ಉಡುಪಿ: ಕೋವಿಡ್ ಗೆ 3 ಬಲಿ; 561 ಮಂದಿಗೆ ಕೊರೋನ ಪಾಸಿಟಿವ್
ಉಡುಪಿ, ಜೂ.4: ಗುರುವಾರ ಶೂನ್ಯದ ಬಳಿಕ ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ಕೊರೋನಕ್ಕೆ ಮೂವರು ಬಲಿಯಾಗಿರುವ ವರದಿ ಬಂದಿದೆ. ಇದರಿಂದ ಸೋಂಕಿಗೆ ಮೃತಪಟ್ಟವರ ಒಟ್ಟು ಸಂಖ್ಯೆ 341ಕ್ಕೇರಿದೆ. ದಿನದಲ್ಲಿ 561 ಮಂದಿ ಪಾಸಿಟಿವ್ ಬಂದಿದ್ದು, 585 ಮಂದಿ ಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ ಈಗ 4506 ಆಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ.
ದಿನದಲ್ಲಿ ಇಬ್ಬರು ಪುರುಷರು (66, 89ವರ್ಷ) ಹಾಗೂ 85 ವರ್ಷದ ಓರ್ವ ಮಹಿಳೆ ಸೋಂಕಿಗೆ ಬಲಿಯಾಗಿದ್ದಾರೆ. ಇವರಲ್ಲಿ ಇಬ್ಬರು ಕಾರ್ಕಳ ತಾಲೂಕಿನವರಾದರೆ, ಒಬ್ಬರು ಉಡುಪಿಯವರು. ಪುರುಷರಿಬ್ಬರೂ ಶುಕ್ರವಾರ ಹಾಗೂ ಮಹಿಳೆ ಗುರುವಾರ ಖಾಸಗಿ ಆಸ್ಪತ್ರೆಗಳಲ್ಲಿ ಮೃತರಾದರು. ಎಲ್ಲರೂ ಕೊರೋನ ಗುಣಲಕ್ಷಣದೊಂದಿಗೆ ಉಸಿರಾಟದ ತೊಂದರೆಯಿಂದ ಬಳಲುತಿದ್ದರು.
ಜಿಲ್ಲೆಯಲ್ಲಿ ಗುರುವಾರ ಪಾಸಿಟಿವ್ ಬಂದ 561 ಮಂದಿಯಲ್ಲಿ 275 ಮಂದಿ ಪುರುಷರು ಹಾಗೂ 286 ಮಂದಿ ಮಹಿಳೆಯರು. ಇವರಲ್ಲಿ ಉಡುಪಿ ತಾಲೂಕಿನ 227, ಕುಂದಾಪುರ ತಾಲೂಕಿನ 226 ಹಾಗೂ ಕಾರ್ಕಳ ತಾಲೂಕಿನ 106 ಮಂದಿ ಇದ್ದು, ಉಳಿದ ಐವರು ಹೊರಜಿಲ್ಲೆಯವರು. ಇವರಲ್ಲಿ 9 ಮಂದಿ ಕೋವಿಡ್ ಆಸ್ಪತ್ರೆ ಹಾಗೂ 552 ಮಂದಿ ಹೋಮ್ ಐಸೋಷನ್‌ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
ಗುರುವಾರ 585 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 56,392ಕ್ಕೇರಿದೆ. ನಿನ್ನೆ ಜಿಲ್ಲೆಯ 3326 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 61,239 ಆಗಿದೆ. ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 6,05,390 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿ ಸಲಾಗಿದೆ ಎಂದು ಡಾ.ಉಡುಪ ತಿಳಿಸಿದರು.