಂಡ ಗ್ರಾಮ ಪಂಚಾಯತ್, ತನ್ನ ಕಚೇರಿ ಹಾಲ್‌ನಲ್ಲಿಯೇ ವೈಫೈ ವ್ಯವಸ್ಥೆ ಕಲ್ಪಿಸಿ ಆನ್‌ಲೈನ್ ತರಗತಿಯಲ್ಲಿ ಪಾಲ್ಗೊಳ್ಳುವಂತೆ ಮಾಡಿದೆ.

ಬೆಳಗ್ಗೆಯಿಂದ ಸಂಜೆವರೆಗೆ ಅವಕಾಶ

ಲಾಕ್‌ಡೌನ್‌ನಿಂದಾಗಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ನಡೆಯದೆ ಇರುವುದರಿಂದ ಹಾಲ್‌ನಲ್ಲಿ ಸುರಕ್ಷಿತ ಅಂತರದಲ್ಲಿ 10 ಮಂದಿ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಡೆಸ್ಕ್ ವ್ಯವಸ್ಥೆ ಮಾಡಿಕೊಡಲಾಗಿದೆ.

ಕಚೇರಿ ಅವಧಿ ಬೆಳಗ್ಗೆ 9ಗಂಟೆಯಿಂದ ಸಂಜೆ 5.30ರವರೆಗೆ ವಿದ್ಯಾರ್ಥಿಗಳು ಆನ್‌ಲೈನ್ ಕ್ಲಾಸ್‌ಗಾಗಿ ವೈಫೈಯನ್ನು ಬಳಸಬಹುದಾಗಿದೆ. ಈ ಮಧ್ಯೆ ಮನೆ ಯಿಂದಲೇ ಬುತ್ತಿ ತಂದು ಇಲ್ಲೇ ಊಟ ಮಾಡಲು ನೀರಿನ ವ್ಯವಸ್ಥೆ ಕೂಡ ಮಾಡಿಕೊಡಲಾಗಿದೆ.

ಕಳೆದ ನಾಲ್ಕೈದು ದಿನಗಳಿಂದ ನೆಟ್‌ವರ್ಕ್ ಸಮಸ್ಯೆ ಅನುಭವಿಸುತ್ತಿರುವ ಗ್ರಾಮದ ಪಿಯುಸಿ, ಇಂಜಿನಿಯರಿಂಗ್ ಹಾಗೂ ಉನ್ನತ ಶಿಕ್ಷಣ ಪಡೆಯುತ್ತಿ ರುವ ವಿದ್ಯಾರ್ಥಿಗಳು ಮತ್ತು ವಿವಿಧ ವೃತ್ತಿಪರ ಪರೀಕ್ಷೆಗೆ ತಯಾರಿ ನಡೆಸುತ್ತಿ ರುವವರು ಕೂಡ ಇದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಆಸಕ್ತ ವಿದ್ಯಾರ್ಥಿಗಳಿಗೆ ವೈಫೈ ಪಾಸ್‌ವರ್ಡ್ ನೀಡಿ ಇಂಟರ್‌ನೆಟ್ ಬಳಕೆಗೆ ಮುಕ್ತ ಅವಕಾಶ ಒದಗಿಸಲಾಗಿದೆ.

ಕಿ.ಮೀ.ಗಟ್ಟಲೆ ಕ್ರಮಿಸುವ ಪಾಡು!

ಗ್ರಾಪಂ ಕಚೇರಿಯಿಂದ ಸುಮಾರು ಮೂರು ಕಿ.ಮೀ. ದೂರದ ಸೀತಾನದಿ ಬಂಡಿಮಠ, ಐದು ಕಿ.ಮೀ. ದೂರದ ಕಾಸನಮಕ್ಕಿ, 6-7 ಕಿ.ಮೀ. ದೂರದ ನೆಲ್ಲಿಕಟ್ಟೆಯ ವಿದ್ಯಾರ್ಥಿಗಳು ಇಲ್ಲಿಗೆ ಆಗಮಿಸಿ ವೈಫೈ ಬಳಕೆ ಮಾಡುತ್ತಿದ್ದಾರೆ.

ಈ ಗ್ರಾಮದ ಬಹುತೇಕ ಭಾಗದಲ್ಲಿ ಮೊಬೈಲ್ ನೆಟ್‌ವರ್ಕ್ ಸಿಗುತ್ತಿಲ್ಲ. ಆಗುಂಬೆ ಘಾಟಿಯಲ್ಲಿ ಬಿಎಸ್‌ಎನ್‌ಎಲ್ ಒಂದು ಟವರ್ ಇದ್ದು, ಸೋಮೇಶ್ವರ ಹೋದರೆ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಿಗುತ್ತದೆ. ಇದಕ್ಕಾಗಿ ಇಲ್ಲಿನ ಕೆಲವು ವಿದ್ಯಾರ್ಥಿಗಳು ದ್ವಿಚಕ್ರ ವಾಹನಗಳಲ್ಲಿ ಸೋಮೇಶ್ವರ, ಆಗುಂಬೆ ಘಾಟಿಗಳಿಗೆ ತೆರಳಿ ನೆಟ್‌ವರ್ಕ್ ಬಳಕೆ ಮಾಡುತ್ತಿದ್ದಾರೆ.

''ನಮ್ಮ ಗ್ರಾಪಂ ವ್ಯಾಪ್ತಿಯ ವಿದ್ಯಾರ್ಥಿಗಳ ಸಂಕಷ್ಟ ಅರ್ಥಮಾಡಿಕೊಂಡು ತಹಶೀಲ್ದಾರ್ ಜೊತೆ ಚರ್ಚಿಸಿ, ಗ್ರಾಪಂ ಅಧ್ಯಕ್ಷರ ಸಹಕಾರದೊಂದಿಗೆ ಈ ವ್ಯವಸ್ಥೆ ಮಾಡಲಾಗಿದೆ. ನಮ್ಮ ಗ್ರಾಮದ ವಿದ್ಯಾರ್ಥಿಗಳು ಮಾತ್ರವಲ್ಲದೆ ನೆರೆಯ ಗ್ರಾಮದ ವಿದ್ಯಾರ್ಥಿಗಳು ಕೂಡ ಇಲ್ಲಿಗೆ ಆಗಮಿಸಿ ವೈಫೈ ಪ್ರಯೋಜನ ಪಡೆಯಬಹುದು. ಅದೇ ರೀತಿ ವರ್ಕ್ ಫ್ರಂ ಹೋಮ್ ಮಾಡುವವರು ಕೂಡ ಇಲ್ಲಿಗೆ ಬರಬಹುದು''.
-ಪುರಂದರ ಎಸ್., ಪಿಡಿಓ, ನಾಡ್ಪಾಲು ಗ್ರಾಪಂ 

''ನಾನು ದ್ವಿತೀಯ ಪಿಯುಸಿಯಲ್ಲಿ ಕಲಿಯುತ್ತಿದ್ದೇನೆ. ನಮ್ಮ ಮನೆ ಸಮೀಪ ಎಲ್ಲೂ ನೆಟ್‌ವರ್ಕ್ ಸಿಗುವುದಿಲ್ಲ. ಆದುದರಿಂದ ಮೂರು ಕಿ.ಮೀ. ದೂರದಲ್ಲಿ ರುವ ಗ್ರಾಪಂಗೆ ವೈಫೈ ಬಳಕೆಗಾಗಿ ಬರುತ್ತಿದ್ದೇವೆ. ಸಂಜೆಯವರೆಗೆ ಇಲ್ಲೇ ಇರುತ್ತೇನೆ. ಇಲ್ಲದಿದ್ದರೆ ನಮಗೆ ನೆಟ್‌ವರ್ಕ್ ಸಿಗಬೇಕಾಗದೆ 8-10 ಕಿ.ಮೀ. ದೂರದ ಹೆಬ್ರಿ ಪೇಟೆಗೆ ಹೋಗಬೇಕಾಗುತ್ತದೆ''.

-ಅದಿತಿ ಸೀತಾನದಿ, ವಿದ್ಯಾರ್ಥಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News